ಸಿಂಧನೂರು
‘ಬಸವ ಸಂಸ್ಕೃತಿ ಅಭಿಯಾನ’ದ ತಾಲೂಕುಮಟ್ಟದ ಪೂರ್ವಭಾವಿ ಸಭೆ, ನಗರದ ಬಸವ ಮಂಗಲ ಭವನದಲ್ಲಿ ಮಂಗಳವಾರ ಸಂಜೆ ಎಲ್ಲ ಜಾತಿ, ಮತ, ಪಂಥದವರನ್ನು ಒಳಗೊಂಡಂತೆ ನಡೆಯಿತು.
ಸೆಪ್ಟೆಂಬರ್ 5 ಕ್ಕೆ ರಾಯಚೂರು ನಗರಕ್ಕೆ ಬರುವ ಅಭಿಯಾನ, ಅದರ ತಯಾರಿ ಬಗ್ಗೆ ವಿಸ್ತ್ರುತವಾಗಿ ಚರ್ಚೆ ನಡೆಯಿತು. ಅಂದು ಮಧ್ಯಾಹ್ನ ಬಸವ ಭಾವಚಿತ್ರದೊಂದಿಗೆ ವಚನಗಳ ಮೆರವಣಿಗೆಯಲ್ಲಿ ಬಸವ ಪ್ರೇಮಿಗಳು ಯಾವ ರೀತಿ ಭಾಗವಹಿಸಬೇಕು, ಮತ್ತು ತಾಲೂಕಿನ ಹಳ್ಳಿ ಹಳ್ಳಿಗಳಿಗೂ ಹೇಗೆ ಬಸವ ಸಂಸ್ಕೃತಿಯನ್ನು ಪ್ರಚುರ ಪಡಿಸಬೇಕು ಎನ್ನುವ ವಿಚಾರಗಳು ಚರ್ಚೆಗೆ ಬಂದವು.

ಪೂಜ್ಯ ಸಿದ್ಧಲಿಂಗಸ್ವಾಮಿಗಳು ಸುವರ್ಣಗಿರಿ ವಿರಕ್ತಮಠ ವಳಬಳ್ಳಾರಿ, ಇವರು ಸಾನ್ನಿದ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಪೂಜ್ಯ ಮಹಾಲಿಂಗ ಸ್ವಾಮೀಜಿ, ಸುವರ್ಣಗಿರಿ ವಿರಕ್ತ ಮಠ ಯದ್ದಳದೊಡ್ಡಿ ವಹಿಸಿದ್ದರು. ಪೂಜ್ಯ ಸಿದ್ಧಬಸವ ಸ್ವಾಮೀಜಿ ವಿರಕ್ತಮಠ, ಬಳಗಾನೂರು ಅವರು ಸಮ್ಮುಖ ವಹಿಸಿದ್ದರು.
ನಿರುಪಾದಪ್ಪ ಗುಡಿಹಾಳ ವಕೀಲರು ಮಾತನಾಡುತ್ತಾ, ಬಸವೇಶ್ವರರು ಮೌಡ್ಯಮುಕ್ತ ಹಾಗೂ ವ್ಯಸನಮುಕ್ತ ಸಮಾಜ ಕಟ್ಟಲು ಶ್ರಮಿಸಿದವರು. ಬಸವ ಸಂಸ್ಕೃತಿ ಅಭಿಯಾನವೆಂದರೆ ಅದು ಸರ್ವ ಜನಾಂಗದ ಏಕೀಕರಣದ ಆಂದೋಲನ ಹಾಗಾಗಿ ನಾವೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿದೆ ಎಂದರು.
ಹಾಲುಮತ ಸಮಾಜದ ಅಧ್ಯಕ್ಷ ಭೀಮಣ್ಣ ವಕೀಲರು ಮಾತನಾಡುತ್ತಾ, ಸರಳ ಮತ್ತು ಸಮಾನತೆಯ ಸಮಾಜ ಬಸವೇಶ್ವರರ ಕನಸು, ಅದನ್ನು ನನಸು ಮಾಡಲು ಇಂತಹ ಜಾಗೃತಿ ಅಭಿಯಾನಗಳು ಆಗಾಗ ಜರುಗುತ್ತಿರಬೇಕು. ಸುಖ ಜೀವನದ ಸೂತ್ರಗಳು ವಚನಗಳಲ್ಲಿವೆ. ಅನುಭವ ಮಂಟಪ ಎಲ್ಲಾ ಜನಾಂಗದ ಕೇಂದ್ರ ಬಿಂದುವಾಗಿ ಕೆಲಸ ಮಾಡಿದೆ. ಅವೆಲ್ಲವನ್ನು ಈ ಅಭಿಯಾನದ ಮೂಲಕ ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಹೇಳಿದರು.
ಚನ್ನಬಸವಣ್ಣ ಮಹಾಜನ್ ಶೆಟ್ರು ರಾಯಚೂರು ಇವರು ಮಾತನಾಡುತ್ತಾ, ಬಸವ ಸಂಸ್ಕೃತಿ ಎಂದರೆ ಅದು ನಮ್ಮ ಸಂಸ್ಕೃತಿ, ನಮ್ಮ ನಾಡಿನ ಸಂಸ್ಕೃತಿ ಇಂತಹ ಅಭಿಯಾನವನ್ನು ಯಶಸ್ವಿಗೊಳಿಸಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.
ತಾಲೂಕಿನ ಹಿರಿಯರು ಹಾಗೂ ರೈತ ಮುಖಂಡರಾದ ಶರಣ ಶ್ರೀ ಹನುಮನಗೌಡ ಬೆಳಗುರ್ಕಿ ಅವರು ಮಾತನಾಡುತ್ತಾ, ಬಸವಣ್ಣ ಎಂದರೆ ಜೀವನ ಕ್ರಮ, ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿ ತೋರಿಸಿದ ಮಹಾನುಭಾವ. ಎಲ್ಲರ ಸಮಾನತೆ ಮತ್ತು ಏಕತೆಗಾಗಿ ಇಷ್ಟಲಿಂಗವನ್ನು ದಯಪಾಲಿಸಿದ, ಶೋಷಿತರನ್ನು ಶೋಷಣೆಯಿಂದ ಮುಕ್ತಗೊಳಿಸಿದ. ಬಸವಣ್ಣನವರು ಎಲ್ಲಾ ಸಮುದಾಯದವರಿಗೆ ಲಿಂಗ ದೀಕ್ಷೆಯನ್ನು ನೀಡಿದರು, ಆದರೆ ಇಂದು ತಳ ಸಮುದಾಯದವರು ಲಿಂಗತತ್ವದಿಂದ ದೂರವಾಗುತ್ತಿರುವುದು ದುರ್ದೈವವೇ ಸರಿ.

ಬಸವಣ್ಣನವರು ಹುಟ್ಟಿದ ನಾಡಿನಲ್ಲಿ ಜನಿಸಿದ ನಾವೇ ಧನ್ಯರು. ಬಸವ ಸಂಸ್ಕೃತಿ ಅಭಿಯಾನದ ಮೂಲಕ ವಿಶ್ವ ಭ್ರಾತೃತ್ವ ಬೆಳೆಯುತ್ತದೆ. ಈ ಮೂಲಕ ಎಲ್ಲಾ ಮಾಧ್ಯಮಗಳು ಅಭಿಯಾನವನ್ನು ವಿಶ್ವವ್ಯಾಪಿ ಹರಡಬೇಕು. ಆ ನಿಟ್ಟಿನಲ್ಲಿ ಅಭಿಯಾನ ಯಶಸ್ವಿಗೊಳಿಸಲು ನಾವು ನೀವೆಲ್ಲ ಕೈಜೋಡಿಸಬೇಕಾಗಿದೆ ಎಂದರು.
ಪರಮಪೂಜ್ಯ ಶ್ರೀ.ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಸುವರ್ಣಗಿರಿ ವಿರಕ್ತಮಠ ಒಳಬಳ್ಳಾರಿ ಪೂಜ್ಯರು ಆಶೀರ್ವಚನ ನೀಡುತ್ತಾ ಬಸವತತ್ವ ಅಂದರೆ ಸನ್ಮಾರ್ಗ ತೋರಿಸಿದ ತತ್ವ ಎಲ್ಲರನ್ನು ಒಪ್ಪಿಕೊಂಡ ಹಾಗೂ ಅಪ್ಪಿಕೊಂಡ ದಾರ್ಶನಿಕ ಬಸವಣ್ಣನವರು. ಬದುಕಿನಲ್ಲಿ ದಾರಿ ತಪ್ಪಿದವರಿಗೆ ದಾರಿ ತೋರಿಸಿದಾತ ಹಾಗೂ ಕಾಯಕ ದಾಸೋಹದ ಪರಿಕಲ್ಪನೆಯನ್ನು ಕಲಿಸಿಕೊಟ್ಟಾತ ಬಸವಣ್ಣ. ತತ್ವ ಹೇಳುವುದು ಎಷ್ಟು ಮುಖ್ಯವೋ ಅಷ್ಟೇ ಆಚರಣೆಯಲ್ಲಿ ತರುವುದು ಮುಖ್ಯವಾಗಿರುತ್ತದೆ. ಬಸವ ಸಂಸ್ಕೃತಿ ಅಭಿಯಾನದ ಮೂಲಕ ಪ್ರತಿಯೊಬ್ಬ ಶ್ರೀಸಾಮಾನ್ಯರಿಗೂ ತತ್ವದ ಮನವರಿಕೆ ಮಾಡಿಕೊಡಬೇಕಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಆದ್ದರಿಂದ ಈ ಅಭಿಯಾನದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.
ಅಭಿಯಾನ ಸಮಿತಿ ಜಿಲ್ಲಾಧ್ಯಕ್ಷರಾದ ಹರವಿ ನಾಗನಗೌಡರು, ಬಸಪ್ಪ ಜಾದಳದಿನ್ನಿ, ಜೆ. ಬಸವರಾಜ ವಕೀಲರು, ಮಲ್ಲಿಕಾರ್ಜುನ ಗುಡಿಮಣಿ ಅವರು ಉಪಸ್ಥಿತರಿದ್ದರು.
ಎಲ್ಲ ಸಮಾಜಗಳ ಮುಖಂಡರುಗಳು ಸೇರಿದಂತೆ ಸುಮಾರು 300 ಜನ ಭಾಗವಹಿಸಿದ್ದು ವಿಶೇಷವೆನಿಸಿತು.

ಅಭಿಯಾನದ ಉದ್ದೇಶವನ್ನು ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷರಾದ ಪಿ. ರುದ್ರಪ್ಪ ಅವರು ವಿವರವಾಗಿ ತಿಳಿಸಿದರು.
ತಾಲ್ಲೂಕು ವೀರಶೈವ ಮಹಾಸಭೆಯ ಅಧ್ಯಕ್ಷರಾದ ತಾವರಗೇರಿ ಪಂಪನಗೌಡರು ಅಭಿಯಾನಕ್ಕೆ ವೀರಶೈವ ಮಹಾಸಭೆಯಿಂದ ಸಂಪೂರ್ಣ ಬೆಂಬಲ ಕೊಡುವದಾಗಿ ತಿಳಿಸಿದರು. ಎಲ್ಲ ಕಾಯಕ ಪಂಗಡಗಳ ಅಧ್ಯಕ್ಷರು ಭಾಗವಹಿಸಿ ಈ ಅಭಿಯಾನಕ್ಕೆ ಸಹಕರಿಸುವುದಾಗಿ ಮುಕ್ತ ಮನಸ್ಸಿನಿಂದ ಅಭಿಪ್ರಾಯಗಳನ್ನು ತಿಳಿಸಿದರು.
ಬಸವ ಸಂಸ್ಕೃತಿ ಅಭಿಯಾನದ ತಾಲೂಕ ಘಟಕದ ಗೌರವ ಅಧ್ಯರನ್ನಾಗಿ ಹಿರಿಯ ರೈತ ಮುಖಂಡ ಹನುಮನಗೌಡ ಬೆಳಗುರ್ಕಿಯವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಅವರಿಗೆ ಪೂಜ್ಯರಿಂದ ಗೌರವ ರಕ್ಷೆ ನೀಡಲಾಯಿತು. ಉಳಿದ ಪದಾಧಿಕಾರಿಗಳನ್ನು ಸಹ ಸಭೆಯಲ್ಲಿ ನಿರ್ಣಯಿಸಿ, ಅವರಿಗೆ ಪೂಜ್ಯರಿಂದ ಗೌರವ ಶ್ರೀ ರಕ್ಷೆಯನ್ನು ನೀಡಲಾಯಿತು.
ಹಿರಿಯ ಪೂಜ್ಯರು ಆಶೀರ್ವಚನ ನೀಡಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಎಲ್ಲರೂ ತನು ಮನ ಧನದಿಂದ ಸಹಕರಿಸಬೇಕೆಂದು ತಿಳಿಯಪಡಿಸಿದರು.
ಜಾಗತಿಕ ಲಿಂಗಾಯತ ಮಹಾಸಭೆಯ ತಾಲೂಕು ಅಧ್ಯಕ್ಷರಾದ ಶರಣಪ್ಪ ಸಾಹುಕಾರ ಎಲ್ಲರನ್ನು ಸ್ವಾಗತಿಸಿದರು. ಚಂದ್ರಗೌಡ ಹರೇಟನೂರು ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.