ರಾಯಚೂರು
ನಗರದ ಬಸವ ಕೇಂದ್ರದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಹಾಪುರ ಬಸವಮಾರ್ಗದ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿದರು.
ಬಸವಾದಿ ಶರಣರು ಸರ್ವಕಾಲಿಕ. ಶಿವಶರಣರ ಸ್ಮರಣೆ ಮಾಡುವುದರೊಂದಿಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳು ಸಾರ್ಥಕವೆಂದು ಹೇಳಿದರು.
ಇಂದು ಶರಣರ ವಚನಗಳನ್ನು, ಅವರ ಆದರ್ಶಗಳನ್ನು ವಿಶ್ವವೇ ಅಧ್ಯಯನ ಮಾಡುತ್ತಿದೆ. ಈ ಕಾರಣಕ್ಕಾಗಿ ನಮ್ಮ ಘನ ಸರ್ಕಾರ ಜಗಜ್ಯೋತಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ನಮಗೆಲ್ಲ ತಿಳಿದ ವಿಷಯ.
ಅಪ್ಪಣ್ಣನವರ ಹಲವಾರು ಮಹತ್ವದ ಘಟನೆಗಳನ್ನು ಕುರಿತು ಹೇಳುತ್ತಾ, ಬಸವಣ್ಣನವರ ನಿರ್ದೇಶನದ ಮೇರೆಗೆ ನೀಲಮ್ಮನವರನ್ನು ಕೂಡಲಸಂಗಮಕ್ಕೆ ಕರೆದುಕೊಂಡು ಬರುವಾಗ ಬಸವಣ್ಣನವರು ಜಂಗಮೈಕ್ಯರಾದ ವಿಷಯ ತಿಳಿದು ನೀಲಮ್ಮ ತಾಯಿಯವರು ತಂಗಡಿಗೆಯಲ್ಲಿ ಐಕ್ಯರಾಗುತ್ತಾರೆ. ಇದರಿಂದ ಮನನೊಂದು ಹಡಪದ ಅಪ್ಪಣ್ಣನವರು ಕೂಡ ಲಿಂಗೈಕರಾದರೆಂದು ತಿಳಿಸಿ, ಅವರಿರುವ ಸಮಾಧಿಗಳನ್ನು ವಿಜಾಪುರ ಜಿಲ್ಲೆಯ ತಂಗಡಗಿಯಲ್ಲಿ ಕಾಣಬಹುದೆಂದು ಸತ್ಯಂಪೇಟೆ ತಿಳಿಸಿದರು.

ಅಧ್ಯಕ್ಷತೆಯನ್ನು ಬಸವ ಕೇಂದ್ರದ ಗೌರವಾಧ್ಯಕ್ಷ ಹರವಿ ನಾಗನಗೌಡರು ವಹಿಸಿದ್ದರು. ಸತ್ಯಂಪೇಟೆ ಅವರನ್ನು ಕೇಂದ್ರದ ಪರವಾಗಿ ಸತ್ಕರಿಸಲಾಯಿತು.
ವಚನ ಗಾಯನವನ್ನು ನಾಗೇಶ್ವರಪ್ಪ, ಎಸ್. ಶಂಕರಗೌಡರು ಹಾಗೂ ಸಂಗಡಿಗರು ಮಾಡಿದರು. ಸಾಮೂಹಿಕ ಬಸವ ಪ್ರಾರ್ಥನೆಯನ್ನು ಶರಣೆ ಪೂರ್ಣಿಮಾ ನಡೆಸಿಕೊಟ್ಟರು. ಶರಣೆ ಸರೋಜಾ ಮಾಲಿಪಾಟೀಲ ಸ್ವಾಗತಿಸಿದರು.
ಮಹಾದೇವಪ್ಪ ಏಗನೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶರಣೆ ಲಲಿತಾ ಮಲ್ಲಿಕಾರ್ಜುನ ಗುಡಿಮನಿಯವರು ಶರಣು ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಜೆ. ಬಸವರಾಜ, ನಾಗರಾಜ ಪಾಟೀಲ, ಬಸವರಾಜ ಕುರಗೋಡ, ಸಿ.ಬಿ. ಪಾಟೀಲ, ವೆಂಕಣ್ಣ ಆಶಾಪುರ, ಶಾಲಿಕಾ ಹನುಮಂತಪ್ಪ, ಅಮರೇಶ ಅಮೀನಗಡ ಮುಂತಾದವರು ಉಪಸ್ಥಿತರಿದ್ದರು.