ಸಿಂಧನೂರಿನ 11 ಗ್ರಾಮಗಳಲ್ಲಿ 11ದಿನಗಳ ಇಷ್ಟಲಿಂಗ ಪ್ರಾತ್ಯಕ್ಷಿಕೆ ಶಿಬಿರ

ಬಸವ ಮೀಡಿಯಾ
ಬಸವ ಮೀಡಿಯಾ

ಇಷ್ಟಲಿಂಗ ನಮ್ಮ ಅರಿವಿನ ಕುರುಹು. ನಮ್ಮ ಆತ್ಮ ನಿರೀಕ್ಷಣೆ, ಆತ್ಮಾವಲೋಕನ ಮಾಡಿಕೊಳ್ಳಲು ಇರುವ ಸಾಧನ ಎಂದು ಶರಣ ಪಿ. ರುದ್ರಪ್ಪ ಕುರಕುಂದಿ ಹೇಳಿದರು.

ಸಿಂಧನೂರು

ತಾಲ್ಲೂಕಿನ ಯದ್ದಲದೊಡ್ಡಿ ಗ್ರಾಮದ ಸುವರ್ಣಗಿರಿ ವಿರಕ್ತಮಠ ಶ್ರೀ ಸಿದ್ದಲಿಂಗೇಶ್ವರರ ಜಾತ್ರಾ ಮಹೋತ್ಸವವು ಫೆಬ್ರವರಿ 25ರಂದು ಜರುಗುತ್ತಲಿದ್ದು, ಅದರ ಅಂಗವಾಗಿ ಸುತ್ತಮುತ್ತಲಿನ 11 ಗ್ರಾಮಗಳಲ್ಲಿ 11ದಿನಗಳ ಕಾಲ ಇಷ್ಟಲಿಂಗ ಪ್ರಾತ್ಯಕ್ಷಿಕೆ ಶಿಬಿರಗಳನ್ನು ನಡೆಸಲಾಗುತ್ತಿದೆ.

ಹರಟನೂರ ಗ್ರಾಮದಲ್ಲಿ ಫೆ. 13ರಂದು ಶಿಬಿರ ಉದ್ಘಾಟನೆ ಆಗಿದೆ. ಶಿಬಿರದಲ್ಲಿ ಸಾಮೂಹಿಕ ಶಿವಯೋಗ ಪ್ರಾತ್ಯಕ್ಷಿಕೆ ಹಾಗೂ ಅದರ ಮಹತ್ವ ಕುರಿತು ತಿಳಿಸಿಕೊಡಲಾಗುತ್ತಿದೆ.

14 ಯದ್ದಲದೊಡ್ಡಿ, 15 ಬಾದರ್ಲಿ, 16 ಅಲಬನೂರು,17 ಗೋನವಾರ, 18 ಬಸವಪುರ ಇಜೆ, 19 ಬೆಳಗುರ್ಕಿ ಗ್ರಾಮದಲ್ಲಿ ಶಿಬಿರ ನಡೆದಿವೆ. 20 ಸೋಮಲಾಪುರ, 21 ವಲ್ಕಮ್ಮದಿನ್ನಿ, 22 ರಾಗಲಪರ್ವಿ, 23 ಜವಾಲಗೇರಾ ಗ್ರಾಮದಲ್ಲಿ ಶಿಬಿರ ಮುಂದುವರೆಯುತ್ತವೆ.

ಮುಂದೆ 24 ಮತ್ತು 25 ರಂದು ಯದ್ದಲದೊಡ್ಡಿ ಗ್ರಾಮದಲ್ಲಿ ಜಾತ್ರಾ ಕಾರ್ಯಕ್ರಮಗಳು ಜರುಗಲಿವೆ. ರಥೋತ್ಸವ, ಧಾರ್ಮಿಕ ಚಿಂತನಗೋಷ್ಠಿ, ರೈತ ಹಿತಚಿಂತನಾಗೋಷ್ಠಿಗಳು ನಡೆಯಲಿವೆ. ಫೆ. 12ರಿಂದ 25ರವರೆಗೆ ಬಸವಾದಿ ಶರಣರ ಜೀವನ ದರ್ಶನ ಪ್ರವಚನ ನಡೆಯುತ್ತಿದೆ.

ಇಷ್ಟಲಿಂಗ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಶರಣ ಪಿ. ರುದ್ರಪ್ಪ ಕುರಕುಂದಿ ಅವರು ಮಾತನಾಡುತ್ತ, ಇಷ್ಟಲಿಂಗ ನಮ್ಮ ಅರಿವಿನ ಕುರುಹು. ನಮ್ಮ ಆತ್ಮ ನಿರೀಕ್ಷಣೆ, ಆತ್ಮಾವಲೋಕನ ಮಾಡಿಕೊಳ್ಳಲು ಇರುವ ಸಾಧನವಾಗಿದೆ. ಇದರ ಸಾಧನೆಯಿಂದ ದುರಂತಗಳು ದೂರವಾಗಿ ನೆಮ್ಮದಿಯ ಬದುಕಿಗೆ ದಾರಿಯಾಗಲಿದೆ.

ಮಕ್ಕಳು, ಯುವಕರು, ಮಹಿಳೆಯರು ಕಡ್ಡಾಯವಾಗಿ ಇಷ್ಟಲಿಂಗಧಾರಿಗಳಾಗಬೇಕು. ಇಂದಿನ ಯುವ ಪೀಳಿಗೆ ದರ್ವ್ಯಸನ ದುಶ್ಚಟಗಳಿಗೆ ಬಲಿಯಾಗುತ್ತಿದೆ, ಇದಕ್ಕೆ ಕಾರಣ ಸಂಸ್ಕಾರದ ಕೊರತೆ. ಆದ್ದರಿಂದ ಎಲ್ಲರೂ ಲಿಂಗಧಾರಿಗಳಾದಲ್ಲಿ ಅದಕ್ಕೆ ಅವಕಾಶ ಇರುವುದಿಲ್ಲ.

ಶಿವಯೋಗ ಇದೊಂದು ವೈಜ್ಞಾನಿಕ ಸತ್ಯ. ಇದರ ಪಾಲನೆ ನಮ್ಮ ಶರೀರದಲ್ಲಿ ಧನಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ರುದ್ರಪ್ಪ ನುಡಿದರು. ನಂತರದಲ್ಲಿ ಅವರು ಎಲ್ಲರಿಗೂ ಲಿಂಗಪೂಜಾ ವಿಧಾನವನ್ನು ಹೇಳಿಕೊಟ್ಟರು.

ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡುತ್ತ, ಲಿಂಗಾಯತ ಧರ್ಮದ ತಳಹದಿ ಇಷ್ಟಲಿಂಗ, ಲಿಂಗಧಾರಿಗಳಲ್ಲದ ಲಿಂಗವಂತರು ಲಿಂಗಾಯತರಲ್ಲ. ಅಂಗದ ಮೇಲೆ ಲಿಂಗವಿದ್ದವರು ಮಾತ್ರ ನಾನು ಲಿಂಗಾಯತ ಅಂತ ಹೇಳಿಕೊಳ್ಳಬೇಕು. 12 ನೇ ಶತಮಾನದಲ್ಲಿ ಬಸವಾದಿ ಶರಣರು ತ್ಯಾಗ, ಬಲಿದಾನ ಮಾಡಿ ಲಿಂಗತತ್ವವನ್ನು ಉಳಿಸಿದ್ದಾರೆ. ನಮಗಾಗಿ ಅವರು ಹುತಾತ್ಮರಾಗಿದ್ದಾರೆ. ಅವರು ಕಂಡ ಸಮಾಜ ಮೂರ್ತ ಸ್ವರೂಪ ಪಡೆಯಬೇಕಾದರೆ ಎಲ್ಲ ಭಕ್ತಸಮೂಹ ಲಿಂಗಧಾರಿಗಳಾಗಬೇಕೆಂದರು.

ಮುಂದಿನ 10 ದಿನಗಳ ಪರ್ಯಂತ ಈ ಕಾರ್ಯಕ್ರಮ ಪ್ರತಿ ಹಳ್ಳಿಯಲ್ಲಿ ಜರುಗಲಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪೂಜ್ಯರು ಕರೆ ನೀಡಿದರು.

ಪೂಜ್ಯ ಬಸವಭೂಷಣ ಮಹಾಸ್ವಾಮಿಗಳು ಸಿರುಗುಪ್ಪ ನೇತೃತ್ವ ವಹಿಸಿ ಈ ಕಾರ್ಯಕ್ರಮ ಬಹಳ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಯದ್ದಲದೊಡ್ಡಿಯ ಶ್ರೀಗಳ ಕಾರ್ಯ ಶ್ಲಾಘನೀಯ. ಇಂದಿನ ಲಿಂಗಾಯತರಲ್ಲಿ ಹಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ ಮತ್ತು ಕೊರಳಲ್ಲಿ ಲಿಂಗು ಕಣ್ಮರೆಯಾಗುತ್ತಿವೆ. ಪುನಃ ಪೂಜ್ಯರು ಇದಕ್ಕೆ ಚಾಲನೆ ಕೊಟ್ಟಿರುವುದು ನಮಗೆ ಬಹಳ ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಶರಣ ಕರೇಗೌಡ್ರು ಕುರುಕುಂದ, ಬಸವಲಿಂಗಪ್ಪ ಬಾದರ್ಲಿ, ಅಮರೇಶ ಗುರಿಕಾರ, ಬಸವರಾಜಪ್ಪಣ್ಣ ಕುರುಕುಂದ, ಮುದ್ದನಗೌಡ ಪಾಟೀಲ, ವೀರಣಗೌಡ ಸಣ್ಣಗೌಡರು, ಬಸನಗೌಡ ಜಿನ್ನದ ಹಾಗೂ ಅನೇಕ ಶರಣ-ಶರಣೆಯರು ಭಾಗವಹಿಸಿದ್ದರು.

Share This Article
1 Comment
  • ಶರಣು ಶರಣಾರ್ಥಿ ಅರಿವಿನ ಕಾರ್ಯಕ್ರಮಕ್ಕೆ ಶುಭವಾಗಲಿ

Leave a Reply

Your email address will not be published. Required fields are marked *