ಸ್ವಂತ ಸೌರ ಶಕ್ತಿ ಘಟಕದಿಂದ ಸಿದ್ದಗಂಗಾ ಮಠಕ್ಕೆ ತಿಂಗಳಿಗೆ 25 ಲಕ್ಷ ಉಳಿತಾಯ

ಎಂ. ಎ. ಅರುಣ್
ಎಂ. ಎ. ಅರುಣ್

ಬೆಂಗಳೂರು

ಸ್ವಂತ ಸೌರ ಶಕ್ತಿ ಉತ್ಪಾದನೆಯ ಹೊಸ ಘಟಕ ಶುರು ಮಾಡಿರುವ ಸಿದ್ದಗಂಗಾ ಮಠ ವಿದ್ಯುತ್‌ ಬಿಲ್‌ ನಿಂದ ಪ್ರತಿ ತಿಂಗಳು 25 ಲಕ್ಷ ಉಳಿಸುತ್ತಿದೆ.

ಸಿದ್ದಗಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಪ್ರತಿ ತಿಂಗಳು 3 ಲಕ್ಷ ಯೂನಿಟ್ಟುಗಳ ತನಕ ವಿದ್ಯುಚ್ಛಕ್ತಿ ಬಳಸುತ್ತದೆ. ಈ ಎರಡೂ ಸಂಸ್ಥೆಗಳಿಂದ ತಿಂಗಳ ವಿದ್ಯುತ್ ಬಿಲ್ 25-30 ಲಕ್ಷದಷ್ಟು ಬರುತ್ತಿತ್ತು. ಡಿಸೆಂಬರ್ ತಿಂಗಳಿಂದ ಈ ಹಣ ಉಳಿತಾಯವಾಗುತ್ತಿದೆ.

ಸಿದ್ದಗಂಗಾ ಮಠವು ನವೆಂಬರ್ ತಿಂಗಳಲ್ಲಿ ವಿಜಯಪುರ ಜಿಲ್ಲೆಯ ಝಳಕಿ ಬಳಿ 2 ಮೆಗಾವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಉತ್ಪಾದನಾ ಘಟಕ ಶುರು ಮಾಡಿತು. ಸಿದ್ದಗಂಗಾ ಪೀಠಾಧ್ಯಕ್ಷರಾದ ಪೂಜ್ಯ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬೃಹತ್ ಕೈಗಾರಿಕಾ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಅವರು ನೂತನ ಘಟಕಕ್ಕೆ ಚಾಲನೆ ನೀಡಿದರು.

ಸರಕಾರದ ನೀತಿಯ ಪ್ರಕಾರ ವಿಜಯಪುರದಲ್ಲಿ ಉತ್ಪಾದನೆಯಾಗುವ ಅಷ್ಟೂ ವಿದ್ಯುತ್ತನ್ನು ಸಿದ್ದಗಂಗಾ ಮಠ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ (ಹೆಸ್ಕಾಂ) ವರ್ಗಾಯಿಸುತ್ತದೆ. ಅಷ್ಟೇ ಪ್ರಮಾಣದ ವಿದ್ಯುತ್ತನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ (ಬೆಸ್ಕಾಂ) ಉಚಿತವಾಗಿ ಪಡೆಯುತ್ತದೆ.

ಸಿದ್ದಗಂಗಾ ಮಠ ಸ್ವಂತವಾಗಿ ಸೌರ ವಿದ್ಯುತ್ತನ್ನು ಉತ್ಪಾದಿಸುತ್ತಿರುವುದು ಇದೇ ಮೊದಲಲ್ಲ. ಆರು ವರ್ಷದ ಹಿಂದೆ ಹೊಸದುರ್ಗದ ಬಳಿ ಒಂದು ಮೆಗಾವ್ಯಾಟ್ ಘಟಕವನ್ನು ಸ್ಥಾಪಿಸಿತ್ತು. ಆಗ ಆಸ್ಪತ್ರೆ ಮಾತ್ರವಿತ್ತು. ಈಗ ಮೆಡಿಕಲ್ ಕಾಲೇಜು ಶುರುವಾಗಿ, ಆಸ್ಪತ್ರೆ ಕೂಡ 800 ಬೆಡ್ ಗಳಿರುವ ಸಂಸ್ಥೆಯಾಗಿ ಬೆಳೆದು, ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವುದು ತಲೆನೋವಾಗಿತ್ತು.

ಏಪ್ರಿಲ್ ತಿಂಗಳಲ್ಲಿ ಮಠದ ವತಿಯಿಂದ ವಿಜಯಪುರದಲ್ಲಿ ಸೋಲಾರ ಪಾರ್ಕ್ ಸ್ಥಾಪಿಸುವ ಪ್ರಸ್ತಾವನೆಗೆ ಸ್ವಾಮೀಜಿಯವರಿಂದ ಹಸಿರು ನಿಶಾನೆ ದೊರಕಿತು. ಬಿಜಾಪುರದಲ್ಲಿ ನಿಯೋಗ್ರೀನ್ ಖಾಸಗಿ ಸಂಸ್ಥೆ ಸ್ಥಾಪಿಸಿರುವ 70 ಎಕರೆ ಸೋಲಾರ್ ಪಾರ್ಕಿನಲ್ಲಿ 6 ಎಕರೆ ವಿಸ್ತೀರ್ಣದ ಸ್ವಂತ ಸೌರ ಶಕ್ತಿ ಉತ್ಪಾದನಾ ಘಟಕ ಶುರು ಮಾಡಲು ನಿರ್ಧರಿಸಿತು.

ಸಿದ್ದಗಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಂಜೀವ ಕುಮಾರ್ ಅವರ ಪ್ರಕಾರ ಸೌರ ಶಕ್ತಿ ಉತ್ಪಾದನಾ ಘಟಕವನ್ನು ಸ್ಥಾಪಿಸುವುದು ಸುಲುಭದ ಮಾತಲ್ಲ. ಮೊದಲು ಕೆಪಿಟಿಸಿಎಲ್, ಹೆಸ್ಕಾಂ, ಬೆಸ್ಕಾಂಗಳಂತಹ ಹಲವಾರು ಇಲಾಖೆಗಳೊಂದಿಗೆ ವ್ಯವಹರಿಸಬೇಕಾಗುತ್ತದೆ. ನಂತರ ಘಟಕವನ್ನು ಸ್ಥಾಪಿಸಲು ಸಮಯ ಬೇಕಾಗುತ್ತದೆ. ಉತ್ಪಾದಿಸೋ ವಿದ್ಯುತ್ತನ್ನು ನಿರ್ವಹಿಸೋ ಸಾಮರ್ಥ್ಯ ಸ್ಥಳೀಯ ಎಸ್ಕಾಂ ಬಳಿ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.

“ಇಷ್ಟೆಲ್ಲಾ ಕೆಲಸ ಮಾಡಲು ಖಾಸಗಿ ಕಂಪನಿಗಳಿಗೇನೇ ಕನಿಷ್ಠ ಒಂದೂವರೆ ವರ್ಷ ಬೇಕಾಗುತ್ತದೆ. ಆದರೆ ಸಿದ್ದಗಂಗಾ ಮಠ ಇದನ್ನು ಬರೀ ಆರೇ ತಿಂಗಳಲ್ಲಿ ಮಾಡಿ ಮುಗಿಸಿದೆ. ಮೇ ತಿಂಗಳಲ್ಲಿ ಕೆಲಸ ಆರಂಭಿಸಿ ಮಾಡಿ ನವೆಂಬರ್ ತಿಂಗಳಲ್ಲಿ ಉತ್ಪಾದನೆ ಕೂಡ ಶುರು ಮಾಡಿದ್ದೇವೆ. ಇದು ಹೆಮ್ಮೆಯ ವಿಷಯ,” ಎಂದರು.

Share This Article
1 Comment

Leave a Reply

Your email address will not be published. Required fields are marked *