ಸಿಂಧನೂರಿನಲ್ಲಿ ‘ವ್ಯಸನ ಮುಕ್ತ ದಿನ’ದ ಆಚರಣೆ

ಸಿಂಧನೂರು

ಶುಕ್ರವಾರ ತಾಲೂಕ ಆಡಳಿತ ವತಿಯಿಂದ ಇಳಕಲ್ಲನ ಲಿಂಗೈಕ್ಯ ಪೂಜ್ಯ ಮಹಾಂತ ಮಹಾಸ್ವಾಮಿಗಳ ಜನ್ಮದಿನವನ್ನು ‘ವ್ಯಸನ ಮುಕ್ತ ದಿನ’ವನ್ನಾಗಿ ಆಚರಿಸಲಾಯಿತು.

.ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರಭದ್ರಗೌಡ ಅಮರಾಪುರ ಮಾತನಾಡುತ್ತಾ, ಪೂಜ್ಯ ಲಿಂಗೈಕ್ಯ ಮಹಾಂತಪ್ಪಗಳು ತಮ್ಮ ಜೀವನದುದ್ದಕ್ಕೂ ಹೊನ್ನು ವಸ್ತ್ರ ಬೇಡಲಿಲ್ಲ, ಬದಲಾಗಿ ಜನರ ಕೆಟ್ಟ ಚಟಗಳನ್ನು ತಮ್ಮ ಜೋಳಿಗಿಗೆ ಹಾಕುವಂತೆ ಬೇಡಿದರು. ಇಂದು ನಮ್ಮ ಸಮಾಜವನ್ನು ಹಾಳು ಮಾಡುತ್ತಿರುವ ಸಂಗತಿಗಳಲ್ಲಿ ಮಧ್ಯ ಸೇವನೆ, ಜೂಜಾಟ ಹೀಗೆ ಅನೇಕ ಜಾಢ್ಯಗಳು ಕಾಡುತ್ತಿವೆ. ಇವುಗಳಿಂದ ಮುಕ್ತವಾಗದೆ ಸಮಾಜ ಉದ್ಧಾರವಾಗಲು ಸಾಧ್ಯವಿಲ್ಲ. ಆದ್ದರಿಂದ ಪೂಜ್ಯರು ತಮ್ಮ ಜೀವಮಾನದದ್ದಕ್ಕೂ ಮಹಾಂತ ಜೋಳಿಗೆ ಮೂಲಕ ಜನರ ವ್ಯಸನಗಳನ್ನು ತಮ್ಮ ಜೋಳಗಿಗೆ ಹಾಕಿಸಿಕೊಳ್ಳುತ್ತಾ, ಜನರನ್ನು ಸರಿದಾರಿಗೆ ತರಲು ಪ್ರಯತ್ನಿಸಿದ ಮಹಾನುಭಾವರು ಎಂದರು.

ವಿಶ್ವಗುರು ಬಸವಣ್ಣನವರ ಆದರ್ಶಗಳೇ ಅವರ ಆದರ್ಶಗಳಾಗಿದ್ದವು. ಇಂದಿನ ಮಠಾಧಿಪತಿಗಳಿಗೆ ಪೂಜ್ಯರು ಮಾದರಿಯಾಗಬೇಕು, ಅವರ ದಾರಿಯಲ್ಲಿ ಇಂದಿನ ಮಠಾಧೀಶರು ನಡೆದಿದ್ದೆ ಆದರೆ ಸಮಾಜ ಸುಧಾರಣೆಯಾಗುತ್ತದೆ ಎಂದರು.

ನಿರುಪಾದಪ್ಪ ಗುಡಿಹಾಳ ವಕೀಲರು ಮಾತನಾಡುತ್ತಾ, 1975ರಲ್ಲಿ ನಡೆದ ಒಂದು ಘಟನೆ, ಇಲಕಲ್ ವಿಜಯ ಮಹಾಂತಪ್ಪಗಳ ಜೀವನದಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದಿತು. ಅಂದಿನಿಂದ ಪೂಜ್ಯರು ಈ ಸಮಾಜವನ್ನು ವ್ಯಸನಮುಕ್ತ ಮಾಡಬೇಕೆಂದು ಸಂಕಲ್ಪ ಮಾಡಿದರು. ಅವರ ಕನಸು ಸಮಾಜವು ಕೇವಲ ವ್ಯಸನಮುಕ್ತವಾಗುವುದಷ್ಟೇ ಅಲ್ಲ, ಮೌಢ್ಯ ಮುಕ್ತವೂ ಆಗಬೇಕೆಂದು ಬಯಸಿದ್ದರು ಎಂದರು.

ಜೆ.ಎಲ್. ಎಂ. ಜಿಲ್ಲಾಧ್ಯಕ್ಷ ಪಿ. ರುದ್ರಪ್ಪ ಅವರು ಮಾತನಾಡುತ್ತಾ, ಪರಮಪೂಜ್ಯ ಸ್ವಾಮಿಗಳು ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಶರಣರ ವಚನದಂತೆ ಬದುಕಿದ ಮಹಾನುಭಾವರು. ಅವರಿಗೆ ಎಳ್ಳಷ್ಟು ಅಹಂ ಇರಲಿಲ್ಲ. ಅವರ ಮೇಲೆ ಕಲ್ಲು ತೂರಿದ ಜನರಿಗೆ ಶುಭ ಕೋರಿದವರು. ಜ್ಞಾನದ ಕೊರತೆಯಿಂದ ವ್ಯಕ್ತಿ ತಪ್ಪು ಮಾಡುತ್ತಾನೆ ಹೊರತು, ಯಾರೂ ತಪ್ಪು ಮಾಡುವುದಿಲ್ಲ ಅವರಿಗೆ ಜ್ಞಾನದ ಅರಿವನ್ನು ಮೂಡಿಸುವುದು ನಮ್ಮ ಕರ್ತವ್ಯ ಎನ್ನುತ್ತಿದ್ದರು.

ಕರ್ನಾಟಕ ಸರಕಾರ ಈ ದಿನವನ್ನು ವ್ಯಸನಮುಕ್ತ ದಿನ ಎಂದು ಆಚರಿಸುತ್ತಿರುವುದು ನಮ್ಮೆಲ್ಲರಿಗೆ ಸಂತಸವಾಗಿದೆ, ಸರಕಾರಕ್ಕೆ ಅಭಿನಂದನೆಗಳು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ವಲಕಮದಿನ್ನಿ ವಕೀಲರು, ಬಸವಲಿಂಗಪ್ಪ ಬಾದರ್ಲಿ, ಕರೇಗೌಡ ಪೊಲೀಸಪಾಟೀಲ, ಚಂದ್ರೇಗೌಡ ಹರೇಟನೂರು, ಭೀಮಣ್ಣ ಹೂಗಾರ, ಎಚ್‌.ಜಿ. ಹಂಪಣ್ಣ, ಗ್ರೇಡ್ 2 ತಹಸಶೀಲ್ದಾರ ಹಟ್ಟಿ ಚಂದ್ರಶೇಖರ್, ಅಂಬಾದಾಸ ಶಿರಸ್ತೇದಾರ್, ಹಾಗೂ ಅನೇಕ ಬಸವ ಭಕ್ತರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
Leave a comment

Leave a Reply

Your email address will not be published. Required fields are marked *