ಗದಗ:
ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವುದು ನಮ್ಮ ಧ್ಯೇಯ. ಸಂಸ್ಥಾಪಕರಾದ ಲಿಂಗೈಕ್ಯ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಆಶಯದಂತೆ ಬಡ ವಿದ್ಯಾರ್ಥಿಗಳಿಗಾಗಿ ಶೀಘ್ರದಲ್ಲೇ ಉಚಿತ ವಸತಿ ನಿಲಯ ಪ್ರಾರಂಭಿಸಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ ತಿಳಿಸಿದರು.
ನಗರದ ಶ್ರೀ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದ ತೋಂಟದಾರ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ಕ್ಯಾಂಪಸ್ನಲ್ಲಿ ನೂತನ ಕಟ್ಟಡದ ಭೂಮಿಪೂಜೆ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಸಹಯೋಗದೊಂದಿಗೆ ಐಡಿಯಾ ಪ್ರಯೋಗಾಲಯ ಉದ್ಘಾಟನೆ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಉಪಕುಲಪತಿ ಡಾ. ಎಸ್. ವಿದ್ಯಾಶಂಕರ ಮಾತನಾಡಿ, 2030ರ ವೇಳೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಲಿದ್ದು, ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ (ಎಐ), ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್, ಗ್ರೀನ್ ಎನರ್ಜಿ, ಬಯೋಟೆಕ್ನಾಲಜಿ ಸೇರಿದಂತೆ ಭವಿಷ್ಯದ ತಂತ್ರಜ್ಞಾನಗಳಿಗೆ ಸಜ್ಜಾಗಬೇಕು ಎಂದರು.
ಉತ್ತಮ ಪ್ಲೇಸ್ಮೆಂಟ್ಗಳು ಮತ್ತು ಸಂಶೋಧನಾ ಚಟುವಟಿಕೆಗಳು ಸಂಸ್ಥೆಯ ಮೆರಗು ಹೆಚ್ಚಿಸುತ್ತವೆ. ರ್ಯಾಂಕಿಂಗ್ ನಿರ್ಧಾರದಲ್ಲಿ ಪ್ಲೇಸ್ಮೆಂಟ್ ಮಹತ್ವದ ಪಾತ್ರವಹಿಸುತ್ತದೆ ಎಂದರು.

ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ದೂರವಿದ್ದು ಸಮಯದ ಮಹತ್ವ ಅರಿತು ಏಕಾಗ್ರತೆಯಿಂದ ಅಭ್ಯಾಸ ಮಾಡಬೇಕು. ತಂತ್ರಜ್ಞಾನ ಕ್ಷೇತ್ರದ ಹೊಸ ಅವಕಾಶಗಳನ್ನು ಅರಿತು ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಬೇಕು. ಅಗತ್ಯ ಸೌಲಭ್ಯ ಒದಗಿಸಲು ವಿಟಿಯು ಸದಾ ಸಿದ್ಧವಾಗಿದೆ ಎಂದು ಭರವಸೆ ನೀಡಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹೇಶ ಎಂ. ಅವಟಿ ಮಾತನಾಡಿ, ಸುಮಾರು ರೂ. 60 ಲಕ್ಷ ವೆಚ್ಚದಲ್ಲಿ ಎಐಸಿಟಿಇ ಸಹಯೋಗದೊಂದಿಗೆ ನಿರ್ಮಿಸಲಾದ ಐಡಿಯಾ ಪ್ರಯೋಗಾಲಯ ಹಾಗೂ ನೂತನ ಕಟ್ಟಡದ ವಿವರ ನೀಡಿದರು.
ಹೊಸ ಕಟ್ಟಡದಲ್ಲಿ ಆಧುನಿಕ ಪ್ರಯೋಗಾಲಯಗಳು, ಕಂಪ್ಯೂಟರ್ ಲ್ಯಾಬ್ಗಳು, ತರಬೇತಿ ಮತ್ತು ಪ್ಲೇಸ್ಮೆಂಟ್ ಕೇಂದ್ರಗಳು, ಸಭಾಂಗಣಗಳು, ಸ್ಟಾರ್ಟ್ಅಪ್ ಸ್ಪೇಸ್ ಮತ್ತು ಅಲ್ಯೂಮ್ನಿ ಗೇಸ್ಟ್ ಹೌಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಶಿರೋಳ ತೋಂಟದಾರ್ಯ ಮಠದ ಪೂಜ್ಯ ಶಾಂತಲಿಂಗ ಮಹಾಸ್ವಾಮೀಜಿ ಮಾತನಾಡಿ, ಗ್ರಾಮೀಣ ಹಾಗೂ ಬಡ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶಗಳು ಇನ್ನಷ್ಟು ದೊರಕುವಂತಾಗಲಿ ಎಂದು ಹಾರೈಸಿದರು.
ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಸಂಸ್ಥೆಯ ಮಾಜಿ ನಿರ್ದೇಶಕ ಎಸ್.ಟಿ. ಪಾಟೀಲ, ಆಡಳಿತ ಮಂಡಳಿ ಸದಸ್ಯ ಡಾ. ರಾಜಶೇಖರ ಪವಾಡಶೆಟ್ಟರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಉಪಪ್ರಾಂಶುಪಾಲ ಡಾ. ಡಿ. ಬಿ. ರೇವಣಕರ ಸ್ವಾಗತಿಸಿದರು. ಡಾ. ಜಯಶ್ರೀ ರಡ್ಡೇರ್ ಕಾರ್ಯಕ್ರಮ ನಿರೂಪಿಸಿದರು.
