ಗದಗ್
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಫೆಬ್ರುವರಿ ೧೯ ರಂದು ಇರುವ ಕಾರಣ ತಮ್ಮೆಲ್ಲರಿಗೂ ಶುಭಾಶಯಗಳನ್ನು ತಿಳಿಸುತ್ತಾ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.
ಶಿವಾಜಿ ಮಹಾರಾಜರ ಬಗ್ಗೆ ಸರಿಯಾದ ಇತಿಹಾಸ ತಿಳಿಯದ ಮಂದಗೇಡಿಗಳು, ಸರ್ವಜನರ ನಾಯಕನಾಗಿದ್ದ ಶಿವಾಜಿಯನ್ನು ಒಂದೇ ಕೋಮಿಗೆ ಸೇರಿಸಿ ಆತನ ನಿಜವಾದ ವ್ಯಕ್ತಿತ್ವಕ್ಕೆ ಮಸಿಬಳಿದಿದ್ದಾರೆ.
ಶಿವಾಜಿ ತನ್ನ ಆಸ್ಥಾನದಲ್ಲಿ ಬಹಳಷ್ಟು ಮುಸ್ಲಿಂ ಸೈನಿಕರನ್ನು ಹೊಂದಿದ್ದ, ಅವರಿಂದ ತನ್ನ ಸಾಮ್ರಾಜ್ಯದಲ್ಲಿ ಅನೇಕ ಜನಪರವಾದ ಆಡಳಿತವನ್ನು ಮಾಡಿದ್ದ ಎನ್ನುವುದಕ್ಕೆ ಇತಿಹಾಸದಲ್ಲಿ ಅನೇಕ ಪುರಾವೆಗಳು ಸಿಗುತ್ತವೆ. ಆದರೆ ದುರಂತವೆಂದರೆ ಇಂದು ಶಿವಾಜಿ ಮುಸ್ಲಿಂರ ವಿರೋಧಿ, ಹಿಂದೂ ಸಾಮ್ರಾಟ ಎಂದು ಹೆಸರಿಸುತ್ತಲೇ ಒಂದು ಕೊಮಿನ ಜನರನ್ನು ದ್ವೇಷದ ಹಿನ್ನೆಲೆಯಲ್ಲಿ ನೋಡುವ ವಾತಾವರಣ ಸೃಷ್ಠಿಯಾಗಿದೆ.
ಅಷ್ಟಕ್ಕೂ ಗದಗ ನಗರಕ್ಕೆ ಇದೇ ೧೯ರಂದು ಶಿವಾಜಿ ಜಯಂತಿಗೆ ಮಾದಾರ ಚನ್ನಯ್ಯ ಸ್ವಾಮೀಜಿ ಆಗಮಿಸುತ್ತಿದ್ದಾರೆ ಎನ್ನುವ ವದಂತಿ ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ ಮಾದಾರ ಚನ್ನಯ್ಯಸ್ವಾಮಿ ಈ ಕಾರ್ಯಕ್ರಮಕ್ಕೆ ಬರುವುದನ್ನು ನಾನು ಬಲವಾಗಿ ವಿರೋಧಿಸುತ್ತೇನೆ.
ಶೋಷಿತ ಸಮುದಾಯಗಳ ಬಗ್ಗೆ ತಾತ್ಸಾರವಿರುವ, ಇವತ್ತಿಗೂ ದಲಿತ ಸಮುದಾಯಕ್ಕೆ ಅಪಮಾನ ಮಾಡಲೆಂದು ಹುಟ್ಟಿಕೊಂಡಿರುವ ಸದಾ ಕೊಮುದ್ವೇಷ, ಜಾತಿನಿಂದನೆಯಂತಹ ಪ್ರಕರಣಗಳಲ್ಲಿ ಅತೀ ಹೆಚ್ಚಾಗಿ ತೊಡಗಿರುವ ಸಂಘಟನೆಯೊಂದರ ಆತಿಥ್ಯವನ್ನು ಸ್ವೀಕರಿಸಿ ಸ್ವಾಮೀಜಿ ಬರುತ್ತಿರುವುದಕ್ಕೆ ನನ್ನ ವಿರೋಧವಿದೆ.
ಸಮಾಜದ ಹಿತರಕ್ಷಣೆ, ಸಮಾಜಕ್ಕೆ ಆಗಬೇಕಾದ ಕೆಲಸ ಕಾರ್ಯಗಳಿಗೆ, ಶೋಷಿತ ಸಮುದಾಯದ ಕಾಳಜಿ ವಹಿಸಿ ಅದರ ಅಭಿವೃದ್ಧಿಗೆ ಪೂರಕವಾಗಿ ಮಾತನಾಡಲು ಬರುವುದಾದರೆ ಒಪ್ಪಬಹುದು. ಆದರೆ ಇದೇ ಸ್ವಾಮಿಯನ್ನು ಬಳಸಿಕೊಂಡು ಸಮುದಾಯದ ವೈಚಾರಿಕ ನಿಲುವು, ಹೋರಾಟದ ಧ್ವನಿಯನ್ನು ಅಡಗಿಸಲು ಸಮುದಾಯದ ಒಬ್ಬ ಸ್ವಾಮಿ ಮಾತನಾಡಲು ಬರುವುದಾದರೆ ಅದಕ್ಕೆ ಖಂಡಿತಾ ನನ್ನ ವಿರೋಧವಿದೆ.
ಈ ಹಿಂದೆ ಇದೇ ಕಾರ್ಯಕ್ರಮಕ್ಕೆ ಕೊಮುದ್ವೇಷ ಬೆಳೆಸಲು ಬರುತ್ತಿದ್ದ ಮುತಾಲಿಕ್ ಅವರನ್ನು ನಾವೆಲ್ಲ ಗದಗಗೆ ಬರದಂತೆ ತಡೆಹಿಡಿದಿದ್ದೆವು. ಅದರಿಂದ ಗದಗನಲ್ಲಿ ಅವರ ಕೋಮು ಭಾಷಣಕ್ಕೆ ದೊಡ್ಡ ಪೆಟ್ಟು ಕೊಟ್ಟಿದ್ದೆವು. ಆದರೆ ಪ್ರಸ್ತುತ ಮಾದಾರ ಚನ್ನಯ್ಯಸ್ವಾಮಿ ಬರುವುದನ್ನು ನಾವು ಇದೇ ಅರ್ಥದಲ್ಲಿ ವಿರೋಧಿಸಬೇಕಿದೆ.
ಗದಗ ಜಿಲ್ಲೆಯ ಅಂಬೇಡ್ಕರ್ ಅನುಯಾಯಿಗಳು ಎಲ್ಲಿಯೂ ಸಹ ಕೋಮು ವಿಷಬೀಜಕ್ಕೆ ಬಲಿಯಾಗಿಲ್ಲ, ಅಲ್ಲಿ ಇಲ್ಲಿ ಕೆಲವರನ್ನು ಬಿಟ್ಟು ವೈಚಾರಿಕ ನಿಲುವು ತಾಳಿದವರು ಹೆಚ್ಚು. ನಾವೆಲ್ಲಾ ಅನೇಕ ಸಂಘಟನೆಗಳ ಮುಂಚೂಣಿಯಲ್ಲಿದ್ದೇವೆ. ನಮ್ಮದೇ ಆದ ಸಿದ್ದಾಂತದ ಹೋರಾಟದಲ್ಲಿ ಭಾಗಿಯಾಗಿದ್ದೇವೆ. ಪ್ರಸ್ತುತ ಇಂತಹ ಕೋಮು ವಿಷಯಗಳಿಗೆ ಮತ್ತಷ್ಟು ಬೆಂಬಲವಾಗಿ ನಿಲ್ಲಲು ಬರುತ್ತಿರುವ ಸ್ವಾಮಿಯನ್ನು, ಅವರ ನಡೆಯನ್ನು ನಾವು ಖಂಡಿಸುತ್ತಲೇ ಅವರ ಬರುವಿಕೆಯನ್ನು ಸಾಧ್ಯವಾದಷ್ಟು ತಡೆಯಬೇಕಿದೆ.
ಜಿಲ್ಲೆಯ ಶೋಷಿತ ಸಂಘಟನೆಗಳು ಈ ಬಗ್ಗೆ ಮಾತನಾಡಬೇಕಿದೆ. ನಿಮ್ಮ ಸಂಘಟನೆಗಳ ಸೈದ್ದಾಂತಿಕ ನಿಲುವನ್ನು ಪತ್ರಿಕೆಗಳ ಮೂಲಕ, ವ್ಯಾಟ್ಸಪ್ ಸಂದೇಶಗಳ ಮೂಲಕ ಮಾಧ್ಯಮಗಳ ಮೂಲಕ ಸ್ಪಸ್ಟಪಡಿಸಬೇಕಿದೆ. ಇಂತಹ ನಿಲುವು ಕೇವಲ ಅಂಬೇಡ್ಕರ್ ಅನುಯಾಯಿಗಳಿಗೆ ಮಾತ್ರ ಬರಲು ಸಾಧ್ಯ. ಅಂಬೇಡ್ಕರ್ ಆಶಯದಲ್ಲಿ ನಡೆಯುವ ಸಂಘಟನೆಗಳಿಗೆ ಬರಲು ಸಾಧ್ಯ.
ನಾನೊಬ್ಬನು ವಿರೋಧಿಸಿದರೆ ಅದಕ್ಕೆ ನಮ್ಮವರೆ ಜಾತಿ ಬಣ್ಣ ಬೆರೆಸುತ್ತಾರೆ ಇದನ್ನು ಎಲ್ಲರೂ ಒಕ್ಕೂರಲಿನಿಂದ ವಿರೋಧಿಸಬೇಕಿದೆ. ಗದಗ ಇಂದು ವೈಚಾರಿಕವಾಗಿ, ವೈಜ್ಞಾನಿಕ ಮತ್ತು ಸೈದ್ದಾಂತಿಕ ವಿಚಾರಗಳ ಮೇಲೆ ಹೆಜ್ಜೆಯನ್ನು ಇಡುತ್ತಿದೆ, ಇದನ್ನು ಮತ್ತೆ ಕೆಡವಲು ಸತತ ಪ್ರಯತ್ನ ಇಂತಹ ಕೋಮು ವಿಭಜನೆಯ ಕಾರ್ಯಕ್ರಮಗಳ ಮೂಲಕ ಆಗಾಗ ನಡೆಯುತ್ತಲೇ ಇರುತ್ತವೆ. ಅವರು ಮಾಡುವ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ, ಆದರೆ ನಮ್ಮವರೆನಿಸಿಕೊಂಡವರು ಅವರ ವೇದಿಕೆಯಲ್ಲಿ ನಿಂತು ಕೊಮುಭಾವನೆಗೆ ಒಳಗಾಗಿ ನಮ್ಮವರಲ್ಲಿ ಬಿತ್ತುವ ವಿಷಬೀಜ ಬಹಳ ಅಪಾಯಕಾರಿ.
ಪ್ರಜ್ಞಾವಂತ ಸಮಾಜ ಇದರ ಬಗ್ಗೆ ಆಲೋಚಿಸಬೇಕಿದೆ ಎಚ್ಚರವಹಿಸಬೇಕಿದೆ.
