ಬೆಂಗಳೂರು
ನಗರದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಸಚಿವ ಎಂ ಬಿ ಪಾಟೀಲ್ ಮಾತನಾಡಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಸಮುದಾಯಕ್ಕೆ ಲಿಂಗಾಯತ ನಾಯಕರಿಗಿಂತ ಹೆಚ್ಚು ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ,” ಎಂದು ಹೇಳಿದರು.
ಸರಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ, ಮಹಿಳಾ ವಿ.ವಿ.ಗೆ ಅಕ್ಕಮಹಾದೇವಿಯ ಹೆಸರು, ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಇದಕ್ಕೆ ಅತ್ಯುತ್ತಮ ಉದಾಹರಣೆಗಳಾಗಿವೆ. ಇಂತಹ ಸಿದ್ದರಾಮಯ್ಯನವರ ಋಣ ಲಿಂಗಾಯತರ ಮೇಲಿದೆ. ಹೀಗಾಗಿ, ಲಿಂಗಾಯತ ಸಮುದಾಯವೂ ಅವರ ಜೊತೆಗೆ ನಿಲ್ಲಬೇಕಾಗಿದೆ, ಅವರ ಋಣ ತೀರಿಸಬೇಕಾಗಿದೆ, ಹೇಳಿದರು.
ಲಿಂಗಾಯತರು ಯಾರ ವಿರೋಧಿಗಳೂ ಅಲ್ಲ. ನಮ್ಮದೇನಿದ್ದರೂ ಸಕಾರಾತ್ಮಕ ಚಿಂತನೆಯಾಗಿದೆ. ಲಿಂಗಾಯತ ಧರ್ಮ ಹೆಚ್ಚುಹೆಚ್ಚು ಪ್ರಸಾರವಾಗಿ, ಬಸವ ಭಾರತವಾಗಬೇಕು. ಮುಂದಿನ ದಿನಗಳಲ್ಲಿ ವಚನ ವಿಶ್ವವಿದ್ಯಾಲಯದ ಕನಸು ನನಸಾಗಲಿದೆ. ಭೌಗೋಳಿಕವಾಗಿ ನಾವು ಹಿಂದೂಗಳೇ ಆಗಿದ್ದೇವೆ. ಆದರೆ, ಧರ್ಮದಿಂದ ಲಿಂಗಾಯತರು ಎಂದು ಅವರು ಪ್ರತಿಪಾದಿಸಿದರು.
೧೨ನೇ ಶತಮಾನದಲ್ಲಿ ಬಸವಣ್ಣ ಮೌಢ್ಯ, ಅಸ್ಪೃಶ್ಯತೆ, ಅಸಮಾನತೆಗಳ ವಿರುದ್ಧವಾಗಿ ಹೊಸ ಧರ್ಮವನ್ನು ಹುಟ್ಟು ಹಾಕಿದರು. ಆದರೆ, ಲಿಂಗಾಯತರಲ್ಲೂ ಜಾತಿಪದ್ಧತಿ ನುಸುಳಿಕೊಂಡಿದೆ. ನಾವು ಇನ್ನು ಮುಂದಾದರೂ ನಮ್ಮೊಳಗಿರುವ ದುರ್ಬಲ ಒಳಪಂಗಡಗಳನ್ನು ಮೇಲಕ್ಕೆತ್ತುವ ಕೆಲಸ ಮಾಡಬೇಕಾಗಿದೆ. ಇದಕ್ಕಾಗಿ ಲಿಂಗಾಯತರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಬಸವಣ್ಣನಿಗೆ ಅಪಚಾರ ಎಸಗಿದಂತೆ ಆಗುತ್ತದೆ. ಅವರ ತತ್ತ್ವಗಳನ್ನು ಆಚರಿಸುವುದೇ ನಿಜವಾದ ಲಿಂಗಾಯತ ಧರ್ಮ. ಈಗ ಒಂಬತ್ತು ಶತಮಾನಗಳ ನಂತರ ಬಸವ ಸಂಸ್ಕೃತಿಯು ಪುನಃ ಮುನ್ನೆಲೆಗೆ ಬಂದಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಅಕ್ಟೊಬರ್ 6 ಎಂ ಬಿ ಪಾಟೀಲ್ ಅವರ ಜನ್ಮ ದಿನ. ಈ ಸಂದರ್ಭದಲ್ಲಿ ಹಾಗೂ ಸಮುದಾಯಕ್ಕೆ ಅವರ ಕೊಡುಗೆಯನ್ನು ಗುರುತಿಸಲು ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.