ಬಾಗಲಕೋಟೆ
‘ಹಸನ್ಮುಖಿ ಸದಾಸುಖಿ. ನಗಿಸುವ, ನಗುತ್ತ ಬಾಳುವ ವರವನ್ನು ಪಡೆಯಬೇಕು. ಕುಡಿತವು ಆಸ್ತಿ, ಅಸ್ತಿತ್ವ ಕಳೆಯುತ್ತದೆ’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಶ್ರಾವಣ ಪ್ರವಚನದ ಹಾಸ್ಯ ಸಂಜೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, “ಪ್ರಕೃತಿದತ್ತವಾಗಿ ಸಿಕ್ಕ ಆಭರಣವೇ ನಗು. ಮಗುವಿನ ನಗು ಕಂಡಾಗ ಮನಸ್ಸು ನೆಮ್ಮದಿಗೆ ಜಾರುತ್ತದೆ. ಜೀವನದ ಜೀವಸೆಲೆ ನಗು. ನಗುವಿಲ್ಲದ ಬದುಕು ಬೆಂಗಾಡು” ಎಂದರು.
ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಮಾತನಾಡಿ, “ತಿಳಿಹಾಸ್ಯದ ತಿರುಳುನಲ್ಲಿ ಮಹಾದೇವನೊಬ್ಬನೇ. ಮನುಜರೆಲ್ಲ ಒಂದೇ. ತಂದೆ, ತಾಯಿ, ಗುರುವಿನ ಋಣ ಮರೆಯಬಾರದು. ಆಡಂಬರದ ಪೂಜೆಯಲ್ಲಿ ದೇವನಿಲ್ಲ ಕಾಯಕದಲ್ಲಿ ಭಗವಂತನಿದ್ದಾನೆ” ಎಂದು ಹೇಳಿದರು.
ಜೇವರ್ಗಿ ಮರುಳಶಂಕರ ಗುರುಪೀಠದ ಸಿದ್ಧಬಸವ ಕಬೀರ ಶ್ರೀ ಮಾತನಾಡಿ, “ಕಣ್ಣೀರು ಸುರಿಸಿಕೊಂಡು ಬರುವವರಿಗೆ ಕಣ್ಣೀರು ಒರೆಸುವಂತಾಗಬೇಕು. ಮನ ಸ್ವಚ್ಛಗೊಳಿಸಿಕೊಂಡರೆ ತೀರ್ಥಕ್ಷೇತ್ರ, ಧರ್ಮಕ್ಷೇತ್ರಗಳಿಗೆ ಹೋಗಿಬಂದಂತೆ. ಅನುಭವ ಮಂಟಪದಿಂದ ಮನಸ್ಸು ಸ್ವಚ್ಛಗೊಳುತ್ತದೆ. ಭ್ರಷ್ಟಚಾರ, ಅನಾಚಾರ, ಅತ್ಯಾಚಾರ ವಿಚಾರಗಳ ಬದಲಾಗಿ ಸದಾಚಾರ ವಿಚಾರಗಳನ್ನು ಬಿತ್ತಿಬೆಳೆದವರು ಶರಣರು” ಎಂದರು.
ಹುಲಸೂರಿನ ಶಿವಾನಂದ ಶ್ರೀ ಮಾತನಾಡಿ, “ಬಂಧು ಬಾಂಧವರನ್ನು ಕಳೆದುಕೊಳ್ಳಬಹುದು. ಆದರೆ, ಭಾವನೆಗಳನ್ನು ಕಳೆದುಕೊಳ್ಳಬಾರದು. ಭಾವನಾತ್ಮಕ ಜೀವಿ ಕಲ್ಲನ್ನು ಮಾತನಾಡಿಸುತ್ತಾನೆ. ಮತ್ತೊಬ್ಬರನ್ನು ನೋಡಿ ಆಡಂಬರದ ಜೀವನಕ್ಕೆ ಸಾಲ ಮಾಡಲು ಹೋಗಬೇಡಿ. ಸರಳವಾಗಿ ನೆಮ್ಮದಿಯಾಗಿ ಬದುಕಬೇಕು” ಎಂದು ಹೇಳಿದರು.
ವೇಮನ ಮಠ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ, ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನಾರಾಯಣ ಗುರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಇರಕಲ್ ಮಠದ ಬಸವ ಪ್ರಸಾದ ಸ್ವಾಮೀಜಿ, ಶಿವಸಿಂಪಿ ಗುರುಪೀಠದ ಬಸವ ಮಹಾಲಿಂಗ ಸ್ವಾಮೀಜಿ, ಕಾರಟಗಿ ಪ್ರವಚನಕಾರ ರಾಚಯ್ಯ ಸ್ವಾಮಿ, ಹೊಸಮಠದ ಶಾಂತಲಿಂಗ ಸ್ವಾಮೀಜಿ, ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಬಸವ ಮಹಾಮನೆಯ ಮಾತೆ ಸತ್ಯಕ್ಕ ಉಪಸ್ಥಿತರಿದ್ದರು.