ಉಡುಪಿ:
“ಶರಣರ ಶಕ್ತಿ” ಕನ್ನಡ ಚಲನಚಿತ್ರದ ಪ್ರದರ್ಶನವನ್ನು ತಡೆಹಿಡಿಯಬೇಕೆಂದು ಜಗನ್ನಾಥಪ್ಪ ಪನಸಾಲೆ ಜನವಾಡಾ, ಪೀಠಾಧಿಪತಿಗಳು, ಅಲ್ಲಮಪ್ರಭು ಅನುಭಾವ ಪೀಠ, ಮಹಾಜಗದ್ಗುರು ಬಸವಣ್ಣ ಚಾರಿಟೇಬಲ್ ಟ್ರಷ್ಟ, ಉಡುಪಿ, ಪಶ್ಚಿಮ ಕರಾವಳಿ ಅವರು ಸರಕಾರಕ್ಕೆ ಬಹಿರಂಗ ಪತ್ರ ಬರೆದು ಮನವಿ ಮಾಡಿದ್ದಾರೆ.
ಅವರ ಪತ್ರದ ಸಾರಂಶ:
ಈ ಮೂಲಕ ತಮ್ಮಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, “ಶರಣರ ಶಕ್ತಿ” ಎಂಬ ಕನ್ನಡ ಚಲನಚಿತ್ರದ ಟ್ರೇಲರಗಳನ್ನು ನಾವು ಗಮನಿಸಿದ್ದು, ಅದರಲ್ಲಿ ಬಸವಾದಿ ಶರಣರ ಬದುಕಿಗೆ ಸಂಬಂಧಿಸಿದ ಅನೇಕ ಅಂಶಗಳು ದೋಷಪೂರ್ಣದಿಂದ ಕೂಡಿದ್ದು, ಆ ಚಿತ್ರವನ್ನು ವಿಕ್ಷೀಸುವ ಜನಸಾಮಾನ್ಯರು ಶರಣರ ಬಗ್ಗೆ ತಪ್ಪು ಅಭಿಪ್ರಾಯ ಹೊಂದಲು ಸದರಿ ಚಲನಚಿತ್ರವು ದಾರಿಮಾಡಿಕೊಡುತ್ತದೆ.
ಮೊದಲನೆಯದಾಗಿ ಬಸವಾದಿ ಶರಣರು ವಾಸ್ತವವಾದಿಗಳಾಗಿದ್ದು, ಪರಮಪೂಜ್ಯ ಅಕ್ಕನಾಗಮ್ಮನವರ ವೈವಾಹಿಕ ಬದುಕನ್ನು ಪೂಜ್ಯ ಶರಣ ಶಿವದೇವ ಅರ್ಥಾತ್ ಶಿವಸ್ವಾಮಿಯೊಂದಿಗೆ ಜರುಗಿರುವ ಅಂಶವು ಐತಿಹಾಸಿಕವಾಗಿ ದಾಖಲೆಯಾಗಿರುವಾಗ ಸಿನಿಮಾದ ಟ್ರೇಲರನಲ್ಲಿ ಪುಂಡ ಜಂಗಮನಿಂದ ಕೆಟ್ಟದಾಗಿ ಮಾತಾಡಿಸಿ ಚಿತ್ರಿಸಿದ್ದು ಇತಿಹಾಸಕ್ಕೆ ಬಗೆದ ಅಪಚಾರವಾಗಿದೆ.
ಅದರಂತೆ ದಯೆಯೇ ಧರ್ಮದ ಮೂಲವೆಂದು ಸಾರಿ ವಿನಯ ಸಂಪನ್ನರಾದ ಬಸವಾದಿ ಶರಣರು ತಮ್ಮ ತತ್ತ್ವಪ್ರಸಾರವನ್ನು ಯಾರ ಮೇಲೆಯೂ ಬಲವಂತವಾಗಿ ಹೇರಿರುವುದಿಲ್ಲ. ಆದರೆ ಚಲನಚಿತ್ರದಲ್ಲಿ “ಮನೆಯೊಳಗೆ ನುಗ್ಗಿ ಲಿಂಗ ಕಟ್ಟುತ್ತೇವೆ” ಎಂದು ಹೇಳಿಸಿರುವ ಸಂಗತಿಯು ನಿರ್ಮಾಪಕರ ಉದ್ಧಟತನದ ನಡೆಯಾಗಿದೆ.
ಈ ರೀತಿ ಟ್ರೇಲರನಲ್ಲಿಯೆ ಇಂಥ ಅವಹೇಳನಕಾರಿಯಾದ ಅನೇಕ ಸಂಗತಿಗಳೊಂದಿಗೆ ನಿರ್ಮಾಣಗೊಂಡಿರುವ ಚಲನಚಿತ್ರವು ಇನ್ನು ಬಿಡುಗಡೆಗೊಂಡ ನಂತರ ಅದರಲ್ಲಿ ಇನ್ನೆಷ್ಟು ಅಹಿತಕರ ಘಟನೆಗಳನ್ನು ಬಸವಾದಿ ಶರಣರ ಕುರಿತು ಇಲ್ಲಸಲ್ಲದ ಅಪವಾದಗಳೊಂದಿಗೆ ಹೊರಿಸುವ ಪ್ರಯತ್ನ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಹಾಗಾಗಿ ತಾವು ದಯವಿಟ್ಟು ನಿರ್ಮಾಪಕರಾದ ಶ್ರೀಮತಿ ಆರಾಧನಾ ಕುಲಕರ್ಣಿ ಹಾಗೂ ನಿರ್ದೇಶಕರಾದ ಶ್ರೀ ದೀಲಿಪ ಶರ್ಮಾ ಅವರನ್ನು ಕರೆಸಿ ನಮ್ಮೊಂದಿಗೆ ಚರ್ಚೆ ಸಂವಾದ ಮಾಡುವುದರೊಂದಿಗೆ ಅಹಿತಕರ ಘಟನೆಗಳನ್ನು ತೆಗೆದು ಆರೋಗ್ಯಕರ ಸಮಾಜ ಸುಧಾರಣೆಗೆ ತಮ್ಮ ಬದುಕನ್ನೇ ಮುಡುಪಾಗಿಟ್ಟು ಬಾಳಿ ಬೆಳಗಿದ ಕರ್ನಾಟಕದ ಸಾಂಸ್ಕೃತಿಕ ನಾಯಕ ಅಪ್ಪ ಸಂಗನಬಸವಣ್ಣ ಹಾಗು ಬಸವಾದಿ ಶರಣರ ವ್ಯಕ್ತಿತ್ವಕ್ಕೆ ಚ್ಯುತಿಬಾರದಂತೆ ಪ್ರದರ್ಶಿಸಬೇಕೆಂದು ಚೇಂಬರ್ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಜಗನ್ನಾಥಪ್ಪಾ ಅವರು ಮನವಿ ಮಾಡಿಕೊಂಡಿದ್ದಾರೆ.