‘ಔಪಚಾರಿಕ ಶಿಕ್ಷಣ ಲೋಕದ ಡೊಂಕು ತಿದ್ದುವಲ್ಲಿ ವಿಫಲವಾಗಿವೆ’

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರ್ಗಿ

ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 27ನೇ ದಿನದಂದು ಬೆಳಗಾವಿಯ ಬಸವ ಬೆಳವಿಯ ಚರಂತೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ಭ್ರಷ್ಟಾಚಾರಿಗಳ ಸಂಖ್ಯೆಯೂ ಕೂಡ ಹೆಚ್ಚಾಗಿದೆ.

ಔಪಚಾರಿಕ ಶಿಕ್ಷಣ ವ್ಯವಸ್ಥೆಯ ಶಾಲಾ ಕಾಲೇಜುಗಳು ಲೋಕದ ಡೊಂಕು ತಿದ್ದುವಲ್ಲಿ ವಿಫಲವಾಗಿವೆ ಎನಿಸುತ್ತದೆ. ಭೌತಿಕ ಅವಶ್ಯಕತೆಗಳು ಹೆಚ್ಚಾದಂತೆ ಆವಿಷ್ಕಾರಗಳು ಹೆಚ್ಚಾಗುತ್ತಿವೆ. ಜಗತ್ತಿನಲ್ಲಿ ಪ್ರತಿಷ್ಠೆಗಳು ಸ್ವಾರ್ಥ ಸಾಧನೆಗಳು ಹೆಚ್ಚಾಗಿ ಅಹಂಕಾರ ಆಮಿಷಗಳು ಮಿತಿಮೀರಿ ಜಗವು ಅಶಾಂತಿಗೆ ಒಳಗಾಗುತ್ತಿದೆ. ಯುದ್ಧದ ಹಪಾಹಪಿತನ ಅತಿಯಾಗಿ ಮನುಷ್ಯ ಮನುಷ್ಯನನ್ನೇ ಸರ್ವನಾಶ ಮಾಡುವ ವಿನಾಶಕಾರಿ ಬೆಳವಣಿಗೆಗೆ ತಲುಪಿದ್ದೇವೆ. ಮಾನವನ ಇಂತಹ ಭ್ರಮೆ ರೇಷ್ಮೆ ಹುಳುವಿನಂತಾಗಿದೆ. ಮಾನವ ಈ ಭೂಮಿಯ ಮೇಲೆ ಶಾಶ್ವತವಲ್ಲ ಎಂಬ ಸತ್ಯ ಆತ ಅರಿತುಕೊಳ್ಳುತ್ತಿಲ್ಲ.

ಲೋಕದ ಮಾನವರು ಅನ್ಯರ ಅವಗುಣ ತೊಡೆಯಲು ಉಪದೇಶಿಸುವುದಕ್ಕಿಂತ ತನ್ನ ವ್ಯಕ್ತಿತ್ವ ಸುಧಾರಿಸಿಕೊಳ್ಳಬೇಕು. ಹೊರಗಿನ ವೇಷಭೂಷಣಗಳು ವ್ಯಕ್ತಿತ್ವವಲ್ಲ, ಮಾನಸಿಕ ವ್ಯಕ್ತಿತ್ವ ವಿಕಸನವೇ ನಿಜವಾದ ಬೆಳವಣಿಗೆಯಾಗಿದೆ. ಸದ್ಗುಣಗಳನ್ನು ಓದಿ ಇಲ್ಲವೇ ಕೇಳಿ ತಿಳಿದುಕೊಳ್ಳಬೇಕು. ಭವರೋಗ ಕಳೆಯಲು ಶರಣರ ಸಂಗವೇ ಲೇಸಾಗಿದೆ.

ಶ್ರೀಮಂತಿಕೆಯಿಂದ ಮಾನಸಿಕ ಶಾಂತಿ ಲಭಿಸದು. ಸಿರಿಗರ ಹೊಡೆದವರು ಶರಣರ ಸತ್ಸಂಗದಿಂದ ಮಾನಸಿಕ ಶಾಂತಿ ದೊರಕಿಸಿಕೊಳ್ಳಲು ಸಾಧ್ಯವಿದೆ. ಮಾನಸಿಕ ಶಾಂತಿ ನಮ್ಮೊಳಗೇ ಇದೆ ಅದನ್ನು ಕಂಡುಕೊಂಡು ಬದುಕಬೇಕು.

ಲೋಕದ ಡೊಂಕು ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂದು ಶರಣರು ಹೇಳಿದರು. ಪರಚಿಂತೆ ಪರನಿಂದೆ ಸಲ್ಲದೆಂಬುದು ಶರಣರ ಅಭಿಮತ. ಪ್ರತಿಯೊಬ್ಬ ವ್ಯಕ್ತಿ ಸುಧಾರಿತನಾದರೆ ಸಮಾಜ ತಾನಾಗಿಯೇ ಸುಧಾರಿಸುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಧ್ಯಾಕಾಲ ಪತ್ರಿಕೆಯ ಸಂಪಾದಕ ಶಿವಲಿಂಗಪ್ಪ ದೊಡ್ಡಮನಿ ಮಣ್ಣೂರ ಅವರನ್ನು ವಿಲಾಸವತಿ ಖುಬಾ ಸನ್ಮಾನಿಸಿದರು.

ಸನ್ಮಾನದ ನಂತರ ಶಿವಲಿಂಗಪ್ಪ ದೊಡ್ಡಮನಿ ಮಾತನಾಡಿ, ಶರಣರ ಅನುಭಾವ ಸಾಹಿತ್ಯದ ಸತ್ಯ ಹಾಗೂ ಅಸತ್ಯವನ್ನು ವಿಶ್ಲೇಷಿಸುತ್ತಾ, “ಅನುಭಾವದಿಂದಲೇ ಶರಣ ಸಾಹಿತ್ಯ ಜೀವಂತವಾಗಿದೆ. ಅದು ಕಾಲವನ್ನು ಮೀರಿ ಜನಮನದಲ್ಲಿ ಉಳಿದಿರುವುದು ಅವರ ನಿಷ್ಠೆ ಮತ್ತು ಸತ್ಯಶೋಧನೆಯ ಕಾರಣ,” ಎಂದು ಮನಮುಟ್ಟುವ ಮಾತು ಹೇಳಿದರು.

ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ, ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ, ಶರಣಗೌಡ ಪಾಟೀಲ ಪಾಳಾ, ಡಾ. ಕೆ.ಎಸ್ ವಾಲಿ, ಬಂಡಪ್ಪ ಕೇಸುರ, ಶಿವಲಿಂಗಪ್ಪ ದಂಡೋತಿ, ಭಗಿರಥಿ, ಅಪ್ಪಾರಾವ ಅಡಿಕೆ, ಹನುಮಂತರಾಯ, ಕಲ್ಯಾಣರಾವ, ಬಸವರಾಜ ತುಪ್ಪದ, ಸಂಗಮ್ಮ ಸುರಪುರ , ಶಾರದಾ ಅಂಬರೀಶ, ಪಾರ್ವತಿ ಪರ್ವತಯ್ಯ ಅವರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *