ದಾವಣಗೆರೆ
‘ರಾಜ್ಯ ಸರ್ಕಾರದ ಪತನಕ್ಕೆ ₹ 1,000 ಕೋಟಿಯನ್ನು ನಾಯಕರೊಬ್ಬರು ತೆಗೆದಿಟ್ಟಿದ್ದಾರೆ’ ಎಂಬ ಗಂಭೀರ ಆರೋಪ ಮಾಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಬಿಜೆಪಿಯ ಮುಖಂಡರು ಆಗ್ರಹಿಸಿದ್ದಾರೆ.
‘ಸಿದ್ದರಾಮಯ್ಯ ಪರವಾಗಿ ವಕಾಲತ್ತು ವಹಿಸಿ ಕಾಂಗ್ರೆಸ್ ಏಜೆಂಟ್ ರೀತಿಯಲ್ಲಿ ಯತ್ನಾಳ ವರ್ತಿಸುತ್ತಿದ್ದಾರೆ. ಬಿಜೆಪಿ ನಡೆಸುತ್ತಿರುವ ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಅವರ ವಿರುದ್ಧ ಪಕ್ಷವು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ ಮಂಗಳವಾರ ನಡೆದ ಪಕ್ಷದ ಮುಖಂಡರ ಮತ್ತೊಂದು ಸಭೆಯಲ್ಲಿ ಪಕ್ಷಕ್ಕೆ ಮುಜುಗರವುಂಟು ಮಾಡುತ್ತಿರುವವರಿಗೆ ಕಡಿವಾಣ ಹಾಕುವಂತೆ ಆಗ್ರಹಿಸಲು ತೀರ್ಮಾನವಾಗಿದೆ. ಪಕ್ಷದ ಪ್ರಮುಖರ ಸಭೆಯನ್ನು ಮತ್ತೊಮ್ಮೆ ಬೆಂಗಳೂರಿನಲ್ಲಿ ನಡೆಸಿ ವರಿಷ್ಠರಿಗೆ ಈ ಕುರಿತ ದೂರು ನೀಡಲು ಮುಂದಾಗಿದ್ದಾರೆ.
ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ವಿಧಾನಪರಿಷತ್‌ನ ಮಾಜಿ ಸದಸ್ಯ ಶಿವಯೋಗಿಸ್ವಾಮಿ ಮತ್ತಿತರರು ಇದ್ದರು.