ಧಾರವಾಡ
ಮಾನವರ ಮಧ್ಯೆ ಸಮಾನತೆ ತರುವ ಮಹತ್ತರ ಉದ್ದೇಶದಿಂದ ಅಹಿಂಸಾ ಮಾರ್ಗದ ಮೂಲಕ ವಿಶ್ವದಲ್ಲಿ ಆರಂಭವಾದ ಮೊದಲ ಸಮತಾ ಚಳುವಳಿ ಎಂಬ ಕೀರ್ತಿ ವಚನ ಚಳುವಳಿಗೆ ಲಭಿಸಿದೆ ಎಂದು ಮುನವಳ್ಳಿ ಶ್ರೀ ಸೋಮಶೇಖರ ಮಠದ ಪೀಠಾಧ್ಯಕ್ಷ ಶ್ರೀ ಮುರುಘೇಂದ್ರ ಸ್ವಾಮಿಜಿ ಅಭಿಪ್ರಾಯಪಟ್ಟರು.
ಶಹರದ ರೇಣುಕಾ ನಗರ ಬಸವ ಬೆಳಗು ಸಭಾಂಗಣದಲ್ಲಿ ಎ.ಜೆ. ಕಾಲೇಜು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಬಾಗೇವಾಡಿ ಅವರು ರಚಿಸಿದ ಶರಣರ ದಿವ್ಯವಾಣಿ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಶರಣ ತತ್ವದ ಪ್ರಕಾರ ಸರ್ವಸಮತ್ವವನ್ನು ಸಾಧಿಸಿ ವಿಶ್ವಮಾನವನಾಗುವವನೆ ಭಕ್ತ, ಅಂತವನ ಮಾತುಗಳು ಎಲ್ಲ ಜೀವಿಗಳ ಪರವಾಗಿರುತ್ತವೆ ಎಂದು ಶರಣರು ವಾಕಸ್ವರೂಪವನ್ನು ವರ್ಣಿಸಿದ್ದಾರೆ. ಜಗತ್ತಿನ ಕಲ್ಯಾಣಕ್ಕಾಗಿ ಸಮಾಜದ ಉದ್ದಾರಕ್ಕಾಗಿ ಯಾರೂ ಸತ್ಕಾರ್ಯ ಮಾಡುತ್ತಾರೋ ಅಂತವರು ಮಹಾತ್ಮರು, ಮಾರ್ಗದರ್ಶಕರು ಆಗುತ್ತಾರೆ. ಸಮಾಜಕ್ಕೆ ಉತ್ತಮ ಮಾರ್ಗರ್ದಶನ ಮಾಡುತ್ತಾರೋ, ಯಾರು ಸತ್ಕಾರ್ಯ ಮಾಡುತ್ತಾರೋ ಅವರನ್ನು ಮಹಾತ್ಮರೆಂದು ಕರೆಯುತ್ತೇವೆ. ಇದು ಎಲ್ಲರಲ್ಲಿ ಜಾಗೃತಗೊಂಡರೆ ಶರಣ ಧರ್ಮ ಪಾಲನೆ ಮಾಡಿದಂತಾಗುತ್ತದೆ ಎಂದರು.
ಸಂಶೋಧಕ ಡಾ. ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಧಶ್ರದ್ಧಾ, ಮೂಢನಂಬಿಕೆ, ಕಂದಾಚಾರಗಳಿಂದ ಹೊರಬಂದು ಸಕಲ ಮಾನವರ ಸೇವೆ ಮಾಡಬೇಕು. ಜಂಗಮ, ದಾಸೋಹ ತಿಳಿದು ಶರಣರ ಸಂಗ ಹಾಗೂ ಧರ್ಮ ಸ್ತೋತ್ರಗಳಾದ ಶರಣರ ವಚನಗಳ ಅಧ್ಯಯನ ಮಾಡಬೇಕು, ವರ್ತನೆಯಲ್ಲಿ ಪರಿವರ್ತನೆಯಾಗಬೇಕು, ಅಂದಾಗ ಮಾತ್ರ ಇಂತಹ ಗ್ರಂಥ ರಚನೆ ಮಾಡಲು ಸಾದ್ಯವಾಗುತ್ತದೆ ಎಂದರು.
ಡಾಕ್ಟರೇಟ್ ಪದವಿ ಪಡೆದ ಡಾ. ಮಾರ್ಕಾಂಡೇಯ ದೊಡಮನಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ರಂಜಾನ ದರ್ಗಾ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರವಿಕುಮಾರ ಕಗ್ಗಣ್ಣವರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಬಸವ ಕೇಂದ್ರದ ಅಧ್ಯಕ್ಷ ಸಿದ್ದರಾಮಣ್ಣ ನಡಕಟ್ಟಿ, ಶಿವಣ್ಣ ಶರಣ್ಣವರ, ಎಂ.ಆರ್. ಗೋಪಶೆಟ್ಟಿ, ರವೀಂದ್ರ ಯಲಿಗಾರ ವೇದಿಕೆ ಮೇಲಿದ್ದರು.
ಡಾ.ಶಂಭುಲಿಂಗ ಹೆಗಡಾಳ ಕೃತಿ ಪರಿಚಯಿಸಿದರು. ಡಾ. ಮಲ್ಲಿಕಾರ್ಜುನ ಬಾಗೇವಾಡಿ ಸ್ವಾಗತಿಸಿದರು. ಶಿವನಗೌಡ ಪಾಟೀಲ ನಿರೂಪಿಸಿದರು. ಬಸವಂತ ತೋಟದ ವಂದಿಸಿದರು.