ಬೀದರ
ಕೋಮುಸೌಹಾರ್ದ, ಶಾಂತಿ, ನೆಮ್ಮದಿಗಾಗಿ ‘ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಡಿ. 7ರಂದು ಸಂಜೆ 6ಕ್ಕೆ ಸೂಫಿ ಸಂತ ಶರಣರ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಹವಾ ಮಲ್ಲಿನಾಥ ಸ್ವಾಮೀಜಿ, ಹಾರಕೂಡದ ಚನ್ನವೀರ ಶಿವಾಚಾರ್ಯರು,
ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು, ಸಚಿವರಾದ ಈಶ್ವರ ಖಂಡ್ರೆ, ರಹೀಂ ಖಾನ್, ವಕ್ಫ್ ಬೋರ್ಡ್ ನೂತನ ಅಧ್ಯಕ್ಷ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಸೇರಿದಂತೆ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು.
ಈಗಾಗಲೇ ಹುಬ್ಬಳ್ಳಿಯಲ್ಲಿ ಮೊದಲ ಕಾರ್ಯಕ್ರಮ, ಕೊಪ್ಪಳದಲ್ಲಿ ಎರಡನೇ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ನಿರೀಕ್ಷಿತ ಮಟ್ಟಕ್ಕಿಂತಲೂ ಹೆಚ್ಚಿನ ಸ್ಪಂದನೆ ದೊರೆತಿದೆ. ಎಲ್ಲಾ ವರ್ಗಗಳ ಜನ ಅದರಲ್ಲಿ ಪಾಲ್ಗೊಂಡಿದ್ದರು. ಇಲ್ಲಿ ಕೂಡ ನಿರೀಕ್ಷೆಗೂ ಮೀರಿ ಜನ ಸೇರುವ ಸಾಧ್ಯತೆ ಇದೆ ಎಂದು ನಗರದಲ್ಲಿ ಹೇಳಿದರು.
ಇಡೀ ಜಗತ್ತಿಗೆ ಪ್ರಜಾಪ್ರಭುತ್ವ, ಸಂಸತ್ತಿನ ಪರಿಕಲ್ಪನೆ ಕೊಟ್ಟ ನಾಡು ಬಸವಕಲ್ಯಾಣವಾಗಿದೆ. ಸಮ ಸಮಾಜ, ಕಲ್ಯಾಣರಾಜ್ಯ ನಿರ್ಮಾಣಕ್ಕೆ ಶ್ರಮಿಸಿದ ಬಸವಾದಿ ಶರಣರು ನಡೆದಾಡಿದ ಪವಿತ್ರಸ್ಥಳ ಕಲ್ಯಾಣ. ಇಲ್ಲಿ ಕಾರ್ಯಕ್ರಮ ಸಂಘಟಿಸಿ ಇಡೀ ರಾಜ್ಯಕ್ಕೆ ಒಂದು ದೊಡ್ಡ ಸಂದೇಶ ನೀಡಲಾಗುವುದು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮನ್ನಾನ್ ಸೇಠ್, ಪ್ರಧಾನ ಕಾರ್ಯದರ್ಶಿ ದತ್ತು ಮೂಲಗೆ, ಬಸವಕಲ್ಯಾಣ ದರ್ಗಾದ ಸೈಯದ್ ಅಲಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸ್ಟುತ್ಯವಾದ ಕಾರ್ಯಕ್ರಮ, ಹೆಚ್ಚಿನ ಜನರತನಕ ಮುಟ್ಟಿ ಸುವ ಕಾರ್ಯ ಜನಜಾಗೃತಿ ಆಗಬೇಕು. ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಾಶಯಗಳು