“ಸಿರಿ ಮತ್ತು ದಾರಿದ್ರ್ಯವನ್ನು ಸಮವಾಗಿ ಕಾಣುವವನೇ ದೇವರ ದೇವ ಎಂದು ನಮ್ಮ ಶರಣರು ಹೇಳಿದ್ದಾರೆ.”
ಮೈಸೂರು
ಮೈಸೂರಿನಲ್ಲಿ ನಿತ್ಯ ಬದುಕಿಗೆ ಶರಣರ ತತ್ವದ ಆದರ್ಶಗಳು ಎನ್ನುವ ವಿಷಯದ ಮೇಲೆ ರವಿವಾರ ಅನುಭಾವ ಘೋಷ್ಟಿ ಜರುಗಿತು.
ವಿಜಯನಗರದ ಬಸವ ಸಮಿತಿಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ದೇವನೂರಿನ ಕೃಷಿಕ ಅನುಭಾವಿ ಪ್ರಶಾಂತ್ ಡಿ ಎಂ ಅವರು ಶರಣರು ವಚನಗಳಲ್ಲಿ ಹೇಳಿರುವುದನ್ನು ಎಳೆ ಎಳೆಯಾಗಿ ಬಿಡಿಸಿ ವಿವರಿಸಿದರು.
ಮಾನವ ಕೋಟಿ ಉದ್ಧಾರಕ್ಕೆ ಶರಣರ ವಚನಗಳು ಅವಶ್ಯ. ಪ್ರಕೃತಿಯಲ್ಲಿ ಯಾವ ಪ್ರಾಣಿಯೂ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆದರೆ ಯಾವುದ್ಯಾವುದೋ ಕಾರಣಕ್ಕೂ ಮನುಷ್ಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಶರಣರ ವಚನಗಳು ಧೈರ್ಯದಿಂದ ಬದುಕಲು ದಾರಿ ತೋರಿಸುತ್ತವೆ, ಎಂದು ಹೇಳಿದರು.

ಮೌಡ್ಯ ಕಂದಾಚಾರ ಮೂಡನಂಬಿಕೆವಿಲ್ಲದ ತತ್ವಗಳನ್ನು ಜಗತ್ತಿಗೆ ನಮ್ಮ ಶರಣರು ಕೊಟ್ಟರು, ಶರಣರು ಚಿಂತೆಯಿಂದ ಮುಕ್ತವಾಗಿ ಬದುಕುವದ ಕಲಿಸಿದರು, ಮನೋಸ್ಥೈರ್ಯವನ್ನು ವಚನಗಳ ಮೂಲಕ ಜಗತ್ತಿಗೆ ಕೊಟ್ಟರು, ಸಂಪತ್ತು,ಅಧಿಕಾರ ಬಂದಾಗ ವಿನಯದಿಂದ ಇರಬೇಕೆಂದು ಶರಣರು ವಚನಗಳ ಮೂಲಕ ಹೇಳಿದ್ದಾರೆ. ಸಿರಿ ಮತ್ತು ದಾರಿದ್ರ್ಯವನ್ನು ಸಮವಾಗಿ ಕಾಣುವವನೇ ದೇವರ ದೇವ ಎಂದು ನಮ್ಮ ಶರಣರು ಹೇಳಿದ್ದಾರೆಂದು ನುಡಿದರು.
ಮಾನವನ ನಿಜದ ನೆಲೆಯನ್ನು ವಚನಗಳ ಮೂಲಕ ಶರಣರು ತಿಳಿಸಿದರು. ಶಿವ ತನ್ನ ಲೀಲಾವಿನೋದಕ್ಕೆ ಈ ಜಗತ್ತನ್ನು ಸೃಷ್ಟಿಮಾಡಿ ಈ ಜಗತ್ತಿನ ಎಲ್ಲಾರಲ್ಲಿ, ಎಲ್ಲಾದುದಲ್ಲಿ, ಅವನೇ ಇದ್ದೂ ಇಲ್ಲದಂತೆ ನಿಯಂತ್ರಣ ಮಾಡುತ್ತಿರುತ್ತಾನೆ ಎಂದು ನಮ್ಮ ಶರಣರು ವಚನಗಳ ಮೂಲಕ ತಿಳಿಸಿದ್ದಾರೆ. ಬಸವಾದಿಶರಣರ ವಚನಗಳು ನಮ್ಮ ದಾರಿಯ ಮಾರ್ಗದರ್ಶಕಗಳಾಗಿ ಬರುತ್ತಾವೆಂದು ಈ ಕೆಳಗಿನ ವಚನವನ್ನು ನುಡಿದು ವಿವರಿಸಿದರು.
“ಸತ್ಯವಚನವ ನುಡಿವಾತನೇ ಸದ್‍ಭಕ್ತನು.
ಸದಾಚಾರದಲ್ಲಿ ನಡೆವಾತನೇ ಸದ್‍ಭಕ್ತನು.
ತಥ್ಯ ಮಿಥ್ಯ ರಾಗದ್ವೇಷವನಳಿದಾತನೇಸದ್‍ಭಕ್ತನಯ್ಯ ಅಖಂಡೇಶ್ವರಾ.”
ಅನ್ಯಾಯ, ಮೋಸ ,ಅಕ್ರಮ, ಅನೀತಿ ಎಲ್ಲಿಲ್ಲವೋ ಅದೆಲ್ಲವೂ ಕಾಯಕವೆಂದು ಶರಣರು ಹೇಳಿದ್ದಾರೆ. ದೇವನೂರು ಗುರುಮಲ್ಲೇಶ್ವರರ ಒಂದು ಪ್ರಸಂಗದಲ್ಲಿ, ಮಹಾರಾಜರು ಗುರುಮಲ್ಲೇಶ್ವರರಿಗೆ ಅರಮನೆಗೆ ಪ್ರಸಾದಕ್ಕೆಂದು ಕರೆದು ಪ್ರಸಾದ ಮುಗಿದ ಮೇಲೆ ಗುರುಗಳ ಕಾಣಿಕೆಗಾಗಿ ಮಹಾರಾಜರು ತನ್ನಲ್ಲಿದ್ದ ವಜ್ರ, ವೈಡೂರ್ಯ, ಬಂಗಾರ ನೀಡಲು ಹೋದಾಗ ಗುರುಮಲ್ಲೇಶ್ವರರು ಇದು ನಿನ್ನ ಸ್ವಂತ ಕಾಯಕದಿಂದ ಬಂದದ್ದಲ್ಲ ಆದ್ದರಿಂದ ನಿನ್ನ ಸ್ವಂತ ಕಾಯಕದಿಂದ ಬಂದಿದ್ದನ್ನು ನಮಗೆ ಕಾಣಿಕೆಯಾಗಿ ಕೊಡಿ ಎಂದರು ಈ ಮಾತನ್ನು ಕೇಳಿದ ಮಹಾರಾಜರು ಮಾರುವೇಷದಲ್ಲಿ ಹೋಗಿ ಕುಲುಮೆ ಕಾಯಕ ಮಾಡಿಬಂದ ಹಣವನ್ನು ಗುರುಮಲ್ಲೇಶ್ವರರಿಗೆ ಕಾಣಿಕೆ ನೀಡಿದ ಒಂದು ಪ್ರಸಂಗವನ್ನು ವಿವರಿಸಿದರು.
ಪ್ರಶಾಂತ್ ಅವರು ಬಸವಾದಿ ಶರಣರನ್ನು ಸಮಾಜದ ವಿಜ್ಞಾನಿಗಳೆಂದು ಕರೆದರು. ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಕೆಳಗಿನ ಒಂದು ವಚನದಲ್ಲಿ ಮನುಷ್ಯನ ಬೆಲೆ ತಿಳಿಯುತ್ತದೆ ಎಂದರು.
“ವ್ಯಾಧನೊಂದು ಮೊಲನ ತಂದಡೆ ಸಲುವ ಹಾಗಕ್ಕೆ ಬಿಲಿವರಯ್ಯಾ,
ನೆಲನಾಳ್ವನ ಹೆಣನೆಂದಡೆ ಒಂದಡಕೆಗೆ ಕೊಂಬವರಿಲ್ಲ ನೋಡಯ್ಯಾ.
ಮೊಲನಿಂದ ಕರಕಷ್ಟ ನರನ ಬಾಳುವೆ,
ಸಲೆ ನಂಬೊ ನಮ್ಮ ಕೂಡಲಸಂಗಮದೇವನ.”
ಮನುಜ ಜನ್ಮದ ಬೆಳಕಿಗೆ ಶರಣರು ಇಷ್ಟಲಿಂಗವನ್ನು, ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ ತತ್ವಗಳು ಮತ್ತು ಕಾಯಕ ,ದಾಸೋಹ, ಮಾರ್ಗಗಳನ್ನು ನೀಡಿದರು. ದಾಸೋಹವೆಂದರೆ ಶಿವನ ಸೊಮ್ಮು ಶಿವನಿಗೆ ಅರ್ಪಿಸುವುದು ಎಂದು ನುಡಿದರು. ೩೩ ಶರಣೆಯರಿಗೆ ಮುಕ್ತವಾಗಿ ಮಾತನಾಡಲು ಅನುಭವಮಂಟಪದಲ್ಲಿ ಸ್ವತಂತ್ರವನ್ನು ಕೊಟ್ಟವರು ನಮ್ಮ ಶರಣರು, ೫೨ ಗುಣಗಳನ್ನು ಬರಿತನಾಗಿರುವವು ಯಾರಾದರೂ ಇದ್ದರೆ ಜಗತ್ತಿನಲ್ಲಿ ವಿಶ್ವಗುರು ಬಸವಣ್ಣನವರು ಒಬ್ಬರೇ, ನಮ್ಮ ಶರಣರು ದೇಹ ಭಾವವನ್ನು ಅಳಿದವರೆಂದು ನುಡಿದರು.
ಕಾರ್ಯಕ್ರಮದಲ್ಲಿ ಇಂದ್ರಮ್ಮ ನಟರಾಜ್, ಲೋಕಮಣಿ ಬಸವರಾಜ್, ಸರಸ್ವತಿ ರಾಮಣ್ಣ ಶರಣೆ ಬೊಂತಾದೇವಿಯ ವಚನವನ್ನು ಹಾಡಿದರು.
ಕೊನೆಯಲ್ಲಿ ಅಧ್ಯಕ್ಷರ ನುಡಿಯಲ್ಲಿ ಬಸವರಾಜು ಹಿನಕಲ್ ರವರು ಬಸವಾದಿಶರಣರ ಚಿಂತನ ಕಾರ್ಯಕ್ರಮದಲ್ಲಿ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ, ಕೃಷಿಕರನ್ನು ಪ್ರೋತ್ಸಾಹಿಸಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ದಿವಂಗತ ನಂಜುಂಡಪ್ಪನವರ ೮ನೇ ವರ್ಷದ ಸ್ಮರಣಾರ್ಥವಾಗಿ ಅವರ ಪತ್ನಿ ಶ್ರೀಮತಿ ರೇವಮ್ಮ, ಸೊಸೆ ಮತ್ತು ಮಗ ಮಂಜುಳಾ, ಶಿವಬಸಪ್ಪ ಎನ್ ಪ್ರಸಾದ ದಾಸೋಹ ಮಾಡಿಸಿದರು.
ಶುಭಮಣಿ ನಿವೃತ್ತ ಮುಖ್ಯಶಿಕ್ಷಕಿ ನಿರೂಪಣೆ ಮಾಡಿದರು ಲೋಕೇಶ್ ಸ್ವಾಗತ ಕೋರಿದರು ಚನ್ನಬಸಪ್ಪ ರವರು ಶರಣು ಸಮರ್ಪಣೆ ಮಾಡಿದರು ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.


ಬಹಳ ಉತ್ತಮವಾದ ಅನುಭಾವ.ದೇವನೂರು ಪ್ರಶಾಂತಣ್ಣನವರು ಕೃಷಿಕರಾದದೂ ಶರಣರ ಚಿಂತನ ವಿಷಯದಲ್ಲಿ ಆಳ ಅದ್ಯಯನಕಾರರು. ಮೈಸೂರಿನಲ್ಲಿ ಇಂತಹ ಕಾರ್ಯಕ್ರಮಗಳನ್ನ ಆಯೋಜಿಸುತ್ತಿರುವ ಬಸವ ಸಮಿತಿಗೆ ಅನಂತ ಶರಣು