ಬೀದರ
ಶ್ರಾವಣ ಮಾಸ ಪ್ರಯುಕ್ತ ಬೀದರಿನ ಕೊಳಾರ (ಕೆ) ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳದವರು ಹಮ್ಮಿಕೊಂಡಿದ್ದ ಪೂಜ್ಯ ಬಸವಪ್ರಭು ಸ್ವಾಮೀಜಿಯವರು ನಡೆಸಿಕೊಟ್ಟ ಒಂದು ತಿಂಗಳ ಜೀವನ ದರ್ಶನ ಪ್ರವಚನದ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.
ಜ್ಯೋತಿ ಪ್ರಜ್ವಲನ ಮಾಡಿ ಮಾತನಾಡಿದ ಬೀದರ ದಕ್ಷಿಣ ಶಾಸಕರಾದ ಶೈಲೇಂದ್ರ ಬೆಲ್ದಾಳೆಯವರು ಗುರು ಬಸವಾದಿ ಪ್ರಮಥರ ವಚನದ ಆಶಯದಂತೆ ಜೀವನ ನಡೆಸುವ ನಾನು ಪ್ರತಿನಿತ್ಯ ಒಂದು ವಚನವಾದರೂ ಓದಿ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುವೆ. ಅವರ ವಚನಗಳು ಸುಲಿದ ಬಾಳೆಹಣ್ಣಿನಂತ ಸರಳ ಇದ್ದು ಜೀವನ ದರ್ಶನ ಮಾಡಿಸುತ್ತವೆ ಎಂದು ನುಡಿದರು.

ನಾನು ಶಾಸಕನಾದ ಮೇಲೆ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರಕ್ಕೆ ಹೆಚ್ಚು ಹೊತ್ತು ನೀಡುತ್ತಿದ್ದೇನೆ. ನಮ್ಮ ಅಧಿಕಾರ ಅವಧಿಯಲ್ಲಿ ಜನ ಮೆಚ್ಚುವಂತಹ ಕೆಲಸ ಮಾಡುತ್ತಿರುವೆ. ಬಸವಣ್ಣನವರು ಈಗ ಇಲ್ಲ ಆದರೆ ಅವರು ಮಾಡಿದ ಕಾರ್ಯಗಳು ನೀಡಿದ ಸಂದೇಶ ನಮಗೆ ಮಾರ್ಗದರ್ಶಕವಾಗಿವೆ ಹಾಗೆಯೇ ನಾವು ಇಂದಲ್ಲ ನಾಳೆ ಹೋಗುತ್ತೇವೆ ನಾವು ಮಾಡುವ ಕಾರ್ಯಗಳು ಉಳಿಯಬೇಕೆಂದರಲ್ಲದೆ, ಮೂರನೇ ಹಂತಸ್ತಿನ ಬಸವ ಮಂಟಪದ ಕಟ್ಟಡಕ್ಕೆ ಈಗಾಗಲೇ 30 ಲಕ್ಷ ನೀಡಿದ್ದು, ಇನ್ನುಳಿದ ಕಾಮಗಾರಿಗೆ ಇನ್ನೂ 50 ಲಕ್ಷ ನೀಡುತ್ತೇನೆ ಎಂದು ಭರವಸೆ ನೀಡಿದರು.
ಪೂಜ್ಯ ಬಸವಪ್ರಭು ಸ್ವಾಮೀಜಿಯವರು ಒಂದು ತಿಂಗಳ ನಡೆಸಿಕೊಟ್ಟ ಜೀವನ ದರ್ಶನ ಪ್ರವಚನದಿಂದ ನೀವೆಲ್ಲ ಪರಿವರ್ತನೆ ಹೊಂದಬೇಕು, ಹೀಗೆ ನಮ್ಮ ಮತಕ್ಷೇತ್ರದಲ್ಲಿ ಪೂಜ್ಯರು ನಿರಂತರ ಪ್ರವಚನಗಳನ್ನು ಹಮ್ಮಿಕೊಂಡು ಜನರಲ್ಲಿ ಶಾಂತಿ ವಾತಾವರಣ ನಿರ್ಮಿಸಲು ಶ್ರಮಿಸಬೇಕೆಂದರು.
ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಬೀದರಿನ ಖ್ಯಾತ ಉದ್ದಮಿಗಳಾದ ಸಂತೋಷ ತಾಳಂಪಳ್ಳಿ ಮಾತನಾಡಿ, ಮಾನವ ಜೀವನ ಸುಳ್ಳು ಮೋಸ ವಂಚನೆಯಿಂದ ತುಂಬಿದೆ; ನೈತಿಕತೆ, ಧಾರ್ಮಿಕತೆ, ಆಧ್ಯಾತ್ಮಿಕತೆಯಿಂದ ತುಂಬಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬೀದರಿನ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಮತ್ತು ನೂತನ ಅನುಭವ ಮಂಟಪ ಕಟ್ಟಡದ ತಾಂತ್ರಿಕ ಸಲಹೆಗಾರರಾದ ಶಿವಶಂಕರ ಕಾಮಶೆಟ್ಟಿ ಮಾತನಾಡಿ, ಬಸವಾದಿ ಶರಣರು ನಡೆದಾಡಿದ ಪುಣ್ಯಭೂಮಿ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪ ಇದು ಕೇವಲ ಸ್ಥಾವರ ಕಟ್ಟಡವಲ್ಲ, ಅಲ್ಲಿ ಜನರಿಗೆ ಬೇಕಾದ 770 ಕಂಭಗಳಲ್ಲಿ ಮೂಡಿಸುವ ವಚನ ಸಂದೇಶಗಳ ಅರಿವು ನೀಡುವ ಜಂಗಮಾತ್ಮಕ ಕಟ್ಟಡವಾಗಿದೆ.
ಅನುಭವ ಮಂಟಪ ನಿರ್ಮಾಣವಾದರೆ ಬೀದರ ಜಿಲ್ಲೆ ಸಾಕಷ್ಟು ಆರ್ಥಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದುತ್ತದೆ ಎಂದರಲ್ಲದೆ, ಬಸವಾದಿ ಪ್ರಮಥರ ವಚನಗಳು ಸಾರ್ವಕಾಲಿಕ ಸತ್ಯದಿಂದ ಕೂಡಿವೆ ಅವುಗಳ ಪ್ರಚಾರ ಮತ್ತು ಪ್ರಸಾರ ಕಾರ್ಯ ಇಂದೆಂದಿಗಿಂತಲೂ ಇಂದು ಅವಶ್ಯಕತೆ ಇದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಕಲಬುರ್ಗಿಯ ನಿವೃತ್ತ ಪ್ರಾಂಶುಪಾಲರಾದ ವೈಜನಾಥ ಹುಡಗೆ ಮಾತನಾಡಿ, ನಮ್ಮ ಜೀವನದಲ್ಲಿ ತೃಪ್ತಿಕರ ಜೀವನ ನಡೆಸಬೇಕೆಂದರೆ ಧಾರ್ಮಿಕ ಪ್ರವಚನಗಳನ್ನು ಕೇಳಬೇಕು. ಪ್ರವಚನದಿಂದ ನಾವು ಅಮೂಲಾಗ್ರವಾಗಿ ಬದುಕನ್ನು ಕಟ್ಟಿಕೊಳ್ಳುತ್ತೇವೆ. ಲಿಂಗಾನಂದ ಸ್ವಾಮಿಗಳು ಪ್ರಾರಂಭ ಮಾಡಿದ ಪ್ರವಚನಗಳು ಎಂದಿಗೂ ಸ್ಮರಣೀಯವಾಗಿವೆ. ಲಿಂಗಾನಂದ ಸ್ವಾಮೀಜಿಯವರು ಮತ್ತು ಮಾತೆ ಮಹಾದೇವಿಯವರು ಹುಟ್ಟು ಹಾಕಿದ ರಾಷ್ಟ್ರೀಯ ಬಸವದಳ ನಮ್ಮ ಊರಲ್ಲಿ ಇಂದು ಹೆಮ್ಮರವಾಗಿ ಬೆಳೆದಿದೆ.
ಬಸವ ಮಂಟಪದ ಕಟ್ಟಡದಲ್ಲಿ ಇಂದು ಅವರ ಶಿಷ್ಯರಾದ ಸರಳ ಸಜ್ಜನಿಕೆಯ ಪೂಜ್ಯರಾದ ಬಸವಪ್ರಭು ಸ್ವಾಮೀಜಿಯವರು ಪ್ರವಚನ ನಡೆಸಿಕೊಟ್ಟು ಜ್ಞಾನದ ಬೆಳಕು ಚೆಲ್ಲಿದ್ದಾರೆ. ನಮ್ಮ ಊರಲ್ಲಿ ಯಾವುದೇ ಜಾತಿ ಮತ ಪಂಥವಿಲ್ಲದೆ ಬಸವ ತತ್ವ ಆಚರಣೆ ಮಾಡುತ್ತಿರುವುದರಿಂದ ನಮ್ಮ ಗ್ರಾಮಕ್ಕೆ ಶರಣ ಕೊಳಾರ ಎಂದು ಭಾಲ್ಕಿಯ ಲಿಂ. ಚನ್ನಬಸವ ಪಟ್ಟದ್ದೇವರು ಹೇಸರಿಟ್ಟಿದ್ದು ನಮಗೆ ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೊಳಾರ ರಾಷ್ಟ್ರೀಯ ಬಸವದಳ ಅಧ್ಯಕ್ಷರಾದ ಅಶೋಕ ಶಂಭು ಮಾತನಾಡಿ, ನಮ್ಮ ಊರಿನ ಬಸವ ಮಂಟಪದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ ಜೀವನ ದರ್ಶನ ಪ್ರವಚನವನ್ನು ಯಶಸ್ವಿಯಾಗಿ ನಡೆಸಿಕೊಡುವುದರ ಜೊತೆಗೆ ಅರಿವು ಆಚಾರಕ್ಕೆ ತರಬೇಕೆಂದು ಲಿಂಗದೀಕ್ಷೆ ಅಭಿಯಾನ ಹಮ್ಮಿಕೊಂಡು ಜಾತ್ಯಾತೀತವಾಗಿ ಮನೆ ಮನೆಗೆ ತೆರಳಿ ಎಲ್ಲರಿಗೂ ದೀಕ್ಷೆ ನೀಡಿದ್ದಾರೆ. ತಮ್ಮ ಪ್ರವಚನದಲ್ಲಿ ವಿಶೇಷ ವ್ಯಕ್ತಿಗಳನ್ನು ಕರೆಯಿಸಿ ಅವರಿಂದ ದೇಶಭಕ್ತಿ, ಭಜನೆ, ವಚನ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟು ನಮ್ಮ ಊರಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಪೂಜ್ಯ ಬಸವಪ್ರಭು ಸ್ವಾಮೀಜಿಯವರು ಮಾತನಾಡಿ, ಗುರು ಲಿಂಗ ಜಂಗಮ ಭಕ್ತಿಗೆ ಹೆಸರಾದ ಕೊಳಾರ ಗ್ರಾಮದಲ್ಲಿ ಜೀವನ ದರ್ಶನ ಪ್ರವಚನ ನಡೆಸಿಕೊಟ್ಟ ಪುಣ್ಯ ನನಗೆ ಲಭಿಸಿದೆ. ಶರಣರು ನುಡಿದಂತೆ ನಡೆದ ಮಾರ್ಗ ಸಾಮಾನ್ಯವಾದುದಲ್ಲ. ಇಂದು ಪ್ರತಿಯೊಂದು ಗ್ರಾಮಗಳು ಅಸಹಿಷ್ಣುತೆಯಿಂದ ಬಳಲುತ್ತಿವೆ ಆದರೆ ಕೊಳಾರ ಗ್ರಾಮ ಪ್ರತಿಯೊಂದು ಕಾಯಕ ಜನಾಂಗದವರು ಒಗ್ಗಟ್ಟಾಗಿ ಬಸವ ರಥ ಎಳೆಯುತ್ತಿರುವುದು ಶ್ಲಾಘನೀಯ ಕಾರ್ಯವೆಂದರಲ್ಲದೆ, ಶ್ರಾವಣ ಮಾಸದ ಪ್ರವಚನ ಕೇವಲ ಒಂದು ತಿಂಗಳಷ್ಟೇ ನಡೆಯಿತು ಅಷ್ಟೆ. ಆದರೆ ಪ್ರತಿವಾರ ರವಿವಾರ ಹಮ್ಮಿಕೊಳ್ಳುವ ಸಾಮೂಹಿಕ ಪ್ರಾರ್ಥನೆ ಮತ್ತು ದಾಸೋಹ ಎಡೆಬಿಡದೆ ನಡೆಸಿಕೊಂಡು ಬರುತ್ತಿರುವ ರಾಷ್ಟ್ರೀಯ ಬಸವದಳದ ಕಾರ್ಯ ಅಭನಂದನೀಯವಾಗಿದೆ ಎಂದರು.
ಬೀದರಿನ ಶಿಕ್ಷಣ ಇಲಾಖೆಯ ಸಹಾಯಕ ಯೋಜನಾಧಿಕಾರಿಗಳಾದ ಗುಂಡಪ್ಪ ಹುಡಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಶಂಭು, ಗುರುದಾಸ ಧುಮ್ಮಾಳೆ, ಸಂತೋಷ ಪಾಟೀಲ ಝೀರಾ, ಸಂಗಮೇಶ ತೊಗರಖೇಡ, ಶೈಲಜಾ ಪಾಪಡೆ, ಮಂಗಲಾ ಮಾತನಾಡಿದರು.
ಬಸವ ಮಂಟಪಕ್ಕಾಗಿ ದುಡಿದ ಹಿರಿಯರಾದ ಅಮೃತಪ್ಪ ಶಂಭು, ಸಂಗನ ಬಸವ ಹುಡಗೆ ಅವರನ್ನು ಸ್ಮರಿಸಲಾಯಿತು. ಈಗಿರುವ ಹಿರಿಯರಿಗೆ ಮತ್ತು ಒಂದು ತಿಂಗಳ ದಾಸೋಹ ಸೇವೆ ಸಲ್ಲಿಸಿದ ಶರಣರಿಗೆ ವಿಶೇಷ ಸತ್ಕಾರ ಮಾಡಲಾಯಿತು.
ಶ್ರೀನಿಧಿ, ಶ್ರಾವಣಿ ವಚನ ನೃತ್ಯ ಮಾಡಿದರು. ವಿಜಯಲಕ್ಷ್ಮಿ ಕೆಂಗನಾಳ ಮತ್ತು ಬಸವಕುಮಾರ ವಚನ ಸಂಗೀತ ನಡೆಸಿಕೊಟ್ಟರು. ರಾಷ್ಟ್ರೀಯ ಬಸವದಳದ ಮಹಿಳಾ ಘಟಕದವರು ವಚನ ಭಜನೆ ನಡೆಸಿಕೊಟ್ಟರು.
ಸಂತೋಷ ಶಂಭು, ಗಿರಿಜಾ ಸಿದ್ಧಣ್ಣ, ಪಾರ್ವತಿ ಪಾಟೀಲ, ಶ್ರೀಮಂತ ಸೋಲಪೂರ, ಶಿವರಾಜ ಮಾದಪ್ಪಾ, ಪ್ರಶಾಂತ ಶರಗಾರ, ವೈಜಮ್ಮ, ಅರ್ಜುನಪ್ಪ, ಮಾರುತೆಪ್ಪ, ನೀಲಕಂಠಪ್ಪ ಪಾಪಡೆ, ಉಪಸ್ತಿತರಿದ್ದರು. ರವಿ ಶಂಭು ಸ್ವಾಗತಿಸಿದರೆ, ರವಿ ಪಾಪಡೆ ನಿರೂಪಿಸಿದರು, ಶಕುಂತಲಾ ಯಾಬಾ ವಂದಿಸಿದರು.