‘ವಾರದಲ್ಲಿ ಒಂದು ದಿನ ಡಾ. ಕಲಬುರ್ಗಿ ಚಿಂತನೆಯನ್ನು ಮನ-ಮನೆಗಳಿಗೆ ತಲುಪಿಸುವ ಕಾರ್ಯ ಆರಂಭಿಸಬೇಕಿದೆ’
ಧಾರವಾಡ
ಕಲಬುರ್ಗಿ ಹುತಾತ್ಮರಾಗಿ 10 ವರ್ಷಗಳಾಗುತ್ತಿವೆ. ಈ ಸಂದರ್ಭದಲ್ಲಿ ಹಿರೇಮಲ್ಲೂರ್ ಈಶ್ವರನ್ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಶಶಿಧರ್ ತೋಡ್ಕರ್ ಬಸವ ಮೀಡಿಯಾದೊಂದಿಗೆ ಮಾತನಾಡಿದ್ದಾರೆ.
ಲಿಂಗಾಯತದ ನಿಜ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕಲಬುರ್ಗಿಯವರ ಸಂಶೋಧನೆ ಮಹತ್ವ, ನಾವಿಂದು ಅವರನ್ನು ಸ್ಮರಿಸಿಕೊಳ್ಳಬೇಕಾಗಿರುವ ಅಗತ್ಯತೆಯನ್ನು ವಿವರಿಸಿದ್ದಾರೆ.
೧. ಡಾ. ಎಂ. ಎಂ. ಕಲಬುರ್ಗಿ ಹುತಾತ್ಮರಾಗಿ ೧೦ ವರ್ಷಗಳಾಗುತ್ತಿವೆ. ಹತ್ಯೆಯಾದ ಮೇಲೆ ಕಲಬುರ್ಗಿಯವರ ಪ್ರಭಾವ ಬೆಳೆದಿದೆಯೇ?
ಡಾ. ಎಂ. ಎಂ. ಕಲಬುರ್ಗಿಯವರು ತಮ್ಮ ಜೀವಿತಕಾಲದಲ್ಲಿ ಸಾಕಷ್ಟು ಅಮರ ಕಾರ್ಯಗಳನ್ನು ಮಾಡಿದ್ದಾರೆ. ಭೌತಿಕವಾಗಿ ಅವರು ಇರದಿರಬಹುದು ಆದರೆ ಬೌದ್ಧಿಕವಾಗಿ ಅವರು ಮಾಡಿದ ಕಾರ್ಯಗಳು ಇನ್ನೂ ಅವರನ್ನು ಜೀವಂತವಾಗಿಟ್ಟಿವೆ. ಜೀವಂತಿಕೆ ಕಾರಣವಾಗಿ ಅವರ ಪ್ರಭಾವ ಗಾಢವಾಗಿ ಅಲ್ಲದಿದ್ದರೂ ನಿಧಾನವಾಗಿ ಬೆಳೆಯುತ್ತಿದೆ.
೨. ಕಳೆದ ೫೦ ವರ್ಷಗಳಲ್ಲಿ ಲಿಂಗಾಯತ ಸಮಾಜದ ಮುಖ್ಯ ಬೆಳವಣಿಗೆಗಳೇನು? ಇವುಗಳನ್ನು ರೂಪಿಸುವಲ್ಲಿ ಕಲಬುರ್ಗಿಯವರ ಪಾತ್ರವೇನು?
ಲಿಂಗಾಯತ ಸಮಾಜದ ಬಹುದೊಡ್ಡ ಶಕ್ತಿ ಶಿವಶರಣರು ಆರಂಭಿಸಿದ ಸಮಸಮಾಜದ ಚಳುವಳಿ, ಅದರ ಉತ್ಪನ್ನವಾಗಿ ಹೊರಹೊಮ್ಮಿದ ವಚನ ಸಾಹಿತ್ಯ, ಅವುಗಳ ಪ್ರಸಾರ ಮತ್ತು ಪ್ರಚಾರಕ್ಕಾಗಿ ಹುಟ್ಟಿಕೊಂಡ ಅಸಂಖ್ಯ ಮಠಗಳು, ಸಮಾಜದ ಗಣ್ಯರು ಮತ್ತು ವಿದ್ಯಾವಂತರು ಸೇರಿ ಕಟ್ಟಿದ ವಿದ್ಯಾಸಂಸ್ಥೆಗಳು. ಇವು ಲಿಂಗಾಯತ ಸಮಾಜದ ಆಧಾರ ಸ್ತಂಭಗಳು.
ಶತಮಾನದ ಹಿಂದೆ ನಾಡಿನಾದ್ಯಂತ ಹಂಚಿಹೋಗಿದ್ದ ವಚನ ಕಟ್ಟುಗಳನ್ನು ಡಾ. ಫ.ಗು. ಹಳಕಟ್ಟಿಯವರು ಸಂಗ್ರಹಿಸಿಕೊಟ್ಟದ್ದು ಮಹತ್ವದ ಬೆಳವಣಿಗೆ. ತದನಂತರದ ವಿದ್ವಾಂಸರು ಈ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿವಹಿಸಿ ವಿಶ್ವವಿದ್ಯಾಲಯ ಮಟ್ಟದಲ್ಲಿ ವಚನ ಸಾಹಿತ್ಯ ಸಂಗ್ರಹ, ಸಂಕಲನ, ಸಂಪಾದನಾ ಕಾರ್ಯ ಕೈಗೆತ್ತಿಕೊಂಡದ್ದು ವಚನ ಸಾಹಿತ್ಯ ಪ್ರಸಾರಕ್ಕೆ ಮತ್ತಷ್ಟು ಬಲತುಂಬಿತು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ಡಾ. ಎಂ. ಎಂ. ಕಲಬುರ್ಗಿಯವರು ಈ ಕ್ಷೇತ್ರಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡದ್ದು ವಚನ ಸಾಹಿತ್ಯದ ಪ್ರಕಟಣೆ ಮತ್ತು ಪ್ರಚಾರಕ್ಕೆ ಹೊಸ ಆಯಾಮ ಒದಗಿಸಿತು.
ವಿಶ್ವವಿದ್ಯಾಲಯ ಮತ್ತು ಸರ್ಕಾರದ ಹಂತಗಳಲ್ಲಿ ಪೂರ್ಣಗೊಳ್ಳದ ಸಾಕಷ್ಟು ಕಾರ್ಯಗಳು ಉಳಿದುಕೊಂಡದ್ದರಿಂದ ಡಾ. ಕಲಬುರ್ಗಿಯವರು ಗದುಗಿನ ತೋಂಟದಾರ್ಯ ಶ್ರೀಮಠದತ್ತ ಹೊರಳಿದರು. ಅಲ್ಲಿ ಪೂಜ್ಯರಾಗಿದ್ದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಕಲಬುರ್ಗಿಯವರ ಕನಸುಗಳಿಗೆ ಮಹಾಪೋಷಕರಾಗಿ ನಿಂತುಕೊಂಡರು. ಆರಂಭದಲ್ಲಿ ವೀರಶೈವ ಅಧ್ಯಯನ ಸಂಸ್ಥೆಯಾಗಿ ನಂತರದಲ್ಲಿ ನಾವು ವೀರಶೈವರಲ್ಲವೆಂದು ತಿಳಿದ ಮೇಲೆ ಲಿಂಗಾಯತ ಅಧ್ಯಯನ ಸಂಸ್ಥೆಯಾಗಿ ರೂಪಗೊಂಡ ಅಧ್ಯಯನ ಕೇಂದ್ರದಿಂದ ಪ್ರಕಟಗೊಂಡ ಪ್ರಕಟಣೆಗಳು ಲಿಂಗಾಯತ ಸಮಾಜದ ನಡೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸಿದವು.

ಅದರಲ್ಲಿಯೂ ‘ಲಿಂಗಾಯತ ಪುಣ್ಯಪುರುಷ ಮಾಲಿಕೆ’ ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದ ಲಿಂಗಾಯತ ಸಮಾಜದ ಅಧಿಕೃತ ಇತಿಹಾಸವೇ ಆಗಿದೆ. ವಿಸ್ಮೃತಿಗೆ ಸರಿದ ಲಿಂಗಾಯತ ಇತಿಹಾಸವನ್ನು ಪುನಃ ಕಟ್ಟುವಲ್ಲಿ ಡಾ. ಕಲಬುರ್ಗಿಯವರು ತೋಂಟದಾರ್ಯಮಠವನ್ನು ಸಮರ್ಥವಾಗಿ ಬಳಸಿಕೊಂಡರು. ಇದರೊಂದಿಗೆ ಅಲ್ಲಿ ಪ್ರಕಟಿಸಿದ ಅಪ್ರಕಟಿತ ಲಿಂಗಾಯತ ಸಾಹಿತ್ಯ ಮುಂತಾಗಿ ಅನೇಕ ಸಂಶೋಧನ ಗ್ರಂಥಗಳು ಕರ್ನಾಟಕದ ಇತರ ಮಠಗಳನ್ನು ತುಂಬಾ ಪ್ರಭಾವಿಸಿತು.
ಅಲ್ಲಿನ ಮಠಾಧೀಶರು ಲಿಂಗಾಯತ ಸಾಹಿತ್ಯ ಮತ್ತು ಸಮಾಜ ಸಂಘಟನೆಗಾಗಿ ತಮಗೂ ಯೋಜನೆ ಮತ್ತು ಯೋಚನೆಗಳನ್ನು ಕೊಡುವಂತೆ ಡಾ. ಕಲಬುರ್ಗಿಯವರನ್ನು ಒತ್ತಾಯಿಸಿದರು. ಬಹುಶಃ ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಲಿಂಗಾಯತ ಸಮಾಜದ ಇತಿಹಾಸದಲ್ಲಿ ಕಲಬುರ್ಗಿಯವರ ಕ್ರಿಯಾಶೀಲತೆಯಿಂದ ಹೊಸ ದಾಖಲೆಗಳು ದಾಖಲೆಗೊಂಡವು. ಹಾಗೂ ಅನೇಕ ಅಪ್ರಕಟಿತ ಕೃತಿಗಳು ಪ್ರಕಟಗೊಂಡವು.
೩. ಕಲಬುರ್ಗಿಯವರ ಸಂಶೋಧನೆ ಲಿಂಗಾಯತರ ಇತಿಹಾಸ ಬದಲಾಯಿಸಿತೆ? ಅವರ ಮುಖ್ಯ ಕೊಡುಗೆಗಳೇನು?
ಹೌದು ಬಸವಾದಿ ಶಿವಶರಣರು ಆರಂಭಿಸಿದ ಸಮಸಮಾಜದ ಚಳುವಳಿ ಪಟ್ಟಭದ್ರ ಹಿತಾಸಕ್ತರ ದಾಳಿಗಳಿಂದ ದಿಕ್ಕೆಟ್ಟು, ಪ್ರಬಲ ಧರ್ಮದ ಆಚಾರ ವಿಚಾರಗಳ ಧೂಳಿನಲ್ಲಿ ಮುಳುಗಿ, ಲಿಂಗಾಯತ-ವೀರಶೈವವಾಗಿ ಮುಖತಾಳಿ ನಿಂತಾಗ ಡಾ. ಕಲಬುರ್ಗಿಯವರು ತಮ್ಮ ಸಂಶೋಧನೆಗಳಿಂದ ಲಿಂಗಾಯತದ ನಿಜ ಇತಿಹಾಸ ಶೋಧಿಸುವ ಸಾಹಸ ಮಾಡಿದರು.
ಡಾ. ಕಲಬುರ್ಗಿಯವರು ತಮ್ಮ ಸಂಶೋಧನೆಗಳಿಂದ
ಲಿಂಗಾಯತದ ನಿಜ ಇತಿಹಾಸ ಶೋಧಿಸುವ ಸಾಹಸ ಮಾಡಿದರು.
ಲಿಂಗಾಯತರು ಹಿಂದೂಗಳಲ್ಲ, ಲಿಂಗಾಯತ ಸ್ವತಂತ್ರ ಧರ್ಮ, ವೀರಶೈವದ ಇತಿಹಾಸ ಮತ್ತು ಭೂಗೋಳ, ಲಿಂಗಾಯತ ಕನ್ನಡಿಗರು ಕಟ್ಟಿದ ಕರ್ನಾಟಕದ ಮೊದಲ ಧರ್ಮ ಮುಂತಾಗಿ ಅವರ ಮಾರ್ಗ ಸಂಪುಟದ ಲೇಖನಗಳು ಲಿಂಗಾಯತದ ಸ್ವರೂಪವನ್ನು ನಿರ್ಧರಿಸುವಲ್ಲಿ ಯಶಸ್ವಿಯಾದವು.
೪. ಅವರ ಸಂಶೋಧನೆ ಜನರಿಗೆ ಮುಟ್ಟಿದೆಯೇ? ಸಮಾಜದ ಮೇಲೆ ಪರಿಣಾಮವೇನು?
ಸಂಶೋಧನೆ ಎಂಬುದು ವಿದ್ವತ್ ವಲಯದಲ್ಲಿ ಮಾತ್ರ ಜರುಗುವ ಚಟುವಟಿಕೆಯಲ್ಲ, ಇದರಲ್ಲಿ ಜನ ಸಾಮಾನ್ಯರೂ ತಮಗೆ ತಿಳಿಯದಂತೆ ತೊಡಗಿಸಿಕೊಂಡಿರುತ್ತಾರೆ. ಡಾ. ಕಲಬುರ್ಗಿಯವರ ಸಂಶೋಧನೆಗಳು ಜನರಿಗೆ ತಲುಪಿರದಿದ್ದರೆ ಲಿಂಗಾಯತ ಸ್ವತಂತ್ರ ಧರ್ಮ ಚಳುವಳಿಯ ಆರಂಭವೇ ಆಗುತ್ತಿರಲಿಲ್ಲ. ಲಿಂಗಾಯತ ಸ್ವತಂತ್ರ ಧರ್ಮ ಎಂಬ ಪರಿಕಲ್ಪನೆಯನ್ನು ಪ್ರಬಲವಾಗಿ ಪ್ರತಿಪಾದಿಸಿದವರಲ್ಲಿ ಡಾ. ಕಲಬುರ್ಗಿಯವರು ಪ್ರಮುಖರಾಗಿದ್ದಾರೆ.
ಆ ಸಂದರ್ಭದಲ್ಲಿ ಅವರು ಭೌತಿಕವಾಗಿ ಇರದಿದ್ದರೂ ಅವರು ಪಸರಿಸಿದ ವಿಚಾರಗಳು ತಮ್ಮ ಕಾರ್ಯವನ್ನು ಲಿಂಗಾಯತ ಸಮಾಜದ ಮೇಲೆ ಮಾಡುತ್ತಲೇ ಇವೆ.
ಡಾ. ಕಲಬುರ್ಗಿಯವರ ಸಂಶೋಧನೆಗಳು ಜನರಿಗೆ
ತಲುಪಿರದಿದ್ದರೆ ಲಿಂಗಾಯತ ಸ್ವತಂತ್ರ ಧರ್ಮ ಚಳುವಳಿಯ ಆರಂಭವೇ ಆಗುತ್ತಿರಲಿಲ್ಲ
೫. ಕಲಬುರ್ಗಿ ಹುತಾತ್ಮರಾಗಿ ಹತ್ತು ವರ್ಷ. ಈ ಸಂದರ್ಭದ ಮಹತ್ವವೇನು. ಈ ಸಂದರ್ಭದಲ್ಲಿ ಅವರನ್ನು ಹೇಗೆ ಸ್ಮರಿಸಿಕೊಳಬೇಕು
ಹೌದು, ಹತ್ತುವರ್ಷಗಳು ಕಳೆದುಬಿಟ್ಟವು. ಈ ಸಂದರ್ಭದಲ್ಲಿ ದೇಶದೆಲ್ಲೆಡೆ ಕೋಮುವಾದ ಬೆಳೆದು ನಿಂತಿದೆ. ಕೋಮುಶಕ್ತಿಗಳು ಸಂವಿಧಾನಿಕ ಅಧಿಕಾರವನ್ನು ಪಡೆದು ಪ್ರಬಲವಾಗಿವೆ. ಜಾತಿ ನಿರಾಕರಿಸಿ-ಜಾತಿ ವಿರಹಿತ ಲಿಂಗಾಯತವಾದ ಪಂಗಡಗಳು ಮತ್ತೆ ತಮ್ಮ ತಮ್ಮ ಉಪಪಂಗಡದ ಅಭಿಮಾನದಲ್ಲಿ ತೇಲಾಡುತ್ತಿವೆ. ಇಂಥ ಸಂದರ್ಭದಲ್ಲಿ ಬಸವಾದಿ ಶಿವಶರಣ-ಶರಣೆಯರು ಪ್ರತಿಪಾದಿಸಿದ, ಡಾ. ಕಲಬುರ್ಗಿಯವರು ಪ್ರಚುರಗೊಳಿಸಿದ ವಿಚಾರಗಳನ್ನು ಜನಮನಕ್ಕೆ ಮುಟ್ಟಿಸಬೇಕಿದೆ.
ವಿಶೇಷವಾಗಿ ನಾಡಿನಾದ್ಯಂತ ಇರುವ ಬಸವಕೇಂದ್ರಗಳು ಸಮುದಾಯ ಚಿಂತನ ಕೇಂದ್ರಗಳನ್ನು ಆರಂಭಿಸಿ ವಾರದಲ್ಲಿ ಒಂದು ದಿನ ಡಾ. ಕಲಬುರ್ಗಿಯವರು ಮತ್ತು ಅವರ ಹಿಂದಿನ ಹಿರಿಯರು ಪ್ರಚಾರಕ್ಕೆ ತಂದ ಶರಣ ವಿಚಾರಧಾರೆಯನ್ನು ಮನ-ಮನೆಗಳಿಗೆ ತಲುಪಿಸುವ ಕಾರ್ಯ ಆರಂಭಿಸಬೇಕಿದೆ.
೬. ಈ ಸ್ಮರಣೋತ್ಸವವನ್ನು ಆಚರಿಸಲು ಕಲಬುರ್ಗಿ ಪ್ರತಿಷ್ಠಾನಕ್ಕೇನಾದರೂ ಆಲೋಚನೆಗಳಿವೆಯೇ?
ಪ್ರತಿಷ್ಠಾನವು ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾದ ಒಂದು ಸಂಸ್ಥೆ. ಕಾರಣ ಅದಕ್ಕೆ ಅದರದೇ ಆದ ಅನೇಕ ಮಿತಿಗಳಿವೆ. ಆ ಎಲ್ಲಾ ಮಿತಿಗಳ ಮಧ್ಯದಲ್ಲಿಯೂ ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಯೋಜನೆಗಳನ್ನು ರೂಪಿಸುತ್ತಿದೆ.
೭. ಕಲಬುರ್ಗಿ ಅವರು ಶುರು ಮಾಡಿದ ಕೆಲಸ ಅಪೂರ್ಣವಾಗಿದೆಯೇ, ಮುಂದುವರೆಸುವುದು ಹೇಗೆ?
ಡಾ. ಎಂ.ಎಂ. ಕಲಬುರ್ಗಿಯವರು ಹೇಳಿದಂತೆ ಸಂಶೋಧನೆಎಂಬುದು ಅಲ್ಪವಿರಾಮ, ಅರ್ಧವಿರಾಮಗೊಳೊಂದಿಗೆ ಪೂರ್ಣವಿರಾಮದೆಡೆಗೆ ಸಾಗುವ ಪ್ರಕ್ರಿಯೆ: ಹಾಗಾಗಿ ಯಾವುದೇ ಕಾರ್ಯವನ್ನು ಅವರವರ ಜೀವಿತ ಕಾಲದಲ್ಲಿ ಯಾರೇ ಆರಂಭಿಸಿದ್ದರೂ ಅದು ಪೂರ್ಣವಾಯಿತು ಎನ್ನುವಂತಿಲ್ಲ. ಅದರಲ್ಲೂ ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ಪೂರ್ಣವಿರಾಮ ಹೇಳುವಂತೆಯೇ ಇಲ್ಲ.
ಸುಮಾರು ಒಂಬೈನೂರು ವರ್ಷಗಳ ಹಿಂದೆ ಬಸವಾದಿ ಶಿವಶರಣರು ಆರಂಭಿಸಿದ ಕಾರ್ಯ, ಕಾಲಕಾಲಕ್ಕೆ ಬೇರೆ ಬೇರೆ ತಿರುವುಗೊಳೊಂದಿಗೆ ನಿರಂತರವಾಗಿ ಪ್ರಕಟವೊ ಅಪ್ರಕಟವೋ ಆಗಿ ಇಪ್ಪತ್ತನೆಯ ಶತಮಾನದಲ್ಲಿ ಡಾ. ಫ. ಗು. ಹಳಕಟ್ಟಿಯವರ ವರೆಗೆ ನಡೆಯುತ್ತ ಮತ್ತೆ ಅವರಿಂದ ಪುನರುತ್ಥಾನಗೊಂಡು ಅನೇಕ ವಿದ್ವಾಂಸರ ಸಹಯೋಗವನ್ನು ಪಡೆದು ಡಾ. ಕಲಬುರ್ಗಿಯವರ ಮೂಲಕ ಹೊಸ ವಿನ್ಯಾಸದೊಂದಿಗೆ ವಿಸ್ತರಿಸುತ್ತ ಬಂದಿತು.
ಈಗ ತಂತ್ರಜ್ಞಾನ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನಪಡೆದಿದೆ. ಅದರ ಸಹಾಯದೊಂದಿಗೆ ಹಿಂದಿನ ಹಿರಿಯರು ಆರಂಭಿಸಿದ ಜಾಗೃತಿ ಅಭಿಯಾನ ಮುಂದುವರೆಸಬೇಕಿದೆ.
👁🤔😳⚖️🥲💐🙏
ಕಲ್ಬುರ್ಗಿಯವರ ಕಾರ್ಯವು ನಿರಂತರವಾಗಿ ಮುಂದುವರಿಯಬೇಕು. ಅವರನ್ನು ಹತ್ತೇಮಾಡಿದ ಆ ನೀಚ ಸಂಘಟನೆಗಳಿಗೆ ಬುದ್ದಿಕಲಿಸಬೇಕು ಅಪರಾಧಿಗಳನ್ನು ಹಿಂದೂಹುಲಿ ಎಂದು ಸನ್ಮಾನಿಸಿದ ಆ ನೀಚರಿಗೆ ಕಾನೂನಿಗೆ ಗುರಿಪಡಿಸಬೇಕು.