ಸಿರವಾರ:
ಭವ್ಯ ಭಾರತದ ಪರಂಪರೆಯಲ್ಲಿ ವಚನ ಸಾಹಿತ್ಯಕ್ಕೆ ತನ್ನದೇ ಆದ ಮಹತ್ವವಿದೆ. ಮಕ್ಕಳು ಪಠ್ಯಪುಸ್ತಕದ ಜೊತೆಗೆ ಬಸವಾದಿ ಶರಣರ ವಚನಗಳನ್ನು ದಿನಾಲು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ರಾಯಚೂರು ಜಿಲ್ಲೆ ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷರಾದ ಬೆಟ್ಟಪ್ಪ ಕಸ್ತೂರಿ, ಅತ್ತನೂರು ಹೇಳಿದರು.
ಅವರು ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಸೋಮವಾರದಂದು ಸಿರವಾರ ತಾಲೂಕಿನ ಮಾಡಗಿರಿ ಗ್ರಾಮದ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ವಚನಗಳ ನಡಿಗೆ ಶಾಲೆಗಳ ಕಡೆಗೆ” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ವಚನಗಳು ಕೇವಲ ಸಾಹಿತ್ಯವಾಗಿರದೆ ಪ್ರತಿಯೊಬ್ಬ ವ್ಯಕ್ತಿಯ ದೈನಂದಿನ ಜೀವನದಲ್ಲಿ ಯಾವ ರೀತಿ ಬದುಕನ್ನು ಕಟ್ಟಿಕೊಳ್ಳಬೇಕು, ಬದುಕಿನಲ್ಲಿ ಸತ್ಯ ಶುದ್ಧವಾಗಿ ಹೇಗೆ ನಡೆಯಬೇಕು ಹಾಗೂ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಹೇಗೆ ಬೆಳೆಸಿಕೊಳ್ಳಬೇಕೆಂಬುದನ್ನು ತಿಳಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಶರಣರಾದ ಶರಣಬಸವ ನೀರಮಾನ್ವಿ ಅವರು ಮಾತನಾಡುತ್ತಾ, 12ನೇ ಶತಮಾನದ ಬಸವಾದಿ ಶಿವಶರಣರು ನಡೆದು ಬಂದ ದಾರಿಯ ಬಗ್ಗೆ ತಿಳಿಸಿಕೊಟ್ಟರು.

ಶಾಲೆಯ ಮಕ್ಕಳಿಂದ ವಚನ ವಾಚನವನ್ನು ಮಾಡಿಸಲಾಯಿತು. ವಚನಗಳನ್ನು ಹೇಳಿದ ಎಲ್ಲಾ ಮಕ್ಕಳಿಗೆ ಶರಣ ವಿಶ್ವವಚನ ಫೌಂಡೇಶನ್ ವತಿಯಿಂದ ವಚನ ಸುಧೆ ಪುಸ್ತಕವನ್ನು ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗುರುಗಳಾದ ವಿರುಪಾಕ್ಷ ಅವರು ಮಾತನಾಡುತ್ತಾ, ಬುದ್ಧ ಬಸವ ಅಂಬೇಡ್ಕರ್ ಅವರ ವೈಚಾರಿಕ, ವೈಜ್ಞಾನಿಕ ಚಿಂತನೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಮೊದಲಿಗೆ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು.
ಫೌಂಡೇಶನ್ ಗೌರವಾಧ್ಯಕ್ಷರಾದ ಡಾ. ದೇವೇಂದ್ರಮ್ಮ ಅವರು ನಿರೂಪಿಸಿದರು.
ಮೈನುದ್ದೀನ್ ಬೂದಿನಾಳ, ಅಮರಪ್ಪಗೌಡ ಶಾಕಾಪುರ, ಮಹಾಂತೇಶ ಗವಿಘಟ್ಟ, ಬೆಟ್ಟದಬಸವ ಮಾಡಗಿರಿ, ಶರಣಪ್ಪಗೌಡ ಮೇಟಿ ಹಾಗೂ ಶಿಕ್ಷಕರಾದ ಮೆಹಬೂಬ್, ಚನ್ನಬಸವ, ಬಸವರಾಜ ಕುಂಬಾರ, ವಿದ್ಯಾರ್ಥಿಗಳು, ಊರ ನಾಗರಿಕರು, ಶಾಲೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.