ಮುಧೋಳ : ಶತಮಾನದ ಸಂತ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳ ವ್ಯಕ್ತಿತ್ವ ಕುರಿತು ಕೃತಿ `ಯೋಗಸ್ಥ’ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ ಎಂದು ವಿಜಯಪುರದ ಡಾ.ಫ.ಗು.ಹಳಕಟ್ಟಿ ವಚನ ಸಾಹಿತ್ಯ ಕೇಂದ್ರದ ಸಂಚಾಲಕ ಡಾ.ಮಹಾಂತೇಶ ಬಿರಾದಾರ ಅಭಿಪ್ರಾಯಪಟ್ಟರು.
ಹಿರಿಯ ನಾಗರಿಕರ ವೇದಿಕೆ, ಶಶಿ ಟ್ರಸ್ಟ್ ಕವಿ ಚಕ್ರವರ್ತಿ ರನ್ನ ಮುಧೋಳ ಸಹಯೋಗದಲ್ಲಿ ಸೋಮವಾರ ನಗರದ ಹೇಮರಡ್ಡಿ ಮಲ್ಲಮ್ಮ ಸಭಾಭವನದಲ್ಲಿ ರಾಗಂರ ಕೃತಿ “ಯೋಗಸ್ಥ”ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಸಿದ್ದೇಶ್ವರ ಸ್ವಾಮೀಜಿಗಳ ವ್ಯಕ್ತಿತ್ವದ ಕುರಿತು ಕೃತಿಗಳು ಹೊರಬಂದು ಹೊಸ ತಲೆಮಾರಿನ ಯುವ ಸಮೂಹಕ್ಕೆ ಉತ್ತೇಜನನೀಡುವಂತಾಗಬೇಕೆಂದರು. ಪ್ರಸ್ತುತ ರಾಜಕೀಯ ನಾಯಕರ ಟೀಕೆ ಸಹಜ. ಆದರೆ ಜನಪ್ರತಿನಿಧಿಗಳಿಲ್ಲದೇ ಕಾರ್ಯಗಳಾಗುವುದಿಲ್ಲ ಎಂದು ಹೇಳಿದರು.
ಸಾಹಿತಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಡಾ.ಶಿವಾನಂದ ಕುಬಸದ ಮಾತನಾಡಿ, ಬದುಕಿನ ವಿವಿದ ಮಜಲುಗಳನ್ನು ಹತ್ತಿರದಿಂದ ತಿಳಿದುಕೊಳ್ಳಲು ರಾಗಂರ ಯೋಗಸ್ಥ ಕೃತಿಯನ್ನು ಓದಬಹುದಾಗಿದೆ ಎಂದು ಹೇಳಿದರು.
ಲೇಖಕ ಡಾ.ರಾಜಶೇಖರ ಮಠಪತಿ ಮಾತನಾಡಿ ನನ್ನೆಲ್ಲ ಶಕ್ತಿಯಾಗಿದ್ದವರು ಸಿದ್ದೇಶ್ವರ ಸ್ವಾಮೀಜಿಗಳು ಅವರ ಮಾರ್ಗದರ್ಶನದಿಂದ ನೂರಾ ಎರಡು ಕೃತಿಗಳನ್ನು ರಚಿಸಿರುವೆ ಎಂದರು.
“ಸಾಹಿತಿಗಳು, ಕವಿಗಳು ಕೃಷ್ಣೆಯ ಪ್ರಸ್ತಾಪ ಮಾಡಿ ಯುಕೆಪಿ ನೋವುಗಳ ಕುರಿತು ಸ್ಪಂದಿಸುವ ಬರಹಗಳು ಹೊರಬರಬೇಕಾಗಿದೆ. ಸಿದ್ದೇಶ್ವರ ಮಹಾಸ್ವಾಮಿಗಳ ಕುರಿತು ರಾಗಂ ಬರೆದ ಕೃತಿ ಅತ್ಯಮೂಲ್ಯವಾಗಿದೆ.” ಎಂದು ಎಂ.ಎಲ್.ಸಿ. ಹಣಮಂತ ನಿರಾಣಿ ಹೇಳಿದರು.
ಸಂಘಟಿಕ ಚಂದ್ರಶೇಖರ ದೇಸಾಯಿ ಬಿನ್ನವತ್ತಳೆ ಅರ್ಪಿಸಿದರು. ಡಾ.ತಿಮ್ಮಣ್ಣ ಅರಳಿಕಟ್ಟಿ, ಕಲ್ಲಪ್ಪ ಸಬರದ, ಎಂ.ಜಿ.ದಾಸರ, ಡಾ.ಸಿದ್ದು ದಿವಾಣ, ಎಂ.ವ್ಹಿ.ದಾಸರಡ್ಡಿ, ಡಾ.ಜಯಶ್ರೀ ಭಂಡಾರಿ, ಗುರುನಾಥ ಸುತಾರ, ಶಿವಾನಂದ ಮರೆಗುದ್ದಿ, ಮಲ್ಲಿಕಾರ್ಜುನ ಅರಬ್ಬಿ, ಆನಂದ ಪೂಜಾರಿ, ಡಾ.ಸಿದ್ದಣ್ಣ ಬಾಡಗಿ, ಚಂದ್ರಶೇಖರ ರೂಗಿ ಇತರರಿದ್ದರು.
ಫೋಟೊ:
ಮುಧೋಳ ಹೇಮರಡ್ಡಿ ಮಲ್ಲಮ್ಮ ಸಭಾ ಭವನದಲ್ಲಿ ಸಿದ್ದೇಶ್ವರ ಶ್ರೀಗಳ ಕುರಿತು ಯೋಗಸ್ಥ ಕೃತಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಲೇಖಕ ಡಾ.ರಾಜಶೇಖರ ಮಠಪತಿ, ಚಂದ್ರಶೇಖರ ದೇಸಾಯಿ, ಡಾ.ತಿಮ್ಮಣ್ಣ ಅರಳಿಕಟ್ಟಿ, ಡಾ.ವಿಜಯಕುಮಾರ ಕಟಗಿಹಳ್ಳಿಮಠ ಇದ್ದರು.