ಧಾರವಾಡ
ಸಿಖ್ಖ ಧರ್ಮಿಯರಿಗೆ ಅಮೃತಸರ, ಬೌದ್ಧರಿಗೆ ಬುದ್ದಗಯಾ, ಮುಸಲ್ಮಾನರಿಗೆ ಮೆಕ್ಕಾ, ಲಿಂಗಾಯತ ಧರ್ಮಿಯರಿಗೆ ವಿಶ್ವಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲ ಸಂಗಮವು ಪವಿತ್ರ ಸ್ಥಳವಾಗಿದೆ. ಪ್ರತಿಯೊಬ್ಬ ಬಸವಧರ್ಮ ಅನುಯಾಯಿ ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಕೂಡಲ ಸಂಗಮದಲ್ಲಿ ನಡೆಯುವ ಶರಣ ಮೇಳದಲ್ಲಿ ಪಾಲ್ಗೊಳ್ಳಲೇಬೇಕು ಎಂದು ಬಸವಧರ್ಮ ಪೀಠದ ಅಧ್ಯಕ್ಷರಾದ ಶ್ರೀ ಮಾತೆ ಗಂಗಾದೇವಿ ಹೇಳಿದರು.
ರಾ.ಹ. ದೇಶಪಾಂಡೆ ಸಭಾ ಭವನದಲ್ಲಿ ವಿಶೇಷ ವಿಶ್ವಧರ್ಮ ಪ್ರವಚನ ವೇದಿಕೆಯಲ್ಲಿ ೩೮ ನೇ ಶರಣ ಮೇಳದ ಪ್ರಚಾರಾರ್ಥ ಸಭೆಯನ್ನುದ್ದೇಶಿಸಿ ಮಾತನಾಡಿ, ವಿಶ್ವಗುರು ಬಸವಣ್ಣನವರ ಪಾದಸ್ಪರ್ಶದಿಂದಾಗಿ ಮಹಾಮಹಿಮ ಸಂಗನ ಬಸವಣ್ಣನು ಪಾದವಿಟ್ಟುದು ಅವಿಮುಕ್ತ ಕ್ಷೇತ್ರ ಎಂದು ಜಗನ್ಮಾತೆ ಅಕ್ಕಮಹಾದೇವಿ ನುಡಿದ ಪ್ರಕಾರ ಕೂಡಲ ಸಂಗಮವು ತಪೋಸ್ಥಾನ ಐಕ್ಯಕ್ಷೇತ್ರವಾಗಿ ಇಂದು ಕಂಗೊಳಿಸುತ್ತಿದೆ. ತನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ವೀಕರಿಸದೆ ಇರುವವರು ಪ್ರಾಮಾಣಿಕ ಲಿಂಗಾಯತನಾಗಲ್ಲ, ವರ್ಷಕ್ಕೊಮ್ಮೆಯಾದರೂ ಬಸವಧರ್ಮಿ, ಲಿಂಗಾಯತರು ಕೂಡಲ ಸಂಗಮಕ್ಕೆ ಬಂದು ಗಣಲಿಂಗ ದರ್ಶನವನ್ನು ಮಾಡಬೇಕು ಎಂದು ಹೇಳಿದರು.
ಶ್ರೀ ಲಿಂಗಾನಂದ ಸ್ವಾಮಿಜಿ ಅವರು ರಾಜ್ಯ ಅಂತರಾಜ್ಯಾದ್ಯಂತ ಸಂಚರಿಸಿ ಬಸವಧರ್ಮ ಪ್ರವಚನ ಮಾಡಿ ಜನರಿಗೆ ವಚನಗಳ ಸಂದೇಶ ನೀಡಿದ್ದಾರೆ. ಕಾಲಾ ನಂತರ ಎಲ್ಲಾ ಕಡೆಗೂ ಬಸವತತ್ವ ಅನುಯಾಯಿಗಳು, ಮಠಗಳು ಹಾಗೂ ಸಾಹಿತಿಕಾರರು ವಚನ ಪ್ರಚಾರ ಮಾಡುವ ಆಸಕ್ತಿ ಹೊಂದಿದ್ದಾರೆ. ಬಸವಧರ್ಮ ಪೀಠದಿಂದ ನಡೆಯುವ ಶರಣ ಮೇಳ, ಕಲ್ಯಾಣ ಪರ್ವ, ಶರಣೋತ್ಸವ ಹಾಗೂ ಮತ್ತಿತರ ಕಾರ್ಯಕ್ರಮ ಮೂಲಕ ಬಸವಣ್ಣನವರ ಹಾಗೂ ಶರಣರ ಸಂದೇಶವನ್ನು ಜನಮನಕ್ಕೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಬಾರಿ ನಡೆಯುವ ಶರಣ ಮೇಳದಲ್ಲಿ ಸಾಮೂಹಿಕ ಪ್ರಾರ್ಥನೆ, ಲಿಂಗಪೂಜೆ, ಗಣಲಿಂಗ ದರ್ಶನ, ಧರ್ಮಚಿಂತನ ಗೋಷ್ಠಿ, ಧಾರ್ಮಿಕ ರಸಪ್ರಶ್ನೆ, ಪಥಸಂಚಲನ, ಉಪನ್ಯಾಸ ಸಮಾರಂಭಗಳು ಜರುಗಲಿವೆ. ಅಂದಾಜು ೫ ಲಕ್ಷಕ್ಕೂ ಹೆಚ್ಚು ಬಸವಭಕ್ತರು ಭಾಗವಹಿಸುವ ನೀರಿಕ್ಷೆಯಿದ್ದು ಎಲ್ಲರಿಗೂ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ, ತಾವೆಲ್ಲರೂ ತಪ್ಪದೆ ಬರಬೇಕೆಂದರು.
ಡಾ.ವೀಣಾ ಬಿರಾದಾರ ಅನುಭಾವ ನುಡಿಗಳನ್ನಾಡಿ, ೧೨ ನೇ ಶತಮಾನದಲ್ಲಿ ಶರಣರು ರಚಿಸಿದ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿದ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರನ್ನು ಹಾಗೂ ವಚನ ಸಾಹಿತ್ಯ ಮತ್ತು ಬಸವಾದಿ ಶರಣರ ಸಮಗ್ರ ಚರಿತ್ರೆ ಮತ್ತು ಇತಿಹಾಸವನ್ನು ನಾಡಿಗೆ ಪರಿಚಯಿಸಿದ ಪ್ರವಚನ ಪಿತಾಮಹ ಶ್ರೀ ಲಿಂಗಾನಂದ ಸ್ವಾಮೀಜಿ ಅವರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ಶರಣ ಮೇಳವು ಲಿಂಗಾಯತರ ಹಾಗೂ ಬಸವಧರ್ಮದವರ ಜಾಗತಿಕ ಉತ್ಸವವಾಗಿದ್ದು, ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿದೆ. ಇದರಲ್ಲಿ ಸರ್ವರೂ ಪಾಲ್ಗೋಳ್ಳುವುದು ಅವಶ್ಯಕ ಎಂದರು.
ಅನಿಮಿಷಾನಂದ ಸ್ವಾಮೀಜಿ, ಚನ್ನಬಸವರಾಜ ಸ್ವಾಮೀಜಿ, ಮಾತೆ ಬಸವರತ್ನಾ ಸಮ್ಮುಖವಹಿಸಿದ್ದರು.
ದೇವಪ್ಪ ಗಾಳಿ ಅಧ್ಯಕ್ಷತೆ ವಹಿಸಿದ್ದರು, ಪಾಲಿಕೆ ಸದಸ್ಯೆ ಮೀನಾಕ್ಷಿ ಒಂಟಮುರಿ, ಬಸವ ಕೇಂದ್ರ ಅಧ್ಯಕ್ಷ ಸಿದ್ದರಾಮಣ್ಣ ನಡಕಟ್ಟಿ, ಶಿವಾನಂದ ಲೋಲೆನವರ, ಬಸವಂತ ತೋಟದ, ಸ್ಮೀತಾ ಶಂಕರ ಶೇಟ, ರಾಷ್ಟ್ರೀಯ ಬಸವದಳದ ಮಲ್ಲೇಶಪ್ಪ ಕುಸುಗಲ್ಲ ಉಪಸ್ಥಿತರಿದ್ದರು.
ಕೆ.ಎಸ್. ಕೋರಿಶೆಟ್ಟರ ಸ್ವಾಗತಿಸಿದರು, ಸವಿತಾ ಕುಸುಗಲ್ಲ ನಿರೂಪಿಸಿದರು, ಎಸ್.ಎಲ್. ಗೌಡರ ವಂದಿಸಿದರು.