ಡಾ. ಜಯದೇವಿ ಗಾಯಕವಾಡ ಅವರಿಗೆ ಕಲ್ಯಾಣ ರತ್ನ ಪ್ರಶಸ್ತಿ ಪ್ರಧಾನ
ಬಸವಕಲ್ಯಾಣ
ಹನ್ನೆರಡನೇ ಶತಮಾನದಲ್ಲಿಯೇ ಗ್ರಹಸ್ಥರಾಗಿದ್ದುಕೊಂಡು ಬಸವತತ್ವವನ್ನು ಭಾರತದಾದ್ಯಂತ ಪ್ರಚಾರ ಮಾಡಿದ ದಾನಮ್ಮನವರು ನಮಗೆಲ್ಲ ದಿವ್ಯ ಪ್ರೇರೆಣೆಯಾಗಿದ್ದಾಳೆ ಎಂದು ನಾಡೋಜ ಬಸವಲಿಂಗ ಪಟ್ಟದ್ದೇವರು ಮಾತನಾಡಿದರು.
ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯಲ್ಲಿ ಹಮ್ಮಿಕೊಂಡಿದ್ದ ಎರಡು ದಿನದ ಶರಣೆ ದಾನಮ್ಮನ ಉತ್ಸವದಲ್ಲಿ ಗುರುವಂದನೆ ಮತ್ತು ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕಲ್ಯಾಣ ನೆಲವು ಶರಣರ ಪರುಷಪಾದದಿಂದ ಪಾವನಗೊಂಡಿದೆ.
ಸಮುಷ್ಟಿಪ್ರಜ್ಞೆಯೊಂದಿಗೆ ಜೀವನ ಮಾಡುತ್ತಿದ್ದ ಶರಣರು ವೈಯುಕ್ತಿಕ ಜೀವನದಲ್ಲೂ ಆತ್ಮೋದ್ಧಾರಕ್ಕಾಗಿ ಗವಿಗಳಲ್ಲಿ ಲಿಂಗಾಂಗಯೋಗ ಮಾಡಲೋಸುಗ ಕಲ್ಯಾಣದ ಸುತ್ತಮುತ್ತ ಪ್ರದೇಶದಲ್ಲಿ ವಾಸಮಾಡಿದ್ದರು, ಅಂಥವರ ಸಾಲಿನಲ್ಲಿ ಶರಣೆ ದಾನಮ್ಮನವರು ಒಬ್ಬರಾಗಿದ್ದಾರೆ. ಕಲ್ಯಾಣ ನೆಲದಲ್ಲಿ ಪೂಜ್ಯ ಬಸವಪ್ರಭು ಸ್ವಾಮೀಜಿಯವರು ಬಹುಮುಖ ಪ್ರತಿಭೆಯುಳ್ಳವರಾಗಿದ್ದಾರೆ. ಅವರ ಸಂಶೋಧನೆ ಕಾರಣವಾಗಿ ಅಜ್ಞಾತವಾಗಿದ್ದ ದಾನಮ್ಮನ ಗವಿಯನ್ನು ಪತ್ತೆ ಹಚ್ಚಿದ್ದಾರೆ.

ಕಲ್ಯಾಣ ಮಹಾಮನೆ ಕಟ್ಟಿ ಪ್ರತೀವರ್ಷ ಸಾಂಕೇತಿಕವಾಗಿ ಶರಣೆ ದಾನಮ್ಮನ ಉತ್ಸವ ಹಮ್ಮಿಕೊಂಡು ತನ್ಮೂಲಕ ಬಸವತತ್ವ ಪ್ರಸಾರ ಮತ್ತು ಪ್ರಚಾರ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಅವರಿಗೆ ಸಂಪೂರ್ಣ ಬೆಂಬಲ ನೀಡುವುದಲ್ಲದೆ ಶರಣೆ ದಾನಮ್ಮನ ಗವಿ ಅಭಿವೃದ್ಧಿಗೆ ಸರಕಾರಕ್ಕೂ ಪತ್ರ ಬರೆಯುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿದ ಹುಲಸೂರಿನ ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಇತ್ತೀಚೆಗೆ ಬಸವತತ್ವವು ವ್ಯಾಪಕವಾಗಿ ಪ್ರಚಾರವಾಗುತ್ತಿದೆ. ಗದುಗಿನ ಶ್ರೀಗಳು, ಇಲಕಲ್ ಶ್ರೀಗಳು, ಲಿಂಗಾನಂದ ಶ್ರೀಗಳು, ಪೂಜ್ಯ ಮಾತೆ ಮಹಾದೇವಿಯವರು ಬಸವತತ್ವವನ್ನು ಕಟ್ಟಿ ಬೆಳೆಸಲು ಸಾಕಷ್ಟು ಶ್ರಮ ವಹಿಸಿದ್ದಾರೆ. ಮಾತಾಜಿಯವರ ಶಿಷ್ಯರಾದ ಪೂಜ್ಯ ಸದ್ಗುರು ಬಸವಪ್ರಭು ಸ್ವಾಮೀಜಿಯವರಲ್ಲಿ ಬಸವತತ್ವದ ಗಟ್ಟಿತನ ಇದೆ, ಸಮಾಜದ ಕಳಕಳಿ ಇದೆ, ಅವರು ಹಮ್ಮಿಕೊಳ್ಳುವ ಈ ದಾನಮ್ಮ ಉತ್ಸವ ಕಾರ್ಯಕ್ರಮದಲ್ಲಿ ದಾನಮ್ಮ ಒಬ್ಬ ಶ್ರೇಷ್ಠ ಶರಣೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ದಿವ್ಯ ನೇತೃತ್ವ ವಹಿಸಿಕೊಂಡ ಪೂಜ್ಯ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಮಾತನಾಡಿ, ದಾನಮ್ಮ ಉತ್ಸವವು ಕೇವಲ ಉತ್ಸವವಲ್ಲ ಇಲ್ಲಿ ಶರಣರ ಸಮಾಗಮವಾಗಿ ಶರಣ ಜ್ಞಾನ ಚಿಂತನೆ ಮಾಡಿ, ನಿಜ ಜೀವನದಲ್ಲಿ ಬಸವತತ್ವದ ಆಚರಣೆಯನ್ನು ಕಲಿಸಿಕೊಡುವ ಬದುಕಿನ ಉತ್ಸವವಾಗಿದೆ ಎಂದರು.
ಬಸವ ತತ್ವದ ಅರಿವು ಆಚಾರಕ್ಕೆ ಬರಲೋಸುಗ ನನ್ನ ಜೀವನ ಮುಡುಪಾಗಿಟ್ಟಿರುವೆ ಎಂದರು.
ಇದೇ ಸಂದರ್ಭದಲ್ಲಿ ಪ್ರತೀ ವರ್ಷ ಕಲ್ಯಾಣ ಮಹಾಮನೆಯಿಂದ ಕೊಡಮಾಡುವ ಕಲ್ಯಾಣ ರತ್ನ ಪ್ರಶಸ್ತಿಯನ್ನು ಡಾ. ಜಯದೇವಿ ಗಾಯಕವಾಡ ಅವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ 14ನೇ ಶರಣೆ ದಾನಮ್ಮದೇವಿ ಜ್ಯೋತಿ ಯಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದ ಪೂಜ್ಯ ಬಸವಪ್ರಭು ಸ್ವಾಮೀಜಿಯವರನ್ನು ಭಾಲ್ಕಿ ಶ್ರೀಗಳು, ಹುಲಸೂರು ಶ್ರೀಗಳು ಅಪಾರ ಬಸವ ಭಕ್ತರು ಸೇರಿ ಸತ್ಕರಿಸಿ ಗುರು ವಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪೂಜ್ಯ ನಿಜಲಿಂಗ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಪೂಜ್ಯ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಎಲೆಮರೆ ಕಾಯಂತೆ ಸ್ವತಂತ್ರವಾಗಿ ಬಸವಧರ್ಮ ಪ್ರಚಾರದ ಕಾರ್ಯವನ್ನು ಮಾಡುತ್ತಿದ್ದು ಅವರ ಶ್ರಮವನ್ನು ನಾವೆಲ್ಲರೂ ಗೌರವಿಸಿ ಅವರ ಮಾರ್ಗದರ್ಶನದಲ್ಲಿ ಮುನ್ನೆಡೆಯಬೇಕೆಂದರು.
ಷಟಸ್ಥಲದ ಧ್ವಜಾರೋಹಣ ಶಿವಾನಂದ ಮೇತ್ರೆ ನೆರವೇರಿಸಿದರು, ಡಾ. ಗವಿಸಿದ್ಧಪ್ಪ ಪಾಟೀಲ, ಬಲಭೀಮ ಪಾಟೀಲ, ಧರ್ಮಣ್ಣ ಪೂಜಾರಿ, ಸದಾನಂದ ಜಯಪ್ರಕಾಶ, ರಾಮ ಮಜಿಗೆ, ಶ್ರೀದೇವಿ ಉಜಳಂಬೆ, ಗಿರಿಜಾ ಸಿದ್ಧಣ್ಣ, ಸುಮಿತ್ರಾ ದಾವಣಗಾವೆ, ವಿಜಯಕುಮಾರ ಚಿಂಚೋಳಿ ಉಪಸ್ಥಿತರಿದ್ದರು.
ಎರಡು ದಿನದ ಕಾರ್ಯಕ್ರಮದಲ್ಲಿ ವಿವಿಧ ಶರಣ ಜ್ಞಾನ ಗೋಷ್ಟಿ ನಡೆದವು. ಗೋಷ್ಟಿಯಲ್ಲಿ ಭಾರತಿ ಕೆಂಪಯ್ಯ, ಲೀಲಾವತಿ ಕರಡಿ, ಶ್ರೀಶೈಲ ಮಸೂತೆ, ಸಿದ್ಧು ಯಾಪಲಪರವಿ, ಮಹಾಂತೇಶ ಕುಂಬಾರ, ಚೀನಕೇರಾ ಶಿವಸ್ವಾಮಿ, ನಾಗೇಂದ್ರಪ್ಪ ನಿಂಬರ್ಗಿ, ಬಿಎಸ್ಎಫ್ ಯೋಧರಾಗಿ ನಿವೃತ್ತಿ ಹೊಂದಿದ ಮುಗನೂರಿನ ಸಿದ್ದಪ್ಪ ಅವರು ವಿಶೇಷ ಅನುಭಾವ ಮಂಡಿಸಿದರು.