ಬೆಳಗಾವಿ
ತುಮಕೂರಿನ ಸಿದ್ಧಗಂಗಾ ಮಠವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಪೂರೈಸುವ ನೀರನ್ನು ಬಳಸಿಕೊಂಡಿದ್ದರೆ ತಪ್ಪೇನೂ ಇಲ್ಲ. ಇದರ ಬಾಬ್ತು ಏನೇ ಇದ್ದರೂ ಅದನ್ನು ಮನ್ನಾ ಮಾಡಲಾಗುವುದು. ಈ ಸಂಬಂಧ ಈಗಾಗಲೇ ಕೆಐಎಡಿಬಿ ಸಿಇಒ ಮತ್ತು ಮುಖ್ಯ ಎಂಜಿನಿಯರ್ ಜತೆ ಮಾತನಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಗುರುವಾರ ಸುವರ್ಣ ಸೌಧದಲ್ಲಿ ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಸಿದ್ಧಗಂಗಾ ಮಠವು ಪ್ರತಿದಿನವೂ 10 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಅನ್ನ ದಾಸೋಹ ಶಿಕ್ಷಣ ನೀಡುತ್ತಾ ಬಂದಿದೆ. ಸರಕಾರ ಕೂಡ ಇದನ್ನು ಸಿಎಸ್ಆರ್ ರೀತಿಯಲ್ಲಿ ತನ್ನ ಸಾಮಾಜಿಕ ಜವಾಬ್ದಾರಿ ಎಂದು ಭಾವಿಸುತ್ತದೆ. ಮಠಕ್ಕೆ ನೋಟಿಸ್ ಕೊಟ್ಟಿದ್ದರೆ ಅದು ತಪ್ಪು. ಸಿದ್ಧಗಂಗಾ ಮಠವು ವಿಶ್ವದಲ್ಲೇ ಶ್ರೇಷ್ಠವಾದ ಮಠವಾಗಿದೆ. ಅಲ್ಲಿ ಜಾತ್ಯತೀತವಾಗಿ ಶಿಕ್ಷಣ ಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲೂ ನೀರನ್ನು ಬಳಸಿಕೊಳ್ಳಲು ಮಠಕ್ಕೆ ಅನುಮತಿ ಕೊಡಲಾಗುವುದು’ ಎಂದು ಸ್ಪಷ್ಟಪಡಿಸಿದರು.