ಇಂದು ಬೆಂಗಳೂರಿನಲ್ಲಿ ವಿವಾದಿತ ‘ಶರಣರ ಶಕ್ತಿ’ ಚಿತ್ರ ನೋಡಲಿರುವ ಲಿಂಗಾಯತ ಮುಖಂಡರು

ಬಸವ ಮೀಡಿಯಾ
ಬಸವ ಮೀಡಿಯಾ

“ಒಂದು ಸಿನೆಮಾ ನೋಡಲು ಇಷ್ಟೊಂದು ಜನ ಪ್ರಮುಖರೆಲ್ಲ ಒಂದೇ ಕಡೆ ಸೇರುತ್ತಿರುವುದು ಇದೇ ಮೊದಲು. ಶರಣರ ಅವಹೇಳನವನ್ನು, ಬಸವ ತತ್ವವನ್ನು ವಿರೂಪಗೊಳಿಸುವ ಪ್ರಯತ್ನಗಳನ್ನು ತಡೆಯಲು ಲಿಂಗಾಯತರು ಎಷ್ಟು ಸಿದ್ಧರಿದ್ದಾರೆಂದು ಇದು ತೋರಿಸುತ್ತದೆ.”

ಬೆಂಗಳೂರು

ಬಸವಾದಿ ಶರಣರನ್ನು ತೇಜೋವಧೆ ಮಾಡಿರುವ ಆರೋಪಕ್ಕೆ ಸಿಲುಕಿರುವ ಶರಣರ ಶಕ್ತಿ ಚಲನಚಿತ್ರದ ಬಿಡುಗಡೆ ಪೂರ್ವ ಪ್ರದರ್ಶನವನ್ನು ಸೋಮವಾರ ಏರ್ಪಡಿಸಲಾಗಿದೆ.

ನಗರದ ಮಲ್ಲೇಶ್ವರಂ ಬಡಾವಣೆಯಲ್ಲಿರುವ ಖಾಸಗಿ ಸಭಾಂಗಣದಲ್ಲಿ ಚಿತ್ರವನ್ನು ಲಿಂಗಾಯತ ಸಮಾಜದ ಹಲವಾರು ಪ್ರಮುಖ ಸ್ವಾಮೀಜಿಗಳು ಮತ್ತು ಪ್ರಮುಖ ಮುಖಂಡರು ನೋಡಲಿದ್ದಾರೆ.

ಭಾಲ್ಕಿ ಶ್ರೀಗಳು, ಗದುಗಿನ ಶ್ರೀಗಳು, ಬೇಲಿ ಮಠದ ಶ್ರೀಗಳು, ಶರತ್ಚಂದ್ರ ಸ್ವಾಮೀಜಿ ಮುಂತಾದವರು ಚಿತ್ರವನ್ನು ನೋಡಲು ಬರುವುದು ಖಚಿತವಾಗಿದೆ. ಸಾಣೇಹಳ್ಳಿ ಶ್ರೀಗಳು, ಗಂಗಾ ಮಾತಾಜಿ ಮತ್ತೆ ಇತರ ಕೆಲವು ಮಠದ ಗುರುಗಳು ಬಹಳ ದಿನಗಳ ಮುಂಚೆಯೇ ಬೇರೆ ಕಾರ್ಯಕ್ರಮಗಳಿಗೆ ಹೋಗಲು ಒಪ್ಪಿಕೊಂಡಿದ್ದರಿಂದ ಚಿತ್ರ ವೀಕ್ಷಿಸಲು ಬರುತ್ತಿಲ್ಲ ಎಂದು ಲಿಂಗಾಯತ ಸಂಘಟನೆಯ ಮುಖಂಡರೊಬ್ಬರು ಹೇಳಿದರು.

ಎಸ್ ಎಂ ಜಾಮದಾರ್, ಅರವಿಂದ ಜತ್ತಿ, ಅಶೋಕ ಬರಗುಂಡಿ, ಟಿ ಆರ್ ಚಂದ್ರಶೇಖರ್, ಜೆ.ಎಸ್.ಪಾಟೀಲ, ಕೆ ಆರ್ ಮಂಗಳ, ಜಾಗತಿಕ ಲಿಂಗಾಯತ ಮಹಾಸಭಾದ ಹಲವಾರು ಜಿಲ್ಲಾ ಅಧ್ಯಕ್ಷರೂ ಬರಲಿದ್ದಾರೆ ಎಂದು ಹೇಳಿದರು. ನಟ ನಿರ್ಮಾಪಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಕ್ರಿಯವಾಗಿರುವ ಬಸಂತ್ ಕುಮಾರ್ ಪಾಟೀಲ್ ಅವರೂ ಕೂಡ ಬರುವುದಾಗಿ ಹೇಳಿದ್ದಾರೆ.

“11 ಗಂಟೆಗೆ ಎಲ್ಲರೂ ಸಭಾಂಗಣದಲ್ಲಿ ಸೇರಲಿದ್ದೇವೆ. 120 ನಿಮಿಷದ ಚಿತ್ರ ಎಂದು ಹೇಳಿದ್ದಾರೆ. ಚಿತ್ರ ನೋಡಿದ ನಂತರ ನಾವೆಲ್ಲ ಬಸವ ಸಮಿತಿಗೆ ಹೋಗಿ ಅಲ್ಲಿ ಸಿನೆಮಾದ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ,” ಎಂದು ಮುಖಂಡರು ಹೇಳಿದರು.

“ಒಂದು ಸಿನೆಮಾ ನೋಡಲು ಇಷ್ಟೊಂದು ಜನ ಪ್ರಮುಖರೆಲ್ಲ ಒಂದೇ ಕಡೆ ಸೇರುತ್ತಿರುವುದು ಇದೇ ಮೊದಲು. ಶರಣರ ಅವಹೇಳನವನ್ನು, ಬಸವ ತತ್ವವನ್ನು ವಿರೂಪಗೊಳಿಸುವ ಪ್ರಯತ್ನಗಳನ್ನು ತಡೆಯಲು ಲಿಂಗಾಯತರು ಎಷ್ಟು ಸಿದ್ಧರಿದ್ದಾರೆಂದು ಇದು ತೋರಿಸುತ್ತದೆ,” ಎಂದರು.

ಶರಣರ ಶಕ್ತಿ ಅಕ್ಟೋಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ.

ಬಸವ ತತ್ವವನ್ನು ವಿರೂಪಗೊಳಿಸಲು ಬಂದಿರುವ ಶರಣರ ಶಕ್ತಿ ಚಿತ್ರ ಮತ್ತು ವಚನ ದರ್ಶನ ಪುಸ್ತಕ ಒಂದೇ ತಂಡದ ಪ್ರಯತ್ನ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಹೇಳಿದೆ.

Share This Article
6 Comments

Leave a Reply

Your email address will not be published. Required fields are marked *