ಬೀದರ್
ಬಸವಧರ್ಮ ಪೀಠದ ಪೀಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಲಿಂಗಾನಂದ ಸ್ವಾಮೀಜಿ, ಲಿಂಗೈಕ್ಯ ಮಾತೆ ಮಹಾದೇವಿ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ಮಹಾದಂಡನಾಯಕರ ಸ್ಮರಣೋತ್ಸವ ಕಾರ‍್ಯಕ್ರಮಕ್ಕೆ ರವಿವಾರ ಸಂಜೆ ಕೊನೆಗೊಂಡಿತು.

ಸ್ಮರಣೋತ್ಸವದ ಅಂಗವಾಗಿ ನಗರದಲ್ಲಿ ನಡೆದ ವಚನ ಸಾಹಿತ್ಯದ ಮೆರವಣಿಗೆಯಲ್ಲಿ ಶರಣ ಶರಣೆಯರು ಬಸವಣ್ಣ, ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿಯವರ ಭಾವಚಿತ್ರಗಳೊಂದಿಗೆ ಹೆಜ್ಜೆ ಹಾಕಿದರು.
ಕಾರ‍್ಯಕ್ರಮದಲ್ಲಿ ಐದು ಮುಖ್ಯ ನಿರ್ಣಯಗಳನ್ನು ಕೈಗೊಳ್ಳಲಾಯಿತು:
1) ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಹೋರಾಟ ತೀವ್ರಗೊಳಿಸುವುದು
2) ರಾಷ್ಟ್ರೀಯ ಬಸವ ದಳವನ್ನು ಮತ್ತಷ್ಟು ಸಂಘಟಿಸುವುದು
3) ಮೇ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ಬಸವ ಶಾಂತಿ ಯಾತ್ರೆ ಕೈಗೊಳ್ಳುವುದು
4) ಪ್ರತಿ ವರ್ಷ ಒಂದೊಂದು ರಾಜ್ಯ, ಒಂದೊಂದು ಜಿಲ್ಲೆಯಲ್ಲಿ ಮಹಾದಂಡನಾಯಕರ ಸ್ಮರಣೋತ್ಸವ ಹಮ್ಮಿಕೊಳ್ಳುವುದು
5) ಪ್ರತಿ ಎರಡು ವರ್ಷಗಳಿಗೊಮ್ಮೆ ವಿದೇಶಗಳಲ್ಲಿ ಅಂತರರಾಷ್ಟ್ರೀಯ ಬಸವತತ್ವ ಸಮ್ಮೇಳನ ಆಯೋಜಿಸುವ ನಿರ್ಣಯ ಅಂಗೀಕರಿಸಲಾಯಿತು.

ಬಸವಗಂಗೋತ್ರಿಯ ಚನ್ನಬಸವಾನಂದ ಸ್ವಾಮೀಜಿ ನಿರ್ಣಯ ಮಂಡಿಸಿದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶ್ರೀಕಾಂತ ಸ್ವಾಮಿ ಅನುಮೋದಿಸಿದರು. ಶರಣರು ಕರತಾಡನದ ಮೂಲಕ ಒಪ್ಪಿಗೆ ಸೂಚಿಸಿದರು.

ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಅಕ್ಕನಾಗಲಾಂಬಿಕಾ ಮಹಿಳಾ ಗಣ ಹಾಗೂ ಲಿಂಗಾಯತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಮಾರೋಪ ಭಾಷಣ ಮಾಡಿದ ಪೌರಾಡಳಿತ ಸಚಿವ ರಹೀಂ ಖಾನ್, ‘ಬಸವ ತತ್ವವನ್ನು ಅತ್ಯಂತ ಉತ್ತುಂಗ ಶಿಖರಕ್ಕೆ ಕೊಂಡೊಯ್ದ ಕೀರ್ತಿ ಮಾತಾಜಿ ಅವರಿಗೆ ಸಲ್ಲುತ್ತದೆ. ಗುರುವಿನ ಋಣ ತೀರಿಸಲು ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ’ ಎಂದರು.

ಬಸವ ಬಳಗದ ರಾಜ್ಯ ಘಟಕದ ಅಧ್ಯಕ್ಷ ಬಾಬು ವಾಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ಧಾರವಾಡದ ಸುಜಾತಾ ಯರಗಟ್ಟಿ ಅವರಿಗೆ ಮಾತೆ ಮಹಾದೇವಿ ಹೆಸರಿನ ‘ಬಸವಾತ್ಮಜೆ’ ಪ್ರಶಸ್ತಿ ಹಾಗೂ ಖವಟಕೊಪ್ಪದ ರಾಷ್ಟ್ರೀಯ ಬಸವ ದಳದ ಹಿರಿಯ ಶರಣ ಅಶೋಕ ನಾವಿ ಅವರಿಗೆ ‘ಲಿಂಗಾನಂದ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ಡಾ. ಶೈಲೇಂದ್ರ ಕೆ. ಬೆಲ್ದಾಳೆ ವಹಿಸಿದ್ದರು. ಬಸವ ಮಂಟಪದ ಮಾತೆ ಸತ್ಯಾದೇವಿ, ಕೂಡಲಸಂಗಮದ ಹೂವನೂರಿನ ಲಿಂಗಾರೂಢರು, ಮಂಡ್ಯ ಲಿಂಗಪಟ್ಟಣದ ಓಂಕಾರೇಶ್ವರ ಸ್ವಾಮೀಜಿ, ರಾಜಶ್ರೀ ಶ್ರೀಕಾಂತ ಸ್ವಾಮಿ ಮತ್ತಿತರರು ಹಾಜರಿದ್ದರು. ಮಹಾರುದ್ರ ಡಾಕುಳಗೆ ನಿರೂಪಿಸಿದರೆ, ಪೂಜಾ ಸಿದ್ಧವೀರ ಸ್ವಾಗತಿಸಿದರು. ಶ್ರೀನಾಥ ಕೋರೆ ವಂದಿಸಿದರು.
ಸ್ಮರಣೋತ್ಸವದ ಅಂಗವಾಗಿ ನಡೆದ ಮೆರವಣಿಗೆ ನಗರದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಮಾರ್ಗಗಳ ಮೂಲಕ ಪಾಪನಾಶವರೆಗೆ ಸಾಗಿತು.

ವಿವಿಧ ಭಾಗಗಳಿಂದ ಬಂದಿದ್ದ ಶರಣ–ಶರಣೆಯರು ಶ್ವೇತವರ್ಣದ ವಸ್ತ್ರ ತೊಟ್ಟು ಷಟಸ್ಥಲ ಲಾಂಛನದ ಸ್ಕಾರ್ಫ್ ಧರಿಸಿಕೊಂಡು ಹೆಜ್ಜೆ ಹಾಕಿದರು. ಸಂಸದ ಸಾಗರ್ ಖಂಡ್ರೆ ಕೂಡ ಪಾಲ್ಗೊಂಡು ಯುವಕರೊಂದಿಗೆ ಹೆಜ್ಜೆ ಹಾಕಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಚಾಲನೆ ನೀಡಿದರು. ತೋಟಗಾರಿಕೆ ಕಾಲೇಜಿನ ಡೀನ್ ಸುರೇಶ ಪಾಟೀಲ ಗುರುಬಸವಣ್ಣನವರ ಪೂಜೆ ನೆರವೇರಿಸಿದರು. ಕಾಶಿನಾಥ ಪಾಟೀಲ ಧ್ವಜಾರೋಹಣ ಮಾಡಿದರು. ಚನ್ನಬಸವಾನಂದ ಸ್ವಾಮೀಜಿ ಅಕ್ಕನಾಗಲಾಂಬಿಕಾ ಮಾತಾಜಿ ಓಂಕಾರೇಶ್ವರ ಸ್ವಾಮೀಜಿ ಮಾತೆ ಸತ್ಯಾದೇವಿ ಶ್ರೀಕಾಂತ ಸ್ವಾಮಿ ವಿಜಯಕುಮಾರ ಪಟ್ನೆ ಮಧು ಇಟಕ್ಯಾಳ ಗುಣವಂತಿ ಮಿಠಾರೆ ಮತ್ತಿತರರು ಪಾಲ್ಗೊಂಡಿದ್ದರು.

ಚನ್ನಬಸವಾನಂದ ಸ್ವಾಮೀಜಿ 7ನೇ ಮಹಾದಂಡನಾಯಕರ ಸ್ಮರಣೋತ್ಸವ ಗಂಗಾವತಿಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಘೋಷಿಸಿದರು.