ಕುಷ್ಟಗಿ
ತಾಲೂಕಿನ ಮಾಲಗಿತ್ತಿ ಗ್ರಾಮದ ಶ್ರೀ ಚನ್ನಬಸವೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಲಿಂಗೈಕ್ಯ ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಏಳನೇ ಪುಣ್ಯಸ್ಮರಣೆ ಕಾರ್ಯಕ್ರಮ ಬುಧವಾರ ನಡೆಯಿತು.
ಉಪನ್ಯಾಸಕರಾಗಿ ಭಾಗವಹಿಸಿದ ಶಿಕ್ಷಕ ಮಹಾಂತೇಶ ಕಡಗದ ಅವರು ಮಾತನಾಡುತ್ತ, ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ತುಂಬಾ ಶಿಥಿಲಾವಸ್ಥೆಯಲ್ಲಿದ್ದ ಗದುಗಿನ ತೋಂಟದಾರ್ಯ ಮಠವನ್ನು ತುಂಬಾ ಶ್ರಮವಹಿಸಿ ನವೀಕರಣಗೊಳಿಸಿದರು.

ಕೃಷಿಕರಿಗಿಂತ ಕೃಷಿಕರಾಗಿ ಶ್ರೀಮಠದ ಜಮೀನಿನಲ್ಲಿ ದ್ರಾಕ್ಷಿ, ಬಾರಿ, ದಾಳಿಂಬೆ ಹಾಗೂ ವಿಶಿಷ್ಟ ರೀತಿಯ ಗಿಡಮರಗಳನ್ನು ನೆಟ್ಟು ಪ್ರಗತಿಪರ ಕೃಷಿಕರೆನಿಸಿಕೊಂಡರು. ಅನಾಥರನ್ನು, ನೊಂದು ಬಂದವರನ್ನು ತಂದೆ-ತಾಯಿಗಳಂತೆ ಸಲುಹಿದರು.
ಶ್ರೀಗಳು ಮಠದಲ್ಲಿ ಎಲ್ಲ ಧರ್ಮೀಯರನ್ನು ಆದರಿಸುತ್ತಿದ್ದರು. ಸಮಾಜದ ಕೋಮು ಸೌಹಾರ್ದತೆಗೆ ಅವಿರತ ಶ್ರಮಿಸಿದರು. ಹೀಗಾಗಿ ಭಾರತ ಸರಕಾರ ಪೂಜ್ಯರಿಗೆ ಕೋಮು ಸೌಹಾರ್ದತಾ ಪ್ರಶಸ್ತಿ ನೀಡಿ ಗೌರವಿಸಿತು ಎಂದರು.

ಸಂಸ್ಥೆಯ ತರಬೇತಿ ಅಧಿಕಾರಿಗಳಾದ ಬಸವರಾಜ ಅಂಗಡಿ ಅವರು ಮಾತನಾಡುತ್ತ, ಶ್ರೀಗಳು ದೂರದೃಷ್ಟಿಯವರಾಗಿದ್ದರು. ಅವರು ತಮ್ಮ ಬದುಕನ್ನೇ ಪುಸ್ತಕ ಪ್ರಕಟಣೆ ಹಾಗೂ ಸಮಾಜ ಕಲ್ಯಾಣಕ್ಕಾಗಿ ಸವೆಸಿದರು.
ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಒದಗಿಸಿ ಅವರ ಬಾಳಿಗೆ ಬೆಳಕಾದರು. ನಾಡು ನುಡಿಗಾಗಿ ಹೋರಾಡಿದರು ಎಂದರು.

ಕಾರ್ಯಕ್ರಮದಲ್ಲಿ ತರಬೇತಿ ಅಧಿಕಾರಿಗಳಾದ ನಾಲತ್ವಾಡಮಠ, ಬಸವರಾಜ ಗೆದಗೇರಿ, ಕೆ. ಮಂಜುನಾಥ, ಎಲಿಗಾರ, ಬೆಟಗೇರಿ ಹಾಗೂ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.