ತುಮಕೂರು
ಡಾ.ಶಿವಕುಮಾರ ಸ್ವಾಮೀಜಿಯವರ 6ನೇ ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಲು ಶ್ರೀ ಮಠಕ್ಕೆ ಸಾವಿರಾರು ಭಕ್ತಾದಿಗಳು ಮಂಗಳವಾರ ಬಂದರು. ನಡೆದಾಡುವ ದೇವರು ಎಂದೇ ನಾಡಿನ ಉದ್ದಗಲಕ್ಕೂ ಪ್ರಸಿದ್ದರಾಗಿದ್ದ ಲಿಂಗೈಕ್ಯ ಸಿದ್ದಗಂಗೆಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು.

ಮುಂಜಾನೆಯೇ ಇಷ್ಟಲಿಂಗ ಪೂಜೆ ನೆರವೇರಿಸಿದ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಲಿಂ.ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯಲ್ಲಿ ಪೂಜಾ ವಿಧಾನಗಳಾದ ಮಹಾ ರುದ್ರಾಭಿಷೇಕ, ರಾಜೋಪಚಾರ, ಬಿಲ್ವಾರ್ಚನೆಯೊಂದಿಗೆ ನೆರವೇರಿದವು, ಹಲವು ಮಠಾಧೀಶರು, ಹರಗುರುಚರಮೂರ್ತಿಗಳು ನಸುಕಿನಲ್ಲೆ ಆರಂಭವಾದ ಶ್ರೀಗಳ ಗದ್ದುಗೆ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ರುದ್ರಾಕ್ಷಿ ಮಂಟಪದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ ಶ್ರೀಗಳ ಗದ್ದುಗೆ ಮಂದಿರದಿಂದ ಆರಂಭವಾಗಿ ವಸ್ತುಪ್ರದರ್ಶನದ ಆವರಣದವರೆಗೆ ಸಾಗಿತು, ಮತ್ತೆ ವಸ್ತು ಪ್ರದರ್ಶನದ ಆವರಣದಿಂದ ಗದ್ದುಗೆ ಮಂದಿರದ ವರೆಗೆ ಮೆರವಣಿಗೆ ಸಾಗಿ ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ಕರಡಿ ವಾದ್ಯ, ನಂದಿಧ್ವಜ ಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಹಾಗೂ ವಾದ್ಯ ಮೇಳಗಳು ಪಾಲ್ಗೊಂಡು ಮೆರುಗು ನೀಡಿದವು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಭಾ ಸಮಾರಂಭ ಉದ್ಘಾಟಿಸಿದರು.
ಮೇಘಾಲಯ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಸಿ.ಹೆಚ್. ವಿಜಯಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶ್ರೀ ಸಿದ್ದಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮಿ ಹಾಗೂ ಉತ್ತಾಧಿಕಾರಿ ಶ್ರೀ ಶಿವ ಸಿದ್ಧೇಶ್ವರ ಸ್ವಾಮಿ, ಮೈಸೂರಿನ ಶ್ರೀ ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಅಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಶ್ರವಣಬೆಳಗೊಳ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸರಾದ ನಾಡೋಜ ಡಾ: ಗೊ.ರು.ಚನ್ನಬಸಪ್ಪ ಅವರಿಗೆ ಸಿದ್ಧಗಂಗಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರಿನ ಸಾಹಿತಿ ಡಾ: ಹೆಚ್.ಟಿ. ಶೈಲಜಾ ಹಾಗೂ ತುಮಕೂರಿನ ಸಮಾಜ ಸೇವಕ ಜಿ.ಎನ್. ಬಸವರಾಜಪ್ಪ ಅವರಿಗೆ ಸಿದ್ಧಗಂಗಾ ಶಿವಕುಮಾರಶ್ರೀ ಪ್ರಶಸ್ತಿ, ಬೆಂಗಳೂರಿನ ಎಸ್. ಶಿವಾನಂದ ಶರ್ಮ, ಎಸ್.ಆರ್. ರೇಣುಕಾರಾಧ್ಯ, ವೆಂಕಟೇಶ ಗೌಡ, ಚಾಮರಾಜ ನಗರ ಜಿಲ್ಲೆ ಮುಳ್ಳೂರಿನ ಶಿವಕುಮಾರಮೂರ್ತಿ, ಚಿಕ್ಕಮಗಳೂರು ಜಿಲ್ಲೆ ಬಾಸೂರಿನ ಬಿ.ಎಂ. ಪರಮೇಶ್ವರಪ್ಪ(ಮರಣೋತ್ತರ) ಸಂಘಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
