ಲಿಂಗಾಯತ ಧರ್ಮದ ಮೂಲ
ಶರಣರ ಪ್ರೇರಣೆಯಾದ ತಮಿಳು ಪುರಾತನರು
ನಾಥರಿಗಿಂತ ಭಿನ್ನವಾಗಿ ಬೆಳೆದ ಶರಣರು
ಪ್ರಾಚೀನ ನಾಥ ಪಂಥ ಭಾರತದಲ್ಲಿ ವ್ಯಾಪಕವಾಗಿ ಹರಡಿತ್ತು. ಅದರ ಯೋಗನಿಷ್ಠೆ, ವರ್ಣ, ಲಿಂಗ ಬೇಧಗಳನ್ನು ನಿರಾಕರಿಸುವ ನೀತಿಯಿಂದ ಶರಣರು ಆಕರ್ಷಿತರಾದರೂ ಅವರಿಗಿಂತ ಭಿನ್ನವಾಗಿಯೇ ಬೆಳೆದರು.
ಅನೇಕ ನಾಥ ಪಂಗಡಗಳು ಮದ್ಯ, ಮಾಂಸ, ಮಹಿಳೆಯರನ್ನು ಬಳಸಿಕೊಳ್ಳುವ ವಾಮಾಚಾರಕ್ಕೆ ತಿರುಗಿದ್ದವು. ಅಂತಹ ‘ಕಾಪಾಲಿಕಾ ಆಚರಣೆ’ಗಳನ್ನು ಅಲ್ಲಮ ಮುಂತಾದ ಶರಣರು ತಿರಸ್ಕರಿಸಿದರು.
ನಾಥರು ಧಾರ್ಮಿಕವಾಗಿ ಜಾತ್ಯತೀತವಾಗಿದ್ದರು. ಯಾವ ಜಾತಿಯವರು ಬೇಕಾದರೂ ಅವರನ್ನು ಸೇರಬಹುದಿತ್ತು. ಸಹ ಭೋಜನಕ್ಕೆ ಮಾನ್ಯತೆಯಿದ್ದರೂ ಅವರಲ್ಲಿ ಜಾತ್ಯತೀತ ರಕ್ತ ಸಂಬಂಧಗಳಿಗೆ ಅವಕಾಶವಿರಲಿಲ್ಲ.
“ಉಂಬುವುದು ಉಡುವುದು ಶಿವಾಚಾರ, ಕೊಂಬುದು ಕೊಡುವುದು ಕುಲಾಚಾರ… ” ಎಂದು ಶರಣರು ಈ ದ್ವಂದ್ವತೆಯನ್ನು ಖಂಡಿಸಿದರು. ತಮ್ಮ ಜಾತ್ಯತೀತತೆಯನ್ನು ರಕ್ತ ಸಂಬಂಧದವರೆಗೂ ವಿಸ್ತರಿಸಿದರು.
ನಾಥರ ಯೋಗ ನಿಷ್ಠೆ ಮತ್ತು ಜಾತ್ಯತೀತ ನಿಲುವಿಗೆ ಬಸವಣ್ಣನವರು ಇಷ್ಟಲಿಂಗ, ಜಂಗಮ, ಕಾಯಕ, ದಾಸೋಹಗಳಂತಹ ಅಂಶಗಳನ್ನು ಜೋಡಿಸಿ ಹೊಸ ಧರ್ಮವನ್ನು ಅಸ್ತಿತ್ವಕ್ಕೆ ತಂದರು.
ಪ್ರಸಿದ್ಧ ನಾಥ ಗುರು ಸಿದ್ಧರಾಮರು ಬಸವಣ್ಣನವರ ಅನುಯಾಯಿಗಳಾದರು. ಮಹಾರಾಷ್ಟ್ರ, ಕರ್ನಾಟಕದಲ್ಲಿ ಅಪಾರ ಸಂಖ್ಯೆಯಲ್ಲಿದ್ದ ಅವರ ಭಕ್ತರು ಕೂಡ ಬಸವ ಧರ್ಮದಲ್ಲಿ ಲೀನವಾದರು.
(‘ನಾಥ ಸಂಪ್ರದಾಯ- ಶರಣ ಸಂಪ್ರದಾಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)