ಗುಳೇದಗುಡ್ಡದಲ್ಲಿ ಶರಣೆ ರೇಮಮ್ಮನವರ ವಚನ ನಿರ್ವಚನ

ಗುಳೇದಗುಡ್ಡ

ಪ್ರತಿವಾರದ ಮಹಾಮನೆ ಕಾರ್ಯಕ್ರಮವು ಶನಿವಾರ, ಶರಣೆ ಕಮಲವ್ವ ಕಾಳಪ್ಪ ಹಡಪದ ಅವರ ಮನೆಯಲ್ಲಿ ಜರುಗಿತು. ಕನ್ನಡಿ ಕಾಯಕದ ರೇಮಮ್ಮ ತಾಯಿಯವರ ಈ ಕೆಳಗಿನ ವಚನವನ್ನು ಅನುಭಾವಕ್ಕೆ ಆಯ್ದುಕೊಳ್ಳಲಾಗಿತ್ತು.

ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ?
ಲಿಂಗಜಂಗಮದ ಪ್ರಸಾದಕ್ಕೆ ತಪ್ಪಿದಲ್ಲಿ ಕೊಲ್ಲಬಾರದೆ?
ಕೊಂದಡೆ ಮುಕ್ತಿಯಿಲ್ಲವೆಂಬವರ ಬಾಯಲ್ಲಿ
ಪಡಿಹಾರನ ಪಾದರಕ್ಷೆಯನಿಕ್ಕುವೆ.
ಮುಂಡಿಗೆಯನೆತ್ತಿರೊ ಭ್ರಷ್ಟ ಭವಿಗಳಿರಾ!
ಎತ್ತಲಾರ ಸತ್ತ ಕುನ್ನಿನಾಯ ಬಾಲವ
ನಾಲಿಗೆ ಮುರುಟಿರೊ ಸದ್ಗುರು ಸಂಗ ನಿರಂಗಲಿಂಗದಲ್ಲಿ.

  • ಕನ್ನಡಿ ಕಾಯಕದ ರೇಮಮ್ಮ ತಾಯಿ

ಕಾರ್ಯಕ್ರಮದ ಪ್ರಾರಂಭದಲ್ಲಿ ಶರಣೆಯರಾದ ಜಯಶ್ರೀ ಬರಗುಂಡಿ, ವಿಶಾಲಕ್ಷೀ ಗಾಳಿ ಹಾಗೂ ಶ್ರೀದೇವಿ ಶೇಖಾ ಅವರಿಂದ ಸಕಲ ಶರಣರ ಸ್ತುತಿ ಪದ್ಯದ ಪ್ರಾರ್ಥನೆಯಾಯಿತು.

ಈ ವಾರದ ವಚನದ ವಚನಕಾರರಾದ ಶರಣೆ ಕನ್ನಡಿ ಕಾಯಕದ ರೇಮಮ್ಮ ಅವರ ಪರಿಚಯವನ್ನು ಮಾಡಿಕೊಡುತ್ತ, ‘ಅಂದು ಬಸವಣ್ಣನವರು ಮಹಿಳೆಯರಿಗೆ ಯಾವ ರೀತಿ ಸಾಮಾಜಿಕ, ಧಾರ್ಮಿಕ ಧೈರ್ಯವನ್ನು ತುಂಬಿದ್ದರು, ಮನೆ ಹಿಡಿದು ಕೂಡ್ರಬೇಕಿದ್ದ ದಲಿತ ಮಹಿಳೆಯರನ್ನೂ ಮುಖ್ಯ ವಾಹಿನಿಗೆ ತಂದರು ಎಂಬುದಕ್ಕೆ ಈ ಕನ್ನಡಿ ಕಾಯಕದ ರೇಮಮ್ಮ ಹಾಗೂ ಅವರ ವಚನವೇ ಸಾಕ್ಷಿ’ ಎಂದು ಹೇಳಿದರು.

ಈವರೆಗೆ ರೇಮಮ್ಮನವರ ಒಂದು ವಚನ ಮಾತ್ರ ಉಪಲಬ್ದವಿದೆ. ಈ ದಿಸೆಯಲ್ಲಿ ಇನ್ನೂ ಸಂಶೋಧನೆ ನಡೆದು ಹೆಚ್ಚಿನ ವಚನಗಳನ್ನು ಸಂಶೋಧಿಸಬೇಕಿದೆ ಎಂದು ಪ್ರೊ. ಶ್ರೀಕಾಂತ ಗಡೇದ ಹೇಳಿದರು.

ಪ್ರೊ. ಎಂ. ಪಿ. ನೀಲಕಂಠಮಠ ಅವರು ನೇರವಾಗಿ ವಚನದ ವಿಶ್ಲೇಷಣೆಗೆ ತೊಡಗಿ, ಕನ್ನಡಿ ಕಾಯಕದ ರೇಮಮ್ಮ ಅವರ ವಚನವು ಶರಣರಲ್ಲಿ ಇನ್ನೂ ಹೆಚ್ಚಿನ ಉತ್ಸಾಹವನ್ನು ತುಂಬುವಂತಿದೆ. ಗುರು, ಲಿಂಗ, ಜಂಗಮ ಮಹತ್ವವನ್ನು ಸಾರಿ ಅವನ್ನು ಉಪೇಕ್ಷಿಸುವವರನ್ನು ಯಾಕೆ ಶಿಕ್ಷಿಸಬಾರದು ಎನ್ನುವ ಕ್ರೋಧವಿದೆ. ಜಗತ್ತಿನ ಕಲ್ಯಾಣವೇ ಈ ಗುರು-ಲಿಂಗ-ಜಂಗಮ ತತ್ವದಲ್ಲಿ ಅಡಗಿದೆ. ಹಲವು ದೈವಂಗೆರಗಿ ಮತಿಭ್ರಾಂತರಾಗದೆ ತನ್ನ ಅರುಹಿನ ಕುರುಹಾದ ಇಷ್ಟಲಿಂಗದ ಮೂಲಕ ತನ್ನನ್ನು ತಾನು ಅರಿಯಬೇಕಾಗಿದೆ. ಇಂದಿಗೂ ಬಳಕೆಯಲ್ಲಿರುವ ಜನಪದ ಭಾಷೆಯಲ್ಲಿಯೇ ವಚನ ರಚಿಸಿದ್ದಾಳೆ. ಮುಂಡಿಗೆ ಎಂದರೆ ರಹಸ್ಯವಾದುದು, ತತ್ವಜ್ಞಾನವೆಂಬ ಅರ್ಥಗಳಿವೆ.

ಇಂತಹ ಮುಂಡಿಗೆ ಪದಗಳನ್ನು ರಚಿಸಿದ ದಾಸ ಸಾಹಿತ್ಯಕ್ಕೂ ಮೊದಲೇ, ಶರಣರು ಮುಂಡಿಗೆ ಪದಗಳನ್ನು ರಚಿಸಿದ್ದರು ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತ ಪಥಭ್ರಷ್ಟರನ್ನು ಶಿಕ್ಷಿಸಿದರೂ ತಪ್ಪಿಲ್ಲ ಎನ್ನುವ ಶರಣೆ ರೇಮಮ್ಮನವರ ಅಭಿಪ್ರಾಯ ಆ ಕಾಲಕ್ಕೆ ಸರಿಯಾಗಿಯೇ ಇದೆ ಎಂದು ತಿಳಿಸಿ ಹೇಳಿದರು.

ಕೊನೆಯಲ್ಲಿ ಸಮಾರೋಪ ಮಾಡಿದ ಪ್ರೊ. ಸಿದ್ಧಲಿಂಗಪ್ಪ ಬಿ. ಬರಗುಂಡಿಯವರು ‘ಕನ್ನಡಿ ಕಾಯಕದ ರೇಮಮ್ಮ ತಾಯಿಯವರ ಈ ಒಂದೇ ವಚನ ಉಪಲಬ್ದವಿದ್ದರೂ ‘ಗಣಾಚಾರ’ವನ್ನು ಕುರಿತು ಮಾಹಿತಿ ನೀಡುತ್ತದೆ. ಕೈಯಲ್ಲಿ ಕನ್ನಡಿ ಇರುವಾಗ ಅಂದರೆ ತನ್ನ ತಾ ನೋಡದೆ ಅನ್ಯರನ್ನು ನೋಡುವುದೇ? ಅದರಿಂದ ಉಂಟಾದ ಲಾಭವೇನು? ಕನ್ನಡಿ ಇರುವುದೇ ತನ್ನನ್ನು ನೋಡಿಕೊಳ್ಳಲು. ಕನ್ನಡಿ ತಾನಾಗಿ ಬಂದು ಪ್ರತಿಬಿಂಬವನ್ನು ತೋರಿಸುವುದಿಲ್ಲ. ನಮ್ಮ ರೂಪ ನೋಡಿಕೊಳ್ಳಬೇಕೆಂದರೆ ಆ ಕನ್ನಡಿಯಲ್ಲಿ ಮೊದಲು ತನ್ನ ರೂಪವನ್ನು ಹಾಕಬೇಕು ಆಗ ನಮ್ಮ ಸ್ವರೂಪ ಕಾಣಿಸುತ್ತದೆ.

ಇಲ್ಲಿ ರೇಮಮ್ಮ ತಾಯಿ ಬಳಸಿರುವ ಕನ್ನಡಿ ಕೇವಲ ತನ್ನ ಕುಟುಂಬಕ್ಕೆ ಸಂಬಂಧಿಸಿದ ಕಾಯಕದ ಕನ್ನಡಿಯಲ್ಲ. ಅದು ತನ್ನ ಅರುಹಿನ ಕುರುಹಾದ ಕರಸ್ಥಲದಲ್ಲಿರುವ ಇಷ್ಟಲಿಂಗ. ಆ ಮೂಲಕವೇ ಮನ, ಭಾವಕ್ಕೆ ಸಂಬಂಧಿಸಿದ ಪ್ರಾಣಲಿಂಗ, ಭಾವಲಿಂಗ ಸಂಬಂಧಿ ಆಗಬೇಕು. ಅಲ್ಲಿಯ ಸಮರಸ ಸ್ಥಿತಿಯೇ ತನ್ನ ಸ್ವಸ್ವರೂಪ. ಅಲ್ಲಿಂದ ಮುಂದೆ ಏನೂ ಇಲ್ಲ. ಹೀಗೆ ವರ್ತಿಸದೆ ಹೊರಗಿನ ತನಗಿಂತ ಭಿನ್ನ ದೈವಕ್ಕೆರುಗುವುದು ಸಲ್ಲದು. ಲಿಂಗ, ಜಂಗಮ, ಪ್ರಸಾದವನ್ನು ಹೀಗೆಳೆಯುವವರನ್ನು ಸಹಿಸಲಾಗದು. ಶಿಕ್ಷಿಸಿದರೂ ತಪ್ಪಿಲ್ಲ ಎಂದು ರೇಮಮ್ಮ ಶರಣೆ ಹೇಳುತ್ತಾಳೆ. ಒಟ್ಟಾರೆ ಈ ವಚನದಲ್ಲಿ ಗಣಾಚಾರದ ನೀತಿಯನ್ನು ಎತ್ತಿ ಹಿಡಿದು ಈ ಪಂಚಾಚಾರಗಳು ಲಿಂಗಾಯತರ ಪ್ರಾಣವಿದ್ದಂತೆ ಎಂದು ಪ್ರತಿಪಾದಿಸಿದ್ದಾಳೆ ಎಂದು ಬರಗುಂಡಿಯವರು ಅಭಿಪ್ರಾಯಪಟ್ಟರು.

ಕೊನೆಯಲ್ಲಿ ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಒಡೆಯರಾದ ಶರಣೆ ಕಮಲವ್ವ ಕಾಳಪ್ಪ ಹಡಪದ ಹಾಗೂ ಕುಟುಂಬ ವರ್ಗದವರಿಗೆ ಕಾರ್ಯಕ್ರಮದ ಕಾರ್ಯದರ್ಶಿಗಳು ಶರಣು ಸಮರ್ಪಣೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಹಡಪದ ಬಂಧುಗಳನ್ನೊಳಗೊಂಡಂತೆ ರಾಚಣ್ಣ ಕೆರೂರ, ಮಹಾಲಿಂಗಪ್ಪ ಕರನಂದಿ, ಪಾಂಡಪ್ಪ ಕಳಸಾ, ಈರಣ್ಣ ಅಲದಿ, ಶರಣೆಯರಾದ ಶಿವಮ್ಮ ಬಾದವಾಡಗಿ, ಮಹಾಂತಮ್ಮ ಬಿತ್ತಾಳ, ಮುಂತಾದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Share This Article
Leave a comment

Leave a Reply

Your email address will not be published. Required fields are marked *