ದಾವಣಗೆರೆ:
ತರಳಬಾಳು ಬೃಹನ್ಮಠದ ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ನಿವೃತ್ತಿ ಘೋಷಿಸಿ, ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸಬೇಕು ಎಂದು ಸಾದರ ಲಿಂಗಾಯತ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಸಿರಿಗೆರೆ ತರಳಬಾಳು ಮಠದ ಭಕ್ತರ ಸಭೆ ನಗರದಲ್ಲಿ ಭಾನುವಾರ ನಡೆಯಿತು.
‘ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಠದ ಆಡಳಿತದಲ್ಲಿ ಬದಲಾವಣೆ ಮಾಡಲು ಏಕವ್ಯಕ್ತಿ ಟ್ರಸ್ಟ್ ಡೀಡ್ ಮಾಡಿಕೊಂಡಿದ್ದಾರೆ. ಶ್ರೀಗಳು ತಾವೇ ಸಿದ್ಧಪಡಿಸಿರುವ ಏಕವ್ಯಕ್ತಿ ಡೀಡ್ ರದ್ದುಗೊಳಿಸಿ, ಹಿಂದಿನ ಪೀಠಾಧ್ಯಕ್ಷ ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ರಚಿಸಿದ್ದ ಬೈಲಾವನ್ನು ಯಥಾವತ್ತಾಗಿ ಜಾರಿಗೊಳಿಸಬೇಕು’ ಎಂಬ ನಿರ್ಣಯವನ್ನು ಒಮ್ಮತದಿಂದ ಅಂಗೀಕರಿಸಿದರು.
೧೯೯೦ರಲ್ಲಿ ಸೃಷ್ಟಿಯಾಗಿದ್ದ ಏಕವ್ಯಕ್ತಿ ಟ್ರಸ್ಟ್ ಡೀಡ್ ಈಗ ಬೆಳಕಿಗೆ ಬಂದು ವಿಷಯ ನ್ಯಾಯಾಲಯದ ಕಟ್ಟಳೆ ಏರಿದೆ. ” ಇದನ್ನು ಪ್ರಶ್ನಿಸುವವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಾರೆ,” ಎಂದು ಮುಖಂಡರು ಹೇಳಿದರು.
‘ಸಾಣೇಹಳ್ಳಿ ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೂ ವಯಸ್ಸಾಗಿದ್ದು, ಅವರೂ ನಿವೃತ್ತಿ ಘೋಷಿಸಿ ಅಲ್ಲಿಗೂ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಬೇಕು,” ಎಂದು ಸಭೆಯಲ್ಲಿ ಕೋರಲಾಯಿತು.
ಸಭೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಅಣಬೇರು ರಾಜಣ್ಣ ಬಿ.ಸಿ ಪಾಟೀಲ್ ಸೇರಿದಂತೆ ಸಮುದಾಯದ ಹಲವಾರು ಮುಖಂಡರಾದ ಉಪಸ್ಥಿತರಿದ್ದರು.