ಲಿಂಗಾಯತ ಮಠಗಳು 1/4
ದೀಕ್ಷೆ, ಜನನ, ಮರಣಗಳ ಆಚರಣೆಗಳನ್ನು ನಡೆಸಲು ಶರಣರು ಪ್ರತ್ಯೇಕ ಗುರುಗಳನ್ನು ಸೃಷ್ಟಿಸಲಿಲ್ಲ. ಸಮಾನತೆಗಾಗಿ ಹೋರಾಡಿದ ಅವರು ಭಕ್ತರ ಮೇಲೆ ಕೂರುವ ‘ಗುರು’ ವ್ಯವಸ್ಥೆಯನ್ನು ರೂಪಿಸಲಿಲ್ಲ.
ದೇವಾಲಯದ ಸ್ಥಾವರ ಲಿಂಗವನ್ನು ನಿರಾಕರಿಸಿದಂತೆ, ಮಠದಲ್ಲಿನ ಗುರುವ್ಯವಸ್ಥೆಯನ್ನೂ ಶರಣರು ನಿರಾಕರಿಸಿದರು. ಜ್ಞಾನಿಯಾದ ಯಾವುದೇ ವ್ಯಕ್ತಿಗೆ ದೀಕ್ಷೆ ನೀಡುವ ಅಧಿಕಾರವನ್ನು ನೀಡಿದ್ದರು.
ಮಾವನಾದ ಬಸವಣ್ಣ ಅಳಿಯ ಚೆನ್ನಬಸವಣ್ಣನಿಗೆ, ಎಳೆಯ ಚೆನ್ನಬಸವಣ್ಣ ಹಿರಿಯ ಸಿದ್ದರಾಮರಿಗೆ, ಅಣ್ಣ ಅಜಗಣ್ಣ ತಂಗಿ ಮುಕ್ತಾಯಿಗೆ ಈ ಕಾರಣದಿಂದಲೇ ದೀಕ್ಷೆ ನೀಡಲು ಸಾಧ್ಯವಾಗಿದ್ದು.
ಬಸವಣ್ಣನಿಗೆ ದೀಕ್ಷೆ ನೀಡಿದ ‘ಗುರು’ವಿನ ಬಗ್ಗೆ ಸ್ಪಷ್ಟತೆಯಿಲ್ಲ. ತಮ್ಮ ವಚನಗಳಲ್ಲಿ ನೂರಾರೂ ಶರಣರನ್ನು ಬಸವಣ್ಣ ಬಣ್ಣಿಸಿದರೂ, ತಮಗೆ ದೀಕ್ಷೆ ನೀಡಿದ ಗುರುವನ್ನು ಎಲ್ಲೂ ಸ್ಮರಿಸುವುದಿಲ್ಲ.
ಮಂಟೇಸ್ವಾಮಿ ಪರಂಪರೆಯ ದಲಿತರು ಬಸವಣ್ಣನವರು ತಮ್ಮ ಗುರುಗಳೆಂದು ಪರಿಗಣಿಸುತ್ತಾರೆ. ಅವರ ಜಾನಪದ ಹಾಡುಗಳಲ್ಲಿ ಬಸವಣ್ಣನವರನ್ನು ಗುರುವಿಲ್ಲದ ಗುಡ್ಡ (ಶಿಷ್ಯ) ಎಂದು ಬಣ್ಣಿಸಲಾಗಿದೆ.
ಆದರೆ ಶರಣ ಧರ್ಮದ ಒಳಗೆ ಬಂದ ವೈದಿಕ ಆರಾಧ್ಯರು ಲಿಂಗಾಯತರ ಗುರುಗಳಾಗಿ ಬೆಳೆದರು. ಜಾತ್ಯಾತೀತ ಸಮಾಜದಲ್ಲಿ ಜಂಗಮ ಜಾತಿ ಸೃಷ್ಟಿಸಿ ಮಠಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
(‘ಚತುರಾಚಾರ್ಯ ಪೀಠ: ಸೃಷ್ಟಿ ಸಂದರ್ಭ‘ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪.)