ಶರಣರು-ದಾರ್ಶನಿಕರ ತೌಲನಿಕ ಅಧ್ಯಯನ ಅಗತ್ಯ: ಬಾಳಿ

ಕಲಬುರಗಿ

ವಚನಗಳ ಅಧ್ಯಯನ ಬಹಳ ವಿಸ್ತೃತವಾಗಿ ನಡೆಯುತ್ತಿದ್ದು, ವಚನಗಳ ಸಾರ, ಸತ್ವ, ವಿಶ್ಯಾದ್ಯಾಂತ ತಲುಪಿಸುವುದರ ಜೊತೆಗೆ ಜಗತ್ತಿನ ದಾರ್ಶನಿಕರ ಜೊತೆ ಅಧ್ಯಯನಕ್ಕೊಳಪಡಿಸುವ ಕೆಲಸ ಆಗಬೇಕಿದೆ ಎಂದು ಶರಣ ಚಿಂತಕಿ ಡಾ. ಮೀನಾಕ್ಷಿ ಬಾಳಿ ಅಭಿಪ್ರಾಯಪಟ್ಟರು.

ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿ ಜಿಲ್ಲಾ ಘಟಕ, ನಗರದ ಬಸವ ಮಂಟಪದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ೫ನೇ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಗತ್ತನ್ನು ಆಳುವ ಶಕ್ತಿ ಹೊಂದಿರುವ ವಚನಗಳನ್ನು ಬೇರೆ ಬೇರೆ ನೆಲೆ, ನಿಟ್ಟಿನಲ್ಲಿ ಚರ್ಚಿಸಬೇಕು ಎಂದು ತಿಳಿಸಿದರು.

ತ್ಯಾಗವೀರ ಸಿರಸಂಗಿ ಲಿಂಗರಾಜರು, ಶಿವಯೋಗಿ ಸಿದ್ಧರಾಮೇಶ್ವರರು, ನಿಜಶರಣ ಅಂಬಿಗರ ಚೌಡಯ್ಯ, ಮೇದಾರ ಕೇತಯ್ಯನವರ ಕುರಿತು ಪತ್ರಕರ್ತ- ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ವಿಶೇಷ ಉಪನ್ಯಾಸ ನೀಡಿ, ಸಮಾಜಕ್ಕಾಗಿ ಸಾಮ್ರಾಜ್ಯವನ್ನು ಕೊಟ್ಟ ಕೃಷಿ, ಉದ್ಯೋಗ, ಸಾಮಾಜಿಕ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಅರಿವು, ಆಚಾರ, ಅನುಭಾವ ಮುಂತಾದ ನೈತಿಕ ಮೌಲ್ಯಗಳನ್ನು ಒಳಗೊಂಡ ಸಿದ್ಧರಾಮೇಶ್ವರರ ವಚನಗಳು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂತಿವೆ, ನೇರ ನುಡಿಯ ನಿಷ್ಠುರ ವಚನಕಾರ ಅಂಬಿಗರ ಚೌಡಯ್ಯನವರಿಂದ ವಚನ ಕ್ರಾಂತಿಗೆ ಮತ್ತಷ್ಟು ಬಲ ಬಂದಿತು. ಲಿಂಗವೆಂಬ ನಾಲ್ಕು ಕೈಕಾಲುಗಳಿಗೆ ಕಾಯಕ-ದಾಸೋಹವೆಂಬ ದಾರದಿಂದ ಬಂಧಿಸಿದಾಗ ಅದು ಲಿಂಗವಳಿದು ಪರಮಾತ್ಮನೊಂದಿಗೆ ಸೇರುತ್ತದೆ ಎಂದು ಮೇದಾರ ಕೇತಯ್ಯನವರು ತಿಳಿಸಿದ್ದಾರೆ ಎಂದು ಶರಣರ ಇತಿವೃತ್ತಗಳನ್ನು ತಿಳಿಸಿಕೊಟ್ಟರು.

ಇದೇ ವೇಳೆಯಲ್ಲಿ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಡಾ. ಮೀನಾಕ್ಷಿ ಬಾಳಿ ಅವರನ್ನು ಸನ್ಮಾನಿಸಲಾಯಿತು. ಶರಣ ಚಿಂತಕ ಮಲ್ಲಣ್ಣ ನಾಗರಾಳ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಕೋಣಿನ ನಿರೂಪಿಸಿದರು. ಶಿವಕುಮಾರ ಬಿದರಿ ವಂದಿಸಿದರು. ಶಾರದಾ ಜಂಬಲದಿನ್ನಿ ಪ್ರಾರ್ಥನೆಗೀತೆ ಹಾಡಿದರು. ರವೀಂದ್ರ ಶಾಬಾದಿ, ರಮೇಶ ಧುತ್ತರಗಿ, ಹಣಮಂತ ಕುಸನೂರ, ಅನಸೂಯಾ ನಡಕಟ್ಟಿ, ಬಸವರಾಜ ದೂಳಾಗುಂಡಿ, ಬಸವರಾಜ ಬಾವಿ, ಅಶೋಕ ಘೂಳಿ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *