ಅಂತರಂಗದ ದೇವರನ್ನು ಕಾಣಲು ಕಲಿಸಿದ ಬಸವಣ್ಣ: ಪಿ. ರುದ್ರಪ್ಪ

ರಾಯಚೂರು:

ಬಸವ ಕೇಂದ್ರದ ‘176 ನೇ ಮಹಾಮನೆ’ ಕಾರ್ಯಕ್ರಮ ದಾತಾರ ಕಾಲೋನಿಯ ಸುನಂದಾ ಅಮರೇಗೌಡ ಪಾಟೀಲ ಅವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಕುಟುಂಬ ಸದಸ್ಯರು ಪುಷ್ಪಾರ್ಚನೆ ಮಾಡಿ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಪಿ. ರುದ್ರಪ್ಪ ಮಾತನಾಡಿ, ಸಾಂಸ್ಕೃತಿಕ ನಾಯಕ ಬಸವಣ್ಣನವರು ಹೆಣ್ಣು ಮಕ್ಕಳಿಗೆ ವಿಶ್ವದಲ್ಲೇ ಪ್ರಥಮ ಬಾರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಕೊಟ್ಟರು.

ಸಮಾಜದಲ್ಲಿ ತುಳಿತಕ್ಕೊಳಗಾದ ಜನರನ್ನು ಎತ್ತಿಹಿಡಿದು, ಸಮಾನತೆಯ ತತ್ವವನ್ನು ವಚನಗಳ ಮುಖಾಂತರ ಬೋಧಿಸಿ, ಅದರಂತೆ ನಡೆದು ತೋರಿಸಿದ್ದು ಜಗತ್ತಿನ ಸರ್ವಜನಾಂಗಕ್ಕೆ ಮಾರ್ಗದರ್ಶನವಾಗಿದೆ.

ಇಂದಿನ ಲಿಂಗಾಯತರೆಲ್ಲ  12ನೇ ಶತಮಾನಕ್ಕಿಂತ ಪೂರ್ವದಲ್ಲಿ ಶೂದ್ರರೇ  ಆಗಿದ್ದರು. ಬಸವಾದಿ ಶರಣರು ಹಾಕಿಕೊಟ್ಟ ಸತ್ಯಶುದ್ಧ ಕಾಯಕ ಮಾಡುವುದರೊಂದಿಗೆ, ಶರಣರ ವಚನಗಳನ್ನು, ಅವರ ಆದರ್ಶಗಳನ್ನು ಅಧ್ಯಯನ ಮಾಡುವುದರಿಂದ ಇಂದು ಲಿಂಗಾಯತರಾಗಿ ಉನ್ನತಕ್ಕೇರಿದ್ದಾರೆ.

ಬಸವಣ್ಣನವರು ದೇವರ ಸ್ವರೂಪವನ್ನು ಜನಮಾನಸಕ್ಕೆ ತಿಳಿಸಿದರು. ಗುಡಿ- ಗುಂಡಾರಗಳಲ್ಲಿ ದೇವರಿಲ್ಲ. ದೇವರು ನಮ್ಮ ಅಂತರಂಗದೊಳಗೆ ಇದ್ದಾನೆ. ಅಂತರಂಗದಲ್ಲಿ ಆ ದೇವರು ಹೇಗಿದ್ದಾನೆ?  ದೇವರ ಸ್ವರೂಪವೇನು ಎಂಬುದರ ಕುರಿತು ಅರ್ಥವತ್ತಾಗಿ ಮಾತನಾಡಿದರು.

ಜೀವಾತ್ಮ, ಅಂತರಾತ್ಮ, ಪರಮಾತ್ಮ ನಮ್ಮನ್ನು ಬಿಟ್ಟು ದೇವರಿಲ್ಲ. ಇಂತಹ ದೇವರನ್ನು ಕಾಣಬೇಕಾದರೆ ನಿತ್ಯ ಲಿಂಗಪೂಜೆ, ಏಕಾಗ್ರತೆಯಿಂದ ಧ್ಯಾನ ಮಾಡಿದಲ್ಲಿ ದೇವರನ್ನು ಕಾಣಲು ಸಾಧ್ಯ. ಈ ಕ್ರಮದಿಂದ ನಮ್ಮ ಬದುಕು ಹಸನಾಗುವುದೆಂದರು ಜಯಶ್ರೀ ಮಹಾಜನ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸುವುದರೊಂದಿಗೆ ಲಿಂಗಾಂಗ ಸಾಮರಸ್ಯದ ಮಹತ್ವ ಹಾಗೂ ಲಿಂಗಪೂಜೆಯ ಕ್ರಮಬದ್ಧತೆಯನ್ನು ತಿಳಿದುಕೊಳ್ಳಲು ಬಸವ ಕೇಂದ್ರಕ್ಕೆ ಬಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಕೋರಿದರು.

ಸುನಂದಾ ಪಾಟೀಲ ಅವರ ಮೊಮ್ಮಗ ವಿಶ್ವತೇಜನ ಎರಡನೇ ವರ್ಷದ ಹುಟ್ಟುಹಬ್ಬ ಈ ಸಂದರ್ಭದಲ್ಲಿ ಆಚರಿಸಲಾಯಿತು. ನಂದಿನಿ ಪಾಟೀಲ ವಚನ ಪ್ರಾರ್ಥನೆ ಮಾಡಿದರು. ಅಮರೇಗೌಡ ಪಾಟೀಲ ಸ್ವಾಗತಿಸಿದರು. ಶರಣಬಸವ ಜಾಡಲದಿನ್ನಿ ಶರಣು ಸಮರ್ಪಿಸಿದರು. ವಚನಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಕುಟುಂಬದ ಸರ್ವಸದಸ್ಯರು ಹಾಗೂ ಬಡಾವಣೆಯ ಶರಣ – ಶರಣೆಯರು, ಮಕ್ಕಳು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *