ಹೊಸಪೇಟೆ (ವಿಜಯನಗರ)
ಶಿರಸಂಗಿ ಲಿಂಗರಾಜ ದೇಸಾಯಿ ಅವರ ಹೆಸರಲ್ಲಿ ಇರುವ ಟ್ರಸ್ಟ್ ಪುನರುಜ್ಜೀವನಗೊಳಿಸಿ, ಉನ್ನತ ಶಿಕ್ಷಣದ ವಿದ್ಯಾರ್ಥಿವೇತನ ನೀಡುವ ಯೋಜನೆ ಇದೆ’ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಇಲ್ಲಿ ಸಿರಸಂಗಿ ಲಿಂಗರಾಜ ದೇಸಾಯಿ ಅವರ ೧೬೪ನೇ ಜಯಂತ್ಯುತ್ಸವ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡ ನಾಲ್ಕನೇ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಸಂಸ್ಥಾನಗಳ ಪೈಕಿ ಸರ್ವಸ್ವವನ್ನೂ ಸಮಾಜಕ್ಕೆ ದಾನವಾಗಿ ನೀಡಿದ ಏಕೈಕ ಅರಸ ಲಿಂಗರಾಜ ದೇಸಾಯಿ ಅವರು. ಅವರ ಹೆಸರಿನಲ್ಲಿ ಸರ್ಕಾರಿ ಮತ್ತು ಖಾಸಗಿ ವೃತ್ತಿಪರ ಕಾಲೇಜುಗಳಿಗೆ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲಾಗುವುದು ಎಂದರು.
‘ಹರಿದು ಹಂಚಿ ಹೋಗಿದ್ದ ವೀರಶೈವ ಲಿಂಗಾಯತರನ್ನು ಒಗ್ಗೂಡಿಸಲು ಲಿಂಗರಾಜ ದೇಸಾಯಿ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪಿಸಿದರು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಂಘಟಿತರಾಗಬೇಕು ಎಂಬುದೇ ಅವರ ಉದ್ದೇಶವಾಗಿತ್ತು. ವಿಪರ್ಯಾಸವೆಂದರೆ ಇಂದಿಗೂ ನಾವು ಒಗ್ಗಟ್ಟಾಗಿಲ್ಲ’ ಎಂದರು.

ಸಾನಿಧ್ಯ ವಹಿಸಿದ್ದ ಹಾಲಕೆರೆ-ಹೊಸಪೇಟೆ ಕೊಟ್ಟೂರುಸ್ವಾಮಿ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ಶಿರಸಂಗಿ ಲಿಂಗರಾಜ ದೇಸಾಯಿ ಅವರು ತನ್ನ ತಲೆಗೆ ಕಲ್ಲು ಹೊಡೆದ ಬಾಲಕನಿಗೆ ಎರಡು ಏಕರೆ ಜಮೀನು ನೀಡುತ್ತಾರೆ, ಅಂತಹ ಮಾನವೀಯತೆಯ ಸಾಕಾರಮೂರ್ತಿ ದೇಸಾಯಿ ಅವರಾಗಿದ್ದರೆಂದರು.
ಲಿಂಗರಾಜ ಅವರ ಜಯಂತಿಯನ್ನು ಆಚರಣೆ ಮಾಡಲು ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದು ಅ.ಭಾ. ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಕೆ. ವಿ. ಶ್ರೀನಿವಾಸ ರೆಡ್ಡಿ ತಿಳಿಸಿದರು.
ನಂದಿಪುರದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಜನಪದ ತಜ್ಞ ಶಂಭು ಬಳಿಗಾರ ಶಿರಸಂಗಿ ಲಿಂಗರಾಜರ ದಾನ, ದಾಸೋಹದ ಕುರಿತಂತೆ ಮಾತನಾಡಿದರು.
ಹೊಸಪೇಟೆ ಶಾಸಕ ಎಚ್.ಆರ್.ಗವಿಯಪ್ಪ ಮಾತಾಡುತ್ತಾ ಸಚಿವ ಎಂ.ಬಿ. ಪಾಟೀಲ ಅವರಿಗೆ ರಾಜ್ಯ ಮುನ್ನಡೆಸುವ ಅವಕಾಶ ಒದಗಿಬರಲಿ ಎಂದು ಹೇಳಿ ಮುಖ್ಯಮಂತ್ರಿ ಸ್ಥಾನಕ್ಕೆ ಪಾಟೀಲರ ಹೆಸರನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.
ಸಚಿವ ಎಂ.ಬಿ. ಪಾಟೀಲ ಇದೇ ಸಂದರ್ಭದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಶಾಸಕರಾದ ಅನ್ನಪೂರ್ಣ ತುಕಾರಾಂ, ನೇಮಿರಾಜ ನಾಯ್ಕ, ಲಿಂಗಾಯತ ಕುಡುವಕ್ಕಲಿಗ ಸಮಾಜದ ಅಧ್ಯಕ್ಷ ಬಿ.ಬಿ. ಪಾಟೀಲ ನವೀನ ಗುಳಗನ್ನವರ, ಎಸ್. ಬಸವರಾಜ್ಯ, ಐ, ಸಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
