ಮಂಡ್ಯ
ಆಧುನೀಕತೆಯ ಅಬ್ಬರದಲ್ಲಿ ಸಿಲುಕಿರುವ ಮನುಷ್ಯ ಜಂಜಾಟದಿಂದ ಮುಕ್ತರಾಗಲು ಧ್ಯಾನ ಮತ್ತು ಯೋಗಾಭ್ಯಾಸದಿಂದ ಸಾಧ್ಯವಾಗುತ್ತದೆ ಎಂದು ಮಂಡ್ಯ ನಗರಸಭೆ ಪೌರಾಯುಕ್ತೆ ಪಂಪಶ್ರೀ ಹೇಳಿದರು.
ನಗರದ ಸ್ವರ್ಣಸಂದ್ರ ಬಡಾವಣೆಯ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಉದ್ಯಾನವನದ ಧ್ಯಾನಕೇಂದ್ರದಲ್ಲಿ ಕಾಯಕಯೋಗಿ ಫೌಂಡೇಶನ್ ಆಯೋಜಿಸಿದ್ದ ‘ದಾಸೋಹ ಹುಣ್ಣಿಮೆ’ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಂಡು ಅವರು ಮಾತನಾಡಿದರು.
ಬಾಲ್ಯಾವಸ್ಥೆಯಲ್ಲೇ ಮಕ್ಕಳಿಗೆ ಯೋಗ, ಧ್ಯಾನ, ಕ್ರೀಡೆ, ಕರಾಟೆಯಂತಹ ಸಾಹಸ ಕಲೆಗಳನ್ನು ಅಭ್ಯಾಸ ಮಾಡಿಸಿದಲ್ಲಿ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಿ ಜ್ಞಾನ ವೃದ್ಧಿಯಾಗುತ್ತದೆ. ಜ್ಞಾನ, ಧ್ಯಾನದ ಬಲದಿಂದ ಆತ್ಮವಿಶ್ವಾಸ ಹೆಚ್ಚಳವಾಗುತ್ತದೆ ಎಂದರು.
ಬಡವ ಶ್ರೀಮಂತನೆಂಬ ಬೇಧವಿಲ್ಲದೆ ಎಲ್ಲಾ ಜಾತಿ ಧರ್ಮದವರಿಗೂ ಉಚಿತವಾಗಿ ಅನ್ನ, ಅಕ್ಷರ, ಆಸರೆಯಂತಹ ತ್ರಿವಿಧ ದಾಸೋಹವನ್ನು ತಮ್ಮ 111 ವರ್ಷಗಳ ಕಾಲ ನಡೆಸಿಕೊಂಡು ಬಂದಿದ್ದ ತುಮಕೂರಿನ ಸಿದ್ದಗಂಗಾಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ ಆದರ್ಶ ಅನುಕರಣೀಯವಾಗಿದೆ ಎಂದು ಶ್ರೀಮಠದ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಕಾಯಕಯೋಗಿ ಫೌಂಡೇಶನ್ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು ಜನಮನ್ನಣೆಗೆ ಪಾತ್ರವಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣವಾಗಿರುವ ಧ್ಯಾನ ಕೇಂದ್ರವನ್ನು ಸದ್ಭಳಕೆ ಮಾಡಿಕೊಂಡು ಯೋಗ-ಧ್ಯಾನ ಅಭ್ಯಾಸ ಮಾಡಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಸದಸ್ಯೆ ಕೆ. ವಿದ್ಯಾಮಂಜುನಾಥ್, ಮಂಡ್ಯ ನಗರದಲ್ಲಿ ಪರಿಸರ ಮತ್ತು ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡುತ್ತಾ ಬಂದಿರುವ ಪೌರಾಯುಕ್ತೆ ಪಂಪಶ್ರೀ ಅವರು ತಮ್ಮ ಜನ್ಮದಿನವನ್ನು ಸಸಿ ನೆಡುವ ಮೂಲಕ ಆಚರಣೆ ಮಾಡಿಕೊಳ್ಳುತ್ತಿರುವುದು ಇತರರಿಗೆ ಮಾದರಿಯಾಗಿದೆ.
ಪ್ರತಿಯೊಬ್ಬರಿಗೂ ಪರಿಸರ ಕಾಳಜಿ ಇದ್ದಾಗ ಮಾತ್ರ ಸುಂದರವಾದ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದರು.
ಧ್ಯಾನ ಕೇಂದ್ರದಲ್ಲಿ ಕರಾಟೆಗೆ ಚಾಲನೆ :
ಕರಾಟೆ ತರಬೇತುದಾರರಾದ ಲೋಕೇಶ್ ಮೊದಲಿಯಾರ್ ನೇತೃತ್ವದ ಗೋಜು-ರಿಯೋ ಕರಾಟೆ ಡೋ ಅಕಾಡೆಮಿ ವತಿಯಿಂದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಧ್ಯಾನ ಕೇಂದ್ರದಲ್ಲಿ ಕರಾಟೆ, ಯೋಗ ಮತ್ತು ಧ್ಯಾನ ತರಬೇತಿ ಕೇಂದ್ರಕ್ಕೆ ಗಣ್ಯರು ಚಾಲನೆ ನೀಡಿದರು.
ಇಂಡುವಾಳು ಗ್ರಾ.ಪಂ. ಅಧ್ಯಕ್ಷೆ ಶೈಲಜಾ, ಸುಂಡಹಳ್ಳಿ ಸೋಮಶೇಖರ್, ನಗರಸಭೆ ನಾಮನಿರ್ದೇಶನ ಸದಸ್ಯ ಸುಮನ್ ಅವರನ್ನು ಅಭಿನಂದಿಸಲಾಯಿತು. ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ. ಶಿವಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಅನನ್ಯ ಆರ್ಟ್ ಸಂಸ್ಥೆಯ ಬಿ.ಎಸ್. ಅನುಪಮಾ, ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಧ್ಯಕ್ಷ ಎಂ.ಎಸ್. ಮಂಜುನಾಥ್ ಬೆಟ್ಟಹಳ್ಳಿ, ಜಿಲ್ಲಾ ನಿರ್ದೇಶಕ ಮೆಣಸಗೆರೆ ಶಿವಲಿಂಗಪ್ಪ, ಪ್ರ. ಕಾರ್ಯದರ್ಶಿ ಶಿವರುದ್ರಪ್ಪ, ವಕೀಲ ಕಾಲ್ಕೆರೆ ನಾಗೇಶ್, ರುದ್ರೇಗೌಡ, ಪರಿಸರ ಅಧಿಕಾರಿ ಅಶ್ವಥ್, ಬಸರಾಳು ಬಸವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೂರಾರು ಮಂದಿ ಭಕ್ತರು ಸ್ವಾಮೀಜಿಯವರ ಪುತ್ಥಳಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
