ಭದ್ರಾವತಿ:
ಶಿಕ್ಷಣ ಮತ್ತು ಸಾಹಿತ್ಯ ಏನು ಮಾಡಬಲ್ಲದು ಎಂದು 12ನೇ ಶತಮಾನದ ವಚನಕಾರರಿಂದ ತಿಳಿಯಲು ಸಾಧ್ಯ. ಆ ಕಾಲದಲ್ಲಿ ಕಾಯಕ ಜೀವಿಗಳು ವಚನ ಸಾಹಿತ್ಯ ರಚಿಸಲು ಅವರು ಪಡೆದ ಶಿಕ್ಷಣವೇ ಕಾರಣ ಎಂದು ಸಾಹಿತಿ ರಾಜೇಂದ್ರ ಚೆನ್ನಿ ಹೇಳಿದರು.
ತರಳಬಾಳು ಹುಣ್ಣಿಮೆ ಮಹೋತ್ಸವದ ನಾಲ್ಕನೇ ದಿನದಂದು ಸಾಹಿತ್ಯ ಮತ್ತು ಶಿಕ್ಷಣ ವಿಷಯದ ಕುರಿತು ಅವರು ಮಾತನಾಡಿದರು.
ಅನುಭವ ಮಂಟಪದಲ್ಲಿ ನಡೆದ ಚರ್ಚೆ ಶಿಕ್ಷಣವನ್ನು ತೋರಿಸಿದೆ. ಅಲ್ಲಿ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ಪ್ರಶ್ನಿಸಲಾಗಿದೆ. ಈ ರೀತಿ ಪ್ರಶ್ನೆ ಮಾಡುವ ವಿವೇಕವನ್ನು ಇಂದಿನ ಶಿಕ್ಷಣದ ಮೂಲಕ ನೀಡಬೇಕಾಗಿದೆ. ಸಾಹಿತ್ಯದ ಮೂಲಕ ಮಕ್ಕಳಿಗೆ ಅಂತಃಕರಣ ತಿಳಿಯುವಂತೆ ಮಾಡಬೇಕು ಎಂದು ಹೇಳಿದರು.

ವ್ಯಕ್ತಿಯೋರ್ವ ಬಡತನದಲ್ಲಿದ್ದರೂ, ಕಷ್ಟಗಳಲ್ಲೇ ಇದ್ದರೂ ಮನುಷ್ಯನು ಪರಿಪೂರ್ಣನಾಗುವಂತೆ ಮಾಡುವುದೇ ಶಿಕ್ಷಣದ ಗುರಿಯಾಗಿದೆ. ಆದರೆ, ಈಗಿನ ಶಿಕ್ಷಣದಲ್ಲಿ ಪ್ರಶ್ನೆ ಕೇಳುವ ಧೈರ್ಯ ಹಾಗೂ ಹಕ್ಕು ಕಳೆದುಕೊಂಡಿತು. ಶಿಕ್ಷಣದ ಹೆಸರಿನಲ್ಲಿ ಸುಳ್ಳುಗಳನ್ನು ಹೇಳಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮಗು ಪುಸ್ತಕದ ಮೂಲಕ ಜ್ಞಾನ ಪಡೆಯಲು ಸಾಧ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಪುಸ್ತಕಗಳಿಂದ ದೂರವಾಗುತ್ತಿದ್ದಾರೆ. ಪರಿಪೂರ್ಣವಾಗಿ ರೂಪಿಸಲು ಪುಸ್ತಕ, ಶಿಕ್ಷಣ ಹಾಗೂ ಸಾಹಿತ್ಯ ಅನಿವಾರ್ಯ ಎಂದು ಚೆನ್ನಿ ಹೇಳಿದರು.

ಕುವೆಂಪು ವಿ.ವಿ. ಕುಲಪತಿ ಶರತ್ ಅನಂತಮೂರ್ತಿ ಮಾತನಾಡಿ, ಶಿಕ್ಷಣ ಎಂದರೆ ಬೋಧಿಸುವುದಷ್ಟೇ ಅಲ್ಲ ಪ್ರಾಯೋಗಿಕವಾಗಿ ತಿಳಿಸುವುದೂ ಆಗಿದೆ. ಕೇಳುವುದನ್ನು ಕಲಿಸಬೇಕು. ಕುತೂಹಲ ಮೂಡುವಂತೆ ಮಾಡಬೇಕು ಎಂದು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಪ್ರಾಧ್ಯಾಪಕ ಡಾ. ಜಿ. ಪ್ರಶಾಂತ್ ನಾಯಕ ಮಾತನಾಡಿ, ವಿಶ್ವಮಾನವನಾಗಿ ಮಾಡುವುದೇ ಶಿಕ್ಷಣದ ಉದ್ದೇಶ. ಆದರೆ, ಉಡುಗೊರೆ ಹಾಗೂ ಶಿಕ್ಷಣ ವ್ಯವಸ್ಥೆ ಅಂಕಗಳಿಂದ ಪ್ರತಿಭೆ ಅಳೆಯುವ ಮೂಲಕ, ವಿಶ್ವಮಾನವ ಆಗದಂತೆ ಅಡ್ಡಿಪಡಿಸುತ್ತಿದೆ ಎಂದು ವಿಷಾದಿಸಿದರು.

ಇದರಿಂದಾಗಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಬಂದಾಗ ಕೆರೆ, ಬಾವಿಗಳ ಬಳಿ ಪೊಲೀಸರ ನೇಮಕ ಮಾಡುವ ಪರಿಸ್ಥಿತಿ ಎದುರಾಗಿದೆ. ಇದರ ಬದಲು, ಮಗುವೊಂದು ತನಗೆ ತಾನೇ ಬೆಳಕಾಗುವ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆ ಇರಬೇಕಾಗಿದೆ ಎಂದರು.
ಚಿಕ್ಕಮಗಳೂರು ಶಾಸಕ ಹೆಚ್.ಡಿ. ತಮ್ಮಯ್ಯ ಮಾತನಾಡಿ, ತರಳಬಾಳು ಮಠವು ಹುಣ್ಣಿಮೆ ಮಹೋತ್ಸವದಲ್ಲಿ ಸರ್ವಧರ್ಮದ ಮುಖಂಡರನ್ನು ಒಂದೇ ವೇದಿಕೆಯ ಮೇಲೆ ತರುವ ಮೂಲಕ ಸಾಮಾಜಿಕ ಸೌಹಾರ್ದತೆ ಮೂಡಿಸುತ್ತಿದೆ. ಜಾತಿ ವೈಷಮ್ಯದ ಈ ಕಾಲದಲ್ಲಿ ಸರ್ವ ಧರ್ಮದ ಮುಖಂಡರನ್ನು ಸೇರಿಸುವುದು ಅವಿಸ್ಮರಣೀಯವಾಗಿದೆ ಎಂದು ಹೇಳಿದರು.

ಬೆಂಗಳೂರಿನ ಸಾಹಿತಿ ಡಾ. ರಾಜಪ್ಪ ದಳವಾಯಿ ಮಾತನಾಡಿ, ನಾವು ಇದುವರೆಗೂ ಶಿಕ್ಷಣವನ್ನು ಎಲ್ಲರಿಗೂ ತಲುಪಿಸಲು ಸಾಧ್ಯವಾಗಿಲ್ಲ. ಬಡತನ ನಿವಾರಿಸಲು ಸಾಧ್ಯವಾಗಿಲ್ಲ. ಹಸಿವಿನ ಸೂಚ್ಯಂಕದಲ್ಲಿ 123 ದೇಶಗಳ ಮೇಲಿನ ಭಾರತ 102ನೇ ಸ್ಥಾನದಲ್ಲಿದೆ ಎಂದು ಹೇಳಿದರು.
ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ನುಂಗುವಂತೆ, ಮ್ಯಾಗ್ನೆಟ್ ಶಾಲೆಗಳು ಈಗ ಇತರ ಶಾಲೆಗಳನ್ನು ಮುಚ್ಚಿಸುತ್ತಿವೆ. ನಮ್ಮ ಶಾಲೆಗಳನ್ನು ನಾವು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಶಿವಮೊಗ್ಗದ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ದಯಪಾಲಿಸಿದರು
ಮೈಸೂರು ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಜ್ಯೋತಿ ಶಂಕರ, ಸಾಧು ಸದ್ದರ್ಮ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಸಾಹಿತಿ ಡಾ. ಕೆ.ವೈ. ನಾರಾಯಣಸ್ವಾಮಿ, ಚುಟುಕು ಸಾಹಿತಿ ಹೆಚ್. ದುಂಡಿರಾಜ, ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿಶ್ವನಾಥ ಮುದಜ್ಜಿ ಉಪಸ್ಥಿತರಿದ್ದರು.
