ಸೊಲ್ಲಾಪುರದಲ್ಲಿ ಸಿದ್ದರಾಮರ ವಚನಗಳನ್ನು ಕನ್ನಡದಲ್ಲಿ ಹಾಕಲು ಡಾ. ಬಿಳಿಮಲೆ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ಸೊಲ್ಲಾಪುರ

ಸೊಲ್ಲಾಪುರದಲ್ಲಿ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶರಣ ಸೊನ್ನಲಿಗೆಯ ಸಿದ್ದರಾಮರ ಆಯ್ದ ವಚನಗಳನ್ನು ಕನ್ನಡ ಮತ್ತು ಮರಾಠಿ ಭಾಷೆಯ ಫಲಕಗಳಲ್ಲಿ ಮುದ್ರಿಸಿ, ಹಾಕಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ದೇವಸ್ಥಾನದ ಆಡಳಿತ ಮಂಡಳಿಯನ್ನು ಆಗ್ರಹಿಸಿದ್ದಾರೆ.

ಈ ಕುರಿತಂತೆ ಆಡಳಿತ ಮಂಡಳಿಯ ಮುಖ್ಯಸ್ಥರಿಗೆ ಪತ್ರ ಬರೆದು, ತಮ್ಮ ಕೋರಿಕೆಯನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುವುದೆಂಬ ಆಶಯ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕರ್ನಾಟಕ ಏಕೀಕರಣದ ನಂತರ ಸಿದ್ದರಾಮನ ಹುಟ್ಟೂರಾದ ಸೊನ್ನಲಿಗೆಯು ಮಹಾರಾಷ್ಟ್ರಕ್ಕೆ ಸೇರಿತು. ಇವತ್ತು ಈ ಪ್ರದೇಶ ಮರಾಠಿಮಯವಾಗಿ, ಕನ್ನಡ ಕಾಣೆಯಾಗಿದ್ದು, ಜನರಿಗೆ ಸಿದ್ದರಾಮನ ಮಹತ್ವ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ. ಎಂದು ಹೇಳಿದರು.

“ಕಪಿಲ ಸಿದ್ಧಮಲ್ಲಿಕಾರ್ಜುನನ ಅಂಕಿತದಲ್ಲಿ ೧೯೦೦ಕ್ಕೂ ಹೆಚ್ಚು ವಚನಗಳನ್ನು ಬರೆದ ಸಿದ್ದರಾಮನ ಹೆಸರು ಹೀಗೆ ಮರೆಯಾಗುತ್ತಿರುವುದು ದುರದೃಷ್ಟಕರ. ಕನ್ನಡ ಮತ್ತು ಮರಾಠಿಯಲ್ಲಿ ಸಿದ್ದರಾಮನ ವಚನಗಳ ಸಂದೇಶವು ದೇವಸ್ಥಾನದ ಆವರಣದಲ್ಲಿಯೇ ದೊರೆತಲ್ಲಿ, ಅದು ಭಾಷಾ ಸೌಹಾರ್ದತೆಯ ಸಂಕೇತವಾಗುತ್ತದೆ,” ಎಂದು ಡಾ. ಬಿಳಿಮಲೆ ಹೇಳಿದ್ದಾರೆ.

ಪ್ರಸಿದ್ಧ ವಚನಕಾರನಾದ ಸೊನ್ನಲಿಗೆಯ ಸಿದ್ದರಾಮ ಕಲ್ಯಾಣ ಕ್ರಾಂತಿಯ ಕೇಂದ್ರ ಬಿಂದುವಾಗಿದ್ದ ಶೂನ್ಯ ಸಿಂಹಾಸನವನ್ನೇರಿದ ಮೂರನೆಯ ಅನುಭಾವಿ ಆಗಿದ್ದರು.

ಹಲವಾರು ಕೆರೆ, ಅರವಟ್ಟಿಗೆಗಳ ಜೊತೆ ಸೊಲ್ಲಾಪುರದಲ್ಲಿ ಸಿದ್ದೇಶ್ವರ ದೇವಸ್ಥಾನವನ್ನೂ ನಿರ್ಮಿಸಿದರು.

Share This Article
Leave a comment

Leave a Reply

Your email address will not be published. Required fields are marked *