ನಾಡು ಕಂಡ ಅಪ್ರತಿಮ ದಾನವೀರ ಶಿರಸಂಗಿ ಲಿಂಗರಾಜರು : ಸಿದ್ಧರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಲಿಂಗರಾಜ ದೇಸಾಯಿಯವರ ತ್ಯಾಗ, ದಾನಗುಣ ಮತ್ತು ಜೀವನಾದರ್ಶಗಳು ಸ್ಮರಣೀಯವಾದದ್ದು. ಕನ್ನಡ ನಾಡಿಗೆ ಮತ್ತು ಲಿಂಗಾಯತ ಸಮಾಜಕ್ಕೆ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಕನ್ನಡ ನಾಡು ಕಂಡ ಅಪ್ರತಿಮ ದಾನವೀರರು ಶಿರಸಂಗಿ ಲಿಂಗರಾಜರು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೭೮೧ ನೆಯ ಶಿವಾನುಭವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದೇಶದ ಅನೇಕ ಸಂಸ್ಥಾನಗಳಲ್ಲಿ ಶಿರಸಂಗಿ ಸಂಸ್ಥಾನವು ಬಹಳ ವಿಶಿಷ್ಟತೆಯಿಂದ ಗುರುತಿಸಿಕೊಂಡಿತ್ತು. ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ ಎಂಬ ನುಡಿಯಂತೆ ಬದುಕಿದವರು ಶಿರಸಂಗಿ ಲಿಂಗರಾಜರು. ಅನೇಕ ಸಂಸ್ಥಾನಗಳು ಇದ್ದರೂ ಶಿರಸಂಗಿ ಸಂಸ್ಥಾನದ ಹೆಸರು ಇಂದು ಅಜರಾಮರವಾಗಿ ಉಳಿದಿದೆ. ಇದಕ್ಕೆ ಕಾರಣ ಲಿಂಗರಾಜರು ಬದುಕಿದ ನಿಸ್ವಾರ್ಥ ಸಾರ್ಥಕ ಬದುಕು.

ಅವರು ಲಿಂಗಾಯತ ಸಮಾಜಕ್ಕೆ ಸರ್ವಸ್ವವನ್ನು ತ್ಯಾಗ ಮಾಡಿ, ಬಡಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ. ಲಿಂಗರಾಜ ಟ್ರಸ್ಟ್ ಸ್ಥಾಪಿಸಿ ಸಮಾಜಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಕೆಎಲ್‌ಇ ಸಂಸ್ಥೆ ಬೆಳೆಯಲು ಲಿಂಗರಾಜ ಟ್ರಸ್ಟ್ನ ಪಾತ್ರ ಹಿರಿದಾದುದು ಎಂದು ಮಾತನಾಡಿದರು.

ಸಮ್ಮುಖ ವಹಿಸಿದ್ದ ಬೈರನಟ್ಟಿ ಪೂಜ್ಯ ಶಾಂತಲಿಂಗ ಸ್ವಾಮಿಗಳು ಮಾತನಾಡಿ, ಕಳಸಾಬಂಡೂರಿ ಯೋಜನೆಯ ಕರ್ತೃತ್ವ ಶಕ್ತಿ ಶಿರಸಂಗಿ ಲಿಂಗರಾಜರು. ಅಂದು ಅವರು ನೀಡಿದ ಸಲಹೆ ಇಂದು ಮುಂಚೂಣಿಗೆ ಬಂದಿದೆ. ಶಿರಸಂಗಿ ಲಿಂಗರಾಜರು ಕೃಷಿಗೆ, ನೀರಾವರಿಗೆ ತುಂಬಾ ಮಹತ್ವವನ್ನು ಕೊಟ್ಟಿದ್ದರು. ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ಹೊಡೆದೊಡಿಸಲಿಕ್ಕೆ ಹೋರಾಡಿದವರು ಎಂದು ಮಾತನಾಡಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಪ್ರೊ. ಶಿವಾನಂದ ಹೊಂಬಳ ಅವರು ಮಾತನಾಡಿ, ಶಿರಸಂಗಿ ಲಿಂಗರಾಜರು ಮಹಾನ್ ತ್ಯಾಗಜೀವಿಗಳು. ಸರ್ವಸ್ವವನ್ನು ಲಿಂಗಾಯತ ಸಮಾಜಕ್ಕೆ ದಾನ ಮಾಡಿದ ದಾನಶೂರರು.

ಒಂದು ಸಲ ತಮ್ಮದೇ ಮಾವಿನ ತೋಟದಲ್ಲಿ ಕೂತಾಗ ಒಬ್ಬ ಬಡ ಹುಡುಗ ಹಣ್ಣು ತಿನ್ನುವ ಆಸೆಯಿಂದ ಗಿಡಕ್ಕೆ ಕಲ್ಲು ಹೊಡೆದ, ಅದು ತಪ್ಪಿ ಲಿಂಗರಾಜರಿಗೆ ಬಿತ್ತು. ಹುಡುಗ ಓಡಿ ಹೋದ. ಆದರೆ ಲಿಂಗಾರಾಜರು ಆ ಹುಡುಗನ ಮನೆಯನ್ನು ಹುಡುಕಿಕೊಂಡು ಹೋಗಿ ಅವನ ತಂದೆಗೆ ಹೇಳಿದರು. ಹುಡುಗನ ತಂದೆ ಹೆದರಿ ತಪ್ಪಾಯ್ತು ಎಂದು ಬೇಡಿಕೊಂಡರು.

ಆದರೆ ಲಿಂಗರಾಜ ದೇಸಾಯಿಯವರು ಆ ಹುಡುಗ ಒಗೆದ ಕಲ್ಲಿನಿಂದ ಹೊಡೆಸಿಕೊಂಡ ಗಿಡ ಹಣ್ಣು ಕೊಡುತ್ತದೆ. ಆದರೆ ಕಲ್ಲು ನನಗೆ ಬಿದ್ದಿದೆ. ನಾನು ಮಾವಿನ ತೋಟವನ್ನೆ ನಿಮಗೆ ದಾನವಾಗಿ ಕೊಡುತ್ತೇನೆ ಎಂದು ಲಿಂಗರಾಜರು ಹೇಳಿದರು. ಲಿಂಗರಾಜರು ಎಂಥಹ ದಾನಶೂರರು ಇದ್ದರು ಎಂಬುದು ಗೊತ್ತಾಗುತ್ತದೆ. ಗದಗ ಜಿಲ್ಲೆಯ ಶಿಗ್ಲಿಯಲ್ಲಿ ಜನಿಸಿ ಶಿರಸಂಗಿ ಸಂಸ್ಥಾನದ ರಾಜನಾಗಿ ಮೆರೆದ ಲಿಂಗರಾಜರ ಬದುಕು ಅಜರಾಮರವಾಗಿದೆ ಎಂದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಭಾಕರ ಉಳ್ಳಾಗಡ್ಡಿ, ವಿನಾಯಕ ಆಸಂಗಿ ಮಾತನಾಡಿದರು. ಮಾತೋಶ್ರೀ ಜಯಶ್ರೀ ಹಳ್ಳಿಕೇರಿಯವರು ದಾಸೋಹ ಸೇವೆಗೆ ದತ್ತಿನಿಧಿಯಾಗಿ ಒಂದು ಲಕ್ಷ ರೂಪಾಯಿಯ ಚೆಕ್ ನೀಡಿದರು. ಇದೇ ಸಂದರ್ಭದಲ್ಲಿ ವೀರಪ್ಪ ಬಿಸನಳ್ಳಿ ಹಾಗೂ ಮಹೇಂದ್ರ ಕುರುಡಿ ಅವರನ್ನು ಸನ್ಮಾನಿಸಲಾಯಿತು. ಸಂಗೀತ ಸೇವೆಯನ್ನು ಅನ್ನಪೂರ್ಣ ಹುಬ್ಬಳ್ಳಿ ನಡೆಸಿಕೊಟ್ಟರು.

ವಚನಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿದರು. ಧರ್ಮಗ್ರಂಥ ಪಠಣವನ್ನು ಶ್ರೇಯಾ ಭರಮಪ್ಪ ಗುಡಿ ಹಾಗೂ ವಚನ ಚಿಂತನವನ್ನು ಶಿವರಾಜ ಭರಮಪ್ಪ ಗುಡಿ ನಡೆಸಿದರು. ದಾಸೋಹ ಸೇವೆಯನ್ನು ಶಿರೋಳ ತೋಂಟದಾರ್ಯ ಜಾತ್ರಾ ಸಮಿತಿ ೨೦೨೬ ರ ಅಧ್ಯಕ್ಷರು-ಸರ್ವಪದಾಧಿಕಾರಿಗಳು ಹಾಗೂ ಅಧ್ಯಕ್ಷರು-ಪದಾಧಿಕಾರಿಗಳು ಅಖಿಲ ಕರ್ನಾಟಕ ಕುಡವಕ್ಕಲಿಗರ ಸಂಘ ಗದಗ ಮತ್ತು ಸತೀಶ್ ಆಸಂಗಿ, ನೇಹಾ ಆಸಂಗಿ ವಹಿಸಿಕೊಂಡಿದ್ದರು.

ಚಂದ್ರಶೇಖರಯ್ಯ ಮಹದೇವಯ್ಯ ಧನ್ನೂರು ಹಿರೇಮಠ ಇವರ ಸ್ಮರಣಾರ್ಥ ಒಂದು ಲಕ್ಷ ಠೇವಣಿ ಪ್ರಮಾಣಪತ್ರವನ್ನು ಕುಟುಂಬ ವರ್ಗದವರಾದ ಚೇತನ ವೀರಭದ್ರಯ್ಯ ಧನ್ನೂರ ಹಿರೇಮಠ ಅವರು ಶ್ರೀಗಳಿಗೆ ನೀಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *