ಶಿಕಾರಿಪುರದ ಕುಸ್ಕೂರಿನಲ್ಲಿ ಬಸವ ಪುತ್ಥಳಿಯ ಸಂಭ್ರಮದ ಅನಾವರಣ

ಬಸವ ಮೀಡಿಯಾ
ಬಸವ ಮೀಡಿಯಾ

ಶಿಕಾರಿಪುರ:

ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ ಕೂಡಿಸಿ, ಅದ್ಧೂರಿ ಕಾರ್ಯಕ್ರಮದ ಮೂಲಕ ಅನಾವರಣ ಮಾಡಿರುವುದು ಸಾಂಸ್ಕೃತಿಕ ಭಕ್ತಿಯನ್ನು ಉತ್ತೇಜಿಸಿದಂತಾಗಿದೆ ಎಂದು ಪುಷ್ಪಗಿರಿ ಮಠದ ಪೂಜ್ಯ ಡಾ. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಕುಸ್ಕೂರು ಗ್ರಾಮದಲ್ಲಿ ಬಸವ ಸೇವಾ ಸಮಿತಿ ವತಿಯಿಂದ ನಿರ್ಮಾಣಗೊಂಡ ನೂತನ ಬಸವೇಶ್ವರ ಪುತ್ಥಳಿಯ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ಮಾತುಗಳನ್ನು ಹೇಳಿದರು.

ವಿಶ್ವಗುರು ಬಸವಣ್ಣನವರು ಸರ್ವರ ಏಕತೆಗೆ 12ನೇ ಶತಮಾನದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದರು. ವಚನ ಸಾಹಿತ್ಯದ ಮೂಲಕ ಸಮಾನತೆಯ ಸಮಾಜ ಮಾಡುವಲ್ಲಿ ಬಹಳಷ್ಟು ಶ್ರಮಿಸಿದರು ಎಂದು ಸ್ವಾಮೀಜಿ ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಭಕ್ತಿ ಮತ್ತು ಸಂಸ್ಕಾರದ ಹಾದಿಗೆ ಹೊಸ ಚೈತನ್ಯ ನೀಡಿದವರು ಶರಣರು. ಸಮಾನತೆ ಮತ್ತು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಲಿ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಕಾರ್ಯಕಾರಣಿ ಸದಸ್ಯ ಎನ್. ವಿ. ಈರೇಶ ಮಾತನಾಡಿ, ಸರ್ಕಾರ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ನಾಮಕರಣ ಮಾಡಿದೆ. ಪ್ರತಿ ಕಚೇರಿಗಳಲ್ಲಿ ಭಾವಚಿತ್ರ ಮತ್ತು ಇತ್ತೀಚಿಗೆ ಗ್ರಾಮ ಗ್ರಾಮಗಳಲ್ಲಿ ಬಸವಣ್ಣನವರ ಪುತ್ಥಳಿಗಳು ನಿರ್ಮಾಣವಾಗುತ್ತಿವೆ, ಇದು ಸಮಾಜ ಒಗ್ಗೂಡಿಸುವ ಕೆಲಸ ಎಂದರು.

ಬಸವ ಸೇವಾ ಸಮಿತಿ ಅಧ್ಯಕ್ಷ ಶಂಭುಲಿಂಗ ಮಾತನಾಡಿ, ಬಸವಣ್ಣನವರ ತತ್ವಾದರ್ಶಗಳು ಎಲ್ಲರಿಗೂ ತಿಳಿಯಲಿ. ಸಮಾಜದ ಯುವಕರು ಬಸವಾದಿ ಶರಣರ ತತ್ವಗಳನ್ನು ಹೆಚ್ಚಿನದಾಗಿ ತಿಳಿದುಕೊಂಡು ಅದರಂತೆ ನಡೆಯಲಿ ಎಂದರು.

ಪುತ್ಥಳಿಯನ್ನು ಸರ್ವಗ್ರಾಮಸ್ಥರು ಮತ್ತು ದಾನಿಗಳಿಂದ ನಿರ್ಮಿಸಿದ್ದೇವೆ. ಎಲ್ಲರೂ ಇದಕ್ಕಾಗಿ ಶ್ರಮಿಸಿದ್ದಾರೆ ಎಂದು ಶಂಭುಲಿಂಗಪ್ಪ ಹೇಳಿದರು.

ಬೆಳಿಗ್ಗೆ ಷಟಸ್ಥಲ ಧ್ವಜಾರೋಹಣವನ್ನು ಶರಣ ಸಾಹಿತ್ಯ ಪರಿಷತ್ತಿನ ಶಶಿಧರ್ ಸ್ವಾಮಿ ನೆರವೇರಿಸಿದರು. ಬಸವಾಶ್ರಮದ ಶರಣಾಂಬಿಕೆ ಮಾತೆ, ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಕೆ.ಬಿ. ರಾಮಲಿಂಗಪ್ಪ, ರಾಜು ಹೆಚ್, ಕಾಂತರಾಜ ಸಿ.ಎಸ್, ಶಶಿಧರ ಎ, ನವೀನಕುಮಾರ್ ಕೆ.ಇ, ನಾಗರಾಜ, ಶಶಿಕುಮಾರ, ಸೋಮಶೇಖರಪ್ಪ, ಪಾಲಾಕ್ಷಪ್ಪ ಸೇರಿದಂತೆ ಹಲವಾರು ಗಣ್ಯರು, ಗ್ರಾಮಸ್ಥರು, ಬಸವ ಸೇವಾ ಸಮಿತಿ ಪ್ರಮುಖರು, ಸರ್ವಸದಸ್ಯರು, ದಾನಿಗಳು, ಸದ್ಭಕ್ತರು ಭಾಗವಹಿಸಿದ್ದರು. ಸರ್ವರಿಗೂ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಕೊನೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *