ಬಸವಕಲ್ಯಾಣ
ಜಗತ್ತಿಗೆ ಬಂದವರೆಲ್ಲ ಒಂದು ಕಾರಣಕ್ಕಾಗಿಯೇ ಬಂದವರು. ಕಾರಣವಿಲ್ಲದೆ ಕಾರ್ಯವಿಲ್ಲ. ಆದರೆ ಬಂದ ಕಾರಣವನ್ನು ಮರೆತವರು ಮಾನವರಾದರೆ, ಅರಿವಿದ್ದವರು ಮಹಾತ್ಮರಾಗುತ್ತಾರೆ, ಎಂದು ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿಯಿಂದ ಶ್ರಾವಣ ಮಾಸದ ನಿಮಿತ್ಯ ಆಯೋಜಿಸಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.
ದೇವನ ಮನೆ ಅತ್ಯಂತ ಸುಂದರ. ಪ್ರತಿಯೊಂದು ಜೀವಿಯು ಬದುಕಲಿ ಎಂದು ಪರಮಾತ್ಮ ಎಲ್ಲ ವ್ಯವಸ್ಥೆಗಳು ಮಾಡಿಟ್ಟಿದ್ದಾನೆ. ಇಳೆ ಮಳೆ ಬೆಳೆಯನ್ನು ಕೊಟ್ಟು ರಕ್ಷಿಸುತ್ತಿದ್ದಾನೆ. ಜಗತ್ತಿನ ಯಾವ ಜೀವರಾಶಿಯು ನಾಳೆ ಹೇಗೆ? ಎಂಬ ಚಿಂತೆ ಇಲ್ಲದೆ, ಬಂದ ದಿನವನ್ನು ಮಾತ್ರ ಆನಂದದಿಂದ ಕಳಿಯುತ್ತಿವೆ. ಆದರೆ ಮಾನವನ ಸ್ವಾರ್ಥಕ್ಕೆ ಅಂತ್ಯವಿಲ್ಲ.
ಒಬ್ಬ ಅಜ್ಜ ತನ್ನೆಲ್ಲ ಆಸ್ತಿಯ ಲೆಕ್ಕ ಮಾಡಿಸಿದ. 13 ತಲೆಮಾರಿನವರೆಗೆ ಕುಳಿತು ಉಣ್ಣುವಷ್ಟು ಆಸ್ತಿಯಾಗಿತ್ತು. ಆದರೂ ಅಜ್ಜನಿಗೆ ಸಮಾಧಾನವಿಲ್ಲ. ಚಿಂತಾಕ್ರಾಂತನಾಗಿ ಗುರುಗಳ ಹತ್ತಿರ ಬಂದು, ಗುರುಗಳೆ ನನ್ನೆಲ್ಲ ಆಸ್ತಿಯ ಲೆಕ್ಕಪತ್ರವನ್ನು ಮಾಡಿ ಮುಗಿಸಿದ್ದೇನೆ, ಆದರೆ 13 ತಲೆಮಾರಿನವರೆಗೆ ಮಾತ್ರ ಕುಳಿತು ಉಣ್ಣುವಷ್ಟು ಆಸ್ತಿಯಾಗಿದೆ ಎಂದ. ಗುರುಗಳು ತುಂಬಾ ಸಂತೋಷ ಇಷ್ಟೊಂದು ಆಗಿದೆಯಲ್ಲ ಎಂದರು. ಆದರೆ ಅಜ್ಜ ಗುರುಗಳೇ ನನಗೆ ಚಿಂತೆ ಇರುವುದು 13 ತಲೆಮಾರಿನವರಿಗೆ ಮಾತ್ರ ಆಸ್ತಿ ಇದೆ, 14ನೇ ತಲೆಮಾರಿನವರು ಏನು ಮಾಡಬೇಕು? ಅವರಿಗಾಗಿ ನಾನು ಏನು ಮಾಡಲಾಗಲಿಲ್ಲ ಎಂಬ ಕೊರಗು ಮನದಾಳದಲ್ಲಿದೆ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ ಎಂದು ಕೇಳಿದ.
ಗುರುಗಳು ಇವನ ದುರಾಸೆಯನ್ನು ಕಂಡು ಪರಿಹಾರ ತಿಳಿಸಿದರು, ಮನೆಗೆ ಹೋಗುವಾಗ ಇಲಿ ಪಾಷಾಣ ತೆಗೆದುಕೊಂಡು ಹೋಗು. ರಾತ್ರಿ ತಿಂದು ನೀರು ಕುಡಿಯದೆ ಮಲಗು ಎಂದರು. ಅಜ್ಜ ಗಾಬರಿಯಿಂದ ಗುರುಗಳೇ, ಇಲಿ ಪಾಷಾಣ ತಿಂದು ಮಲಗಿದರೆ ಸಾಯುವುದಿಲ್ಲವೇ ? ಎಂದ. ಗುರುಗಳು ಹೇಳಿದರು, ಸತ್ಯವನ್ನೇ ತಿಳಿದಿರುವೆ ನೀನು ಸತ್ತರೆ ಮಾತ್ರ ನೀನು ಅನುಭವಿಸುವ ಸಂಪತ್ತು ನಿನ್ನ 14ನೇ ತಲೆಮಾರಿನವರು ಅನುಭವಿಸುತ್ತಾರೆ ಎಂದರು.
ನಮ್ಮ ಜೀವನವು ಇಷ್ಟೇ, ಇದ್ದುದರಲ್ಲಿ ತೃಪ್ತರಾಗದೆ ಇನ್ನೂ ಬೇಕು ಎನ್ನುವ ಹಪಾಪಿತನದಲ್ಲಿ ಬದುಕುತ್ತಿದ್ದೇವೆ. ಸ್ವಾರ್ಥಕ್ಕಾಗಿ ಕೊಲೆ ಸುಲಿಗೆಗಳು ನಡೆಯುತ್ತಿವೆ. ಆದರೆ ಶರಣರು ನಮಗೆ ನಿಜವಾದ ಜೀವನವನ್ನು, ಬದುಕುವ ಕಲೆಯನ್ನು ಕಲಿಸುತ್ತಾರೆ.

ಇಂದಿಗೆಂತು ನಾಳೆಗೆಂತು ಎಂದು- ಬೆಂದ ಒಡಲ ಹೊರೆಯ ಹೋಯಿತ್ತೇನ ಸಂಸಾರ! ಹಿಂದೆ ನಾನಾ ಯೋನಿಯಲ್ಲಿ ಬಂದನೆಂಬ ಹೇಯವಿಲ್ಲ, ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಇಲ್ಲ. ಎಂದೆಂದೂ ಸದಾಶಿವನ ಕುಂದದೆ ನೆನೆಯಲಿಯದೆ ಕೊಂದುದಯ್ಯ ಈ ಮಾಯೆ, ಕೂಡಲಸಂಗಮದೇವ,
ಎನ್ನುತ್ತಾರೆ ಗುರುದೇವರು.
ಭವಚಕ್ರದಿಂದ ಪಾರಾಗಬೇಕಾದರೆ ಗುರುವಿನ ಕರವಿಡಿದು ಮುಕ್ತಿಯ ಪಥ ಕಾಣಬೇಕು. ಸತ್ಯದ ಅರಿವಾಗಬೇಕಾದರೆ ನಾಲ್ಕು ಪ್ರಶ್ನೆಗಳು ನಮ್ಮನ್ನು ನಾವು ಕೇಳಿಕೊಳ್ಳಬೇಕು.
ನಾನಾರು?
ಕಾಣುವ ಜಗವಿದೆನು?
ನಾನು ಎಲ್ಲಿಂದ ಬಂದೆ?
ನಾಳೆ ನಾನು ಹೋಗುವುದೆಲ್ಲಿಗೆ?
ಈ ಪ್ರಶ್ನೆಗಳು ಮನದಾಳದಲ್ಲಿ ಮೂಡಿದಾಗ ಮಾತ್ರ ಸತ್ಯದ ದಾರಿಯೆಡೆಗೆ ಕರೆದುಕೊಂಡು ಹೋಗುತ್ತವೆ. ಸತ್ಯವರಿತವರು ಶರಣರಾಗುತ್ತಾರೆ. ಸತ್ಯದ ಅರಿವಿಲ್ಲದೆ ಬದುಕಿದರೆ ವ್ಯರ್ಥವಾದ ಜೀವನವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಡಿಪಿಸಿ
ಅಧ್ಯಕ್ಷ ಬಸವರಾಜ ಕೋರಕೆ,
ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ನಿರ್ದೇಶಕರಾದ ಕಾಶಪ್ಪ ಸಕ್ಕರೆಬಾವಿ, ವೀರಣ್ಣ ಹಲಶೆಟ್ಟಿ, ಅನಿಲಕುಮಾರ ರಗಟೆ, ಶ್ರೀಕಾಂತ ಬಡದಾಳೆ, ವಿಶ್ವಸ್ಥ ಶಿವರಾಜಶಾ ಶಾಶಟ್ಟೆ ಇದ್ದರು.
ಗೋರಟ ಗ್ರಾಮದಿಂದ ಆಗಮಿಸಿರುವ ನೀಲಮ್ಮನ ಬಳಗದ ತಾಯಿಯಂದಿರು ಅಕ್ಕನ ಯೋಗಾಂಗ ತ್ರಿವಿಧಿ ಹಾಡಿದರು.