ದೇಹವೇ ದೇಗುಲ ವಚನದ ಈ ಸಾಲು ಲಿಂಗಾಯತ ಧರ್ಮದ ಅಡಿಗಲ್ಲು. ಸ್ಥಾವರಕ್ಕೆ (ಸ್ಥಗಿತ ವ್ಯವಸ್ಥೆ) ಅಳಿವಿದ್ದರೆ ಜಂಗಮದಲ್ಲಿ (ಚಲನಶೀಲ ವ್ಯವಸ್ಥೆ) ನಿರಂತರ ಹೊಸ ಚೈತನ್ಯವಿರುತ್ತದೆ.
ಇಲ್ಲಿ ‘ಜಂಗಮ’ ಪದವನ್ನು ‘ಗುರು’ವೆಂಬ ಅರ್ಥದಲ್ಲಿ ಬಳಸಲಾಗಿಲ್ಲ. ದೇಹ ದೇವಾಲಯವಾಗಲು ವ್ಯಕ್ತಿತ್ವ ಅರಳಿ ಜಂಗಮವಾಗಬೇಕು. ಇಲ್ಲವಾದರೆ ಅದು ಕೂಡ ಕಲ್ಲಿನ ಗುಡಿಯಂತೆ ಸ್ಥಾವರವಾಗುತ್ತದೆ.
‘ಗುರು ಲಿಂಗ ಜಂಗಮ’ ತತ್ವ ಪ್ರತಿಪಾದಿಸುವಂತೆ ವ್ಯಕ್ತಿತ್ವ ಮೂರು ಭಿನ್ನ ಹಂತಗಳಲ್ಲಿ ಪಕ್ವವಾಗುತ್ತದೆ. ಈ ವಿಕಾಸದ ಅತ್ಯುನ್ನತ ಹಂತ ಜಂಗಮ, ಎಲ್ಲಾ ಶರಣರ ಮುಖ್ಯ ಧ್ಯೇಯ.
ಜ್ಞಾನ ಸಂಪಾದಿಸಿದವರು ‘ಗುರು’ವಾಗುತ್ತಾರೆ. ಅದನ್ನು ಆಚರಣೆಗೆ ತಂದವರು ‘ಲಿಂಗ’ವಾಗುತ್ತಾರೆ. ಹಾಗೆಯೆ ಮುಂದುವರೆದು ಸಮಾಜದ ಉತ್ತಮ ಸದಸ್ಯರಾಗುವವರು ‘ಜಂಗಮ’ರಾಗತ್ತಾರೆ.
ಜಂಗಮರು ನಿಷ್ಠೆಯ ಕಾಯಕದಿಂದ ಬಂದ ಆದಾಯವನ್ನು ದಾಸೋಹವಾಗಿ ಹಂಚಿಕೊಳ್ಳುತ್ತಾರೆ. ಇಂತಹ ಜ್ಞಾನಿ, ಕ್ರಿಯಾರೂಡ, ಸಮಾಜಮುಖಿ ಸದಸ್ಯರನ್ನು ಹೊಂದಿರುವ ಸಮಾಜಕ್ಕೆ ಅಳಿವಿಲ್ಲ.
ವೈಯಕ್ತಿಕ ಮೋಕ್ಷ ಸಾಧನೆ ಬಹುತೇಕ ಧರ್ಮಗಳ ಗುರಿ. ಆದರೆ ಲಿಂಗಾಯತ ಧರ್ಮ ವೈಯಕ್ತಿಕ ವಿಕಾಸದ ಜೊತೆಗೆ ವೈಚಾರಿಕ, ನ್ಯಾಯಬದ್ಧ, ಚಲನಶೀಲ ಸಮಾಜವನ್ನೂ ನಿರ್ಮಿಸುತ್ತದೆ.
(‘ಲಿಂಗಾಯತ ಪೂರ್ಣ ಧರ್ಮ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸುವ ಭಾಗ – ಮಾರ್ಗ ೭)