ಅಣ್ಣಿಗೇರಿ:
ಕನ್ನಡದ ಜಗದ್ಗುರು, ಜನಸಾಮಾನ್ಯರ ಸ್ವಾಮೀಜಿ, ಪುಸ್ತಕ ಜಗದ್ಗುರು ಎಂದು ಖ್ಯಾತರಾಗಿದ್ದ ಗದುಗಿನ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಸಂಜೆ 6 ಗಂಟೆಗೆ ಅಣ್ಣಿಗೇರಿಯಲ್ಲಿ ನಡೆಯಲಿದೆ.
ತಮ್ಮ ಕಂಚಿನ ಕಂಠದ ಮೂಲಕ ನಾಡಿನಾದ್ಯಂತ ವೈಚಾರಿಕ ಚಿಂತನೆಗಳು ಮತ್ತು ಬಸವ ತತ್ವಗಳನ್ನು ಪ್ರಸಾರ ಮಾಡಿದ ಶ್ರೀಗಳು, ಕನ್ನಡ ನಾಡು ನುಡಿ ಮತ್ತು ಪರಿಸರಗಳಿಗೆ ತೊಂದರೆ ಬಂದಾಗ ಬೀದಿಗಿಳಿದು ಹೋರಾಟ ಮಾಡಿದವರು. ಗೋಕಾಕ ಚಳುವಳಿ , ಪೋಸ್ಕೊ ಕಾರ್ಖಾನೆ ಸ್ಥಾಪನೆ ವಿರೋಧಿ ಹೋರಾಟ ಮತ್ತು ಕಪ್ಪತಗುಡ್ಡದ ಸಂರಕ್ಷಣೆಯ ಸಂದರ್ಭಗಳಲ್ಲಿ ಅವರು ಗಟ್ಟಿ ಧ್ವನಿಯಾಗಿ ನಿಂತವರು.
” ಮನುಷ್ಯ ಜಾತಿ ತಾನೊಂದೆ ವಲಂ ” ಎಂದು ಸಾವಿರ ವರ್ಷಗಳ ಹಿಂದೆಯೇ ಸಾರಿದ ಕನ್ನಡದ ಆದಿಕವಿ ಪಂಪನ ಜನ್ಮಸ್ಥಳ ಅಣ್ಣಿಗೇರಿಯಲ್ಲಿ ಸತತವಾಗಿ 21 ವರ್ಷಗಳ ಕಾಲ ಪ್ರತಿ ತಿಂಗಳು ಹುಣ್ಣಿಮೆಯ ದಿನ ಶಿವಾನುಭವ ಕಾರ್ಯಕ್ರಮಗಳನ್ನು ನಡೆಸಿದ ಶ್ರೀಗಳು ನಾಡಿನ ಪ್ರಮುಖ ವಿದ್ವಾಂಸರನ್ನು ಈ ಮೂಲಕ ಅಣ್ಣಿಗೇರಿಗೆ ಕರೆತಂದವರು.
ಕಲ್ಯಾಣಿ ಚಾಲುಕ್ಯರ ಉಪ ರಾಜಧಾನಿಯಾಗಿದ್ದ ಅಣ್ಣಿಗೇರಿ ಶ್ರೀಗಳಿಗೆ ಉಪರಾಜಧಾನಿಯಾಗಿದೆ ಎಂದು ನಾಡಿನ ಖ್ಯಾತ ಸಂಶೋಧಕರಾಗಿದ್ದ ಡಾ.ಎಂ.ಎಂ. ಕಲಬುರ್ಗಿಯವರು ಶಿವಾನುಭವ ಕಾರ್ಯಕ್ರಮದಲ್ಲಿ ನುಡಿದದ್ದು ಅವರ ಅಣ್ಣಿಗೇರಿಯ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ.
ಅಣ್ಣಿಗೇರಿಯ ಕಮಲಾಪೂರ ದರ್ಗಾಕ್ಕೆ ಜಾಗ ನೀಡಿದ ಪರಂಪರೆಯ ಮಠದ ಸ್ವಾಮೀಜಿಯಾಗಿದ್ದ ಅವರು, ಅಣ್ಣಿಗೇರಿಯಲ್ಲಿ ನಡೆಯುತ್ತಿದ್ದ ಶಿವಾನುಭವ ಗೋಷ್ಠಿಯ ವಾರ್ಷಿಕ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಜಾಮೀಯಾ ಮಸೀದಿಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಿದ್ದರು.
ಮುಸ್ಲಿಮರ ಮನೆಗಳಲ್ಲಿ ಶಿವಾನುಭವ ಕಾರ್ಯಕ್ರಮ ನಡೆಸಿದ ಅವರು ಸೌಹಾರ್ದತೆಗಾಗಿ ಬದುಕಿದ್ದವರು. ತಾವು ನಾಡಿನಾದ್ಯಂತ ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಕೋಮು ಸಾಮರಸ್ಯಕ್ಕಾಗಿ ಶ್ರಮಿಸಿದ ಅವರಿಗೆ ಭಾರತ ಸರಕಾರ ಕೋಮುಸೌಹಾರ್ದತೆಯ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿತ್ತು.

ಶ್ರೀಗಳು ಲಿಂಗೈಕ್ಯರಾದ ನಂತರ 2021ರಿಂದ ಅಣ್ಣಿಗೇರಿಯಲ್ಲಿ ಸ್ವಾಮೀಜಿಯವರ ಹೆಸರಿನಲ್ಲಿ ಪ್ರತಿವರ್ಷ ನಾಡಿನ ಒಬ್ಬ ಸಾಧಕರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಡಾ. ವೀರಣ್ಣ ರಾಜೂರ ( ಸಂಶೋಧನೆ ) – 2021, ಡಾ. ಅಬ್ದುಲ್ ಖಾದರ ನಡಕಟ್ಟಿನ ( ಕೃಷಿ ) – 2022, ಡಾ.ಎಚ್.ಎಸ್. ಅನುಪಮಾ ( ಸಾಹಿತ್ಯ ) – 2023, ಸುರೇಶ ಹೆಬ್ಳೀಕರ ( ಪರಿಸರ ) – 2024 ಹಾಗೂ ಶಂಕ್ರಣ್ಣ ಸಂಕಣ್ಣವರ ( ಜಾನಪದ ) – 2025 ಹೀಗೆ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿದ ಸಾಧಕರಿಗೆ ಶ್ರೀಗಳ ನೆನಪಿನಲ್ಲಿ ಇದುವರೆಗೆ ರಾಜ್ಯ ಪ್ರಶಸ್ತಿಯನ್ನು ನೀಡಲಾಗಿದೆ.
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಶ್ರೀಗಳು ನಾಡಿನ ಜನಪರ ಹೋರಾಟಗಳಲ್ಲಿ ಭಾಗಿಗಳಾಗುತ್ತಿದ್ದರು. ಸತ್ಯವನ್ನು ಹೇಳುವ ಸಂದರ್ಭಗಳಲ್ಲಿ ನಿರ್ಭೀಡೆಯಿಂದ ಮಾತನಾಡುತ್ತಿದ್ದರು. ಸದಾಕಾಲವೂ ಸಮಾನತೆಯ ಚಿಂತನೆ ಮಾಡುತ್ತಿದ್ದ ಶ್ರೀಗಳು ಬಸವಾದಿ ಶರಣರಂತೆ ಹೋರಾಟಗಾರರಾಗಿದ್ದರು.
ಅದಕ್ಕಾಗಿ 2026 ನೆಯ ಸಾಲಿನ ಅವರ ಹೆಸರಿನ ಈ ರಾಜ್ಯ ಪ್ರಶಸ್ತಿಯನ್ನು ನಾಡಿನ ಜನಪರ ಹೋರಾಟಗಾರ, ಬಂಡಾಯ ಸಾಹಿತ್ಯ ಸಂಘಟನೆಯ ಮೂಲಕ ಸಮಾನತೆಗಾಗಿ ಶ್ರಮಿಸಿದ, ರೈತರು ಮತ್ತು ಕಾರ್ಮಿಕರ ಸಮಸ್ಯೆಗಳಿಗೆ ಧ್ವನಿಯಾದ ಕಮ್ಯುನಿಸ್ಟ್ ಚಳುವಳಿಗಾರ ಡಾ.ಸಿದ್ಧನಗೌಡ ಪಾಟೀಲ ಅವರಿಗೆ ನೀಡಲಾಗುವುದು.
ಫೆಬ್ರವರಿ 25, ಬುಧವಾರ ಸಂಜೆ 6 ಗಂಟೆಗೆ ಅಣ್ಣಿಗೇರಿಯ ಶ್ರೀಮತಿ ನಿಂಗಮ್ಮ ಎಸ್. ಹೂಗಾರ ಸಮೂಹ ವಿದ್ಯಾಲಯಗಳ ಆವರಣದಲ್ಲಿ ನಡೆಯುವ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯವನ್ನು ಎಡೆಯೂರು – ಗದಗ – ಡಂಬಳ ಮಠದ ಡಾ. ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಡಾ. ಸಿದ್ಧನಗೌಡ ಪಾಟೀಲ ಅವರ ಅಭಿನಂದನಾ ನುಡಿಗಳನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಆಡಲಿದ್ದಾರೆ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿ ಸಮಿತಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಲಾಗಿದೆ.
