ಸಿಂಗಾಪುರ ಕನ್ನಡ ಸಂಘ ಕಳೆದ ೨೬ರಂದು ವಚನ ಉಪನ್ಯಾಸ ಮತ್ತು ವಚನಾಂಜಲಿ ಕಾರ್ಯಕ್ರಮ ಏರ್ಪಡಿಸಿತ್ತು.
ಹಿರಿಯ ಚಿಂತಕ ಹಾಗು ವಿಮರ್ಶಕ ಡಾ. ಬಸವರಾಜ ಸಾದರ ಅವರು “ಕಾಯಕ ತತ್ವದ ಅರ್ಥವ್ಯಾಪ್ತಿ ಮತ್ತು ಪ್ರಸ್ತುತತೆ” ಎನ್ನುವ ವಿಷಯ ಕುರಿತಂತೆ, ಅರ್ಥಪೂರ್ಣವಾದ ಹಾಗೂ ವೈಚಾರಿಕ ಚಿಂತನೆಯ ಉಪನ್ಯಾಸ ನೀಡಿದರು.
ಬಸವಣ್ಣನವರು ಪ್ರತಿಪಾದಿಸಿದ “ಕಾಯವೇ ಕೈಲಾಸ” ಎಂಬ ಅಪೂರ್ವ ತತ್ವದ ಹಿನ್ನೆಲೆಯಲ್ಲಿಯೇ ರೂಪಿತವಾದ, “ಕಾಯಕವೇ ಕೈಲಾಸ” ಎಂಬುದು ಕೇವಲ ಮನುಷ್ಯನ ದೈಹಿಕ ಕೆಲಸವಾಗದೇ, ಆನುಭಾವಿಕ ಸಾಧನೆಯೂ ಆಯಿತೆಂದು ಪ್ರತಿಪಾದಿಸಿದರು.
ಡಿಗ್ನಿಟೀ ಆಫ್ ಲೇಬರ್ ಅನ್ನುವುದು ಕೆಲಸಕ್ಕೆ ಸಂಬಂಧಿಸಿದರೆ, ಡಿವಿನಿಟೀ ಆಫ್ ಲೇಬರ್ ಕಾಯಕಕ್ಕೆ ಸಂಬಂಧಿಸಿದೆ ಎನ್ನುತ್ತ, ಕಾಯವಿರುವ ಎಲ್ಲ ಜೀವಿಗಳೂ ಕಾಯಕ ಮಾಡಲೇಬೇಕೆಂಬ ಶರಣರ ಅಚಲ ನಿರ್ಧಾರವನ್ನು ವಚನಗಳನ್ನೇ ಆಧರಿಸಿ ವಿಶ್ಲೇಷಿಸಿದರು.

ಅರಿಸ್ಟಾಟಲ್ ನ ‘ಕಲ್ಯಾಣ ರಾಜ್ಯ’ ದ ಪರಿಕಲ್ಪನೆ ಹಾಗೂ ಗಾಂಧೀಜಿಯವರ ‘ಸರ್ವೋದಯ ಸಿದ್ಧಾಂತ’ ಇವುಗಳ ಮೂಲ ಉದ್ದೇಶವನ್ನು ನೆನಪಿಸಿ, ಬಸವಣ್ಣನವರು ಪ್ರತಿಪಾದಿಸಿದ “ಸಕಲ ಜೀವಾತ್ಮರಿಗೆ ಲೇಸ ಬಯಸುವ’ ಧೋರಣೆಯು ಆ ಎಲ್ಲ ಚಿಂತಕರ ಆಲೋಚನೆಗಳನ್ನು ಕ್ರಿಯಾತ್ಮಕವಾಗಿ ಜಾರಿಗೆ ತಂದ ಅನನ್ಯ ಕ್ರಾಂತಿಕಾರಿ ನಡೆ ಎಂದು ಹೇಳಿದರು.
ಸತ್ಯ ಶುದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕೂಡಿದ ಕಾಯಕವು ಎಲ್ಲ ಪೂಜೆಗಳಿಗಿಂತ ಶ್ರೇಷ್ಠವಾದದ್ದೆಂದು ಹೇಳುತ್ತ, ಕಾಯಕದಲ್ಲಿ ಮೇಲು-ಕೀಳು ಎಂಬುದು ಇಲ್ಲ, ಅದನ್ನು ಪ್ರತಿಯೊಬ್ಬರೂ ಮಾಡಲೇಬೇಕೆಂದು ಹೇಳಿದ ಶರಣರ ಕಟ್ಟಳೆಯನ್ನು ಹಲವಾರು ವಚನಗಳ ಮೂಲಕ ಸ್ಪಷ್ಟಪಡಿಸಿದರು.
ಶರಣರಿಗೆ ಕಾಯಕ ಎಂಬುದು ಒಂದು ಸಿದ್ಧಾಂತ ಮಾತ್ರವಾಗಿರದೆ, ಪ್ರತಿಯೊಬ್ಬರ ದಿನನಿತ್ಯದ ನಡೆಯೇ ಆಗಿತ್ತೆಂಬುದನ್ನು ಸೋದಾಹರಣವಾಗಿ ಕಟ್ಟಿಕೊಟ್ಟ ಡಾ. ಸಾದರ ಅವರು, ಇಂಥ ಕಾಯಕಕ್ಕೆ ಶರಣರು ನಿಗದಿತ ಆದಾಯ ಪಡೆದು, ಅದನ್ನು ತಮ್ಮ ಅನುದಿನದ ಉಪಭೋಗಕ್ಕೆ ಬಳಸುತ್ತಲೇ, ಮಿಗುತಾಯವನ್ನು ( Surplus) ಸಮಾಜಕ್ಕೆ ದಾಸೋಹಂ ಭಾವದಿಂದ ಅರ್ಪಿಸುತ್ತಿದ್ದರೆಂದು ಹೇಳಿದರು.
ಅರಿವು ಮತ್ತು ಆಚಾರ ಎರಡನ್ನೂ ಸಮನ್ವಯದಲ್ಲಿ ಬೆಸೆದುಕೊಂಡು ಕ್ರಿಯಾತ್ಮಕವಾಗಿ ಬದುಕು ನಡೆಸಿದ ಶರಣರ ನಡೆಯು, ಇಂದಿನ ಭ್ರಷ್ಟ ಹಾಗೂ ಲಂಚಕೋರ ಜಗತ್ತಿಗೆ ಮಹಾಮಾರ್ಗವಾಗಿದೆ ಎಂದೂ, ಆ ಮಾರ್ಗದಲ್ಲಿ ನಡೆದರೆ, ವರ್ತಮಾನದ ಜಗತ್ತಿನ ಎಲ್ಲ ಆರ್ಥಿಕ ಸಮಸ್ಯೆಗಳಿಗೂ ಪರಿಹಾರ ಸಿಗಲು ಸಾಧ್ಯವೆಂದೂ ಹೇಳಿದ ಅವರು, ಇದು ಬಸವಣ್ಣನವರು ಹೇಳಿದ “ನಡೆಯಲ್ಲಿ ನುಡಿಯ ಪೂರೈಸುವೆ” ಮಾತಿನಂತೆ ನಡೆದರೆ ಖಂಡಿತ ಸಾಕಾರವಾಗುತ್ತದೆ ಎಂದು ಪ್ರತಿಪಾದಿಸಿದರು.

ಪ್ರತಿಭಾ ಬೆಳ್ಳಾವೆ ವಚನ ಪ್ರಾರ್ಥನೆ ಮಾಡಿದರು. ಸಿಂಗಾಪೂರ್ ಕನ್ನಡ ಸಂಘದ ಅಧ್ಯಕ್ಷ ವೆಂಕಟೇಶ್ ಗದ್ದೆಮನೆ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರಿಗೂ ಸ್ವಾಗತ ಕೋರಿದರು.
ನಂತರದಲ್ಲಿ ರಾಜೇಶ್ವರಿ ಸಾದರ ಮತ್ತು ಕವಿತಾ ಸಾದರ ಶರಣರ ನಾಲ್ಕು ವಚನಗಳನ್ನು ಹಾಡಿದರು.
ಕವಿ,ವಿಮರ್ಶಕ, ಪ್ರಸಾರಕ ಹಾಗೂ ಚಿಂತಕರಾದ ಡಾ. ಬಸವರಾಜ ಸಾದರ ಅವರಿಗೆ ಇದೇ ಸಂದರ್ಭದಲ್ಲಿ ಸಿಂಗಾಪುರ ಕನ್ನಡ ಸಂಘವು ಕೊಡಮಾಡುವ ಪ್ರತಿಷ್ಠಿತ “ಸಿಂಗಾರ ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕವಿತಾ ಬಾದಾಮಿ ನಿರೂಪಿಸಿದರು. ಚೈತ್ರ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಪುಟಾಣಿ ಮಕ್ಕಳ ವಚನಕಾರರ ವೇಷಭೂಷಣ ಸ್ಪರ್ಧೆ ಮತ್ತು ನಿಖಿತಾ ಪ್ರಸಾದ್ ಅವರು ಸಾದರ ಪಡಿಸಿದ “ಜ್ಞಾನ ಜ್ಯೋತಿ” ಕಿರುನಾಟಕ ಎಲ್ಲರನ್ನೂ ಆಕರ್ಷಿತು.
ಆರ್. ಟಿ. ಕುಲಕರ್ಣಿ, ಸುಮಾ ಕುಲಕರ್ಣಿ ಹಾಗೂ ಡಾ. ಸುಹಾಸ ಕುಲಕರ್ಣಿ ಪಾಲ್ಗೊಂಡಿದ್ದರು.