ಮುರುಘಾ ಮಠಕ್ಕೆ ಬಂದ ಸುತ್ತೂರು ಜಾತ್ರಾ ಪ್ರಚಾರ ರಥ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ:

12ನೇ ಶತಮಾನದ ಶ್ರೇಷ್ಠ ಅಭಿಯಾನ ಮತ್ತು ಅನುಷ್ಠಾನಗಳ ಬೀಜಮಂತ್ರಗಳೆಂದರೆ ಒಂದು ಕಾಯಕ ಮತ್ತೊಂದು ದಾಸೋಹ. ಅಂತಹ ಮೇರು ಆಚರಣೆಗಳನ್ನು ಕರ್ನಾಟಕದ ಬಹುತೇಕ ಮಠಗಳು ಅನುಸರಿಸಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಪೂಜ್ಯ ಡಾ. ಬಸವಕುಮಾರ ಸ್ವಾಮಿಗಳು ‘ಸುತ್ತೂರು ಆದಿ ಜಗದ್ಗುರುಗಳ ಜಾತ್ರಾ ಮಹೋತ್ಸವದ ಪೂರ್ವಸಿದ್ದತಾ ಪ್ರಚಾರ ರಥೋತ್ಸವಕ್ಕೆ ಸ್ವಾಗತ ಹಾಗೂ ಬೀಳ್ಕೊಡುಗೆಯ’ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಅದರಲ್ಲಿ ಚಿತ್ರದುರ್ಗದ ಬೃಹನ್ಮಠವೂ ಸೇರಿದಂತೆ ಮೈಸೂರು ಭಾಗದಲ್ಲಿ ಸುತ್ತೂರು ಮಠ ದಾಸೋಹ ಮತ್ತು ಶಿಕ್ಷಣಕ್ಕೆ ಅತಿಹೆಚ್ಚಿನ ಪ್ರಾಧಾನ್ಯತೆ ನೀಡಿರುವುದನ್ನು ಕಾಣಬಹುದಾಗಿದೆ ಎಂದರು.

ಜನವರಿ ತಿಂಗಳಲ್ಲಿ ನಡೆಯುವ ಮೈಸೂರು ಜಿಲ್ಲೆ ಸುತ್ತೂರಿನ ಜಾತ್ರಾ ಮಹೋತ್ಸವ ಅಂಗವಾಗಿ ಆ ಮಠದ ಆದಿಜಗದ್ಗುರು ಮತ್ತು ಸಂಸ್ಥಾಪನಾಚಾರ್ಯರೂ ಆದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ನಾಡಿನೆಲ್ಲೆಡೆ ಜಗದ್ಗುರು ಮೂರ್ತಿ ಇರುವ ಅಲಂಕೃತ ರಥವು ಶುಕ್ರವಾರ ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮುಕ್ಕಾಂ ಮಾಡಿ ವಾಸ್ತವ್ಯ ಹೊಂದಿ, ಇಂದು ಆ ರಥವನ್ನು ಮುಂದಿನ ಊರಿಗೆ ಗೌರವಪೂರ್ವಕವಾಗಿ ಬೀಳ್ಕೊಡುವ ಸಮಾರಂಭ ನಡೆಯಿತು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷರಾದ ಕೆ.ಎಂ. ವೀರೇಶ ಅವರು ಮಾತನಾಡುತ್ತ, ಸುತ್ತೂರಿನ ಶ್ರೀಮಠಕ್ಕೆ ಚಿತ್ರದುರ್ಗ ಬೃಹನ್ಮಠದ ಮೇಲೆ ಎಲ್ಲಿಲ್ಲದ ಪ್ರೀತಿ, ವಿಶ್ವಾಸವಿದೆ. ಅದು ಮುಂದುವರಿದಿದೆ ಎನ್ನುವುದಕ್ಕೆ ಈ ರಥದ ಬೀಳ್ಕೊಡುಗೆ ಸಮಾರಂಭವೇ ಸಾಕ್ಷಿ ಎಂದರು. ಮಠ ಮಠಗಳ ನಡುವೆ ಸೌಹಾರ್ದ ವಾತಾವರಣ ಮತ್ತಷ್ಟು ಹೆಚ್ಚಲಿ ಎಂದು ಕಳಕಳಿ ವ್ಯಕ್ತಪಡಿಸಿದರು.

ವಿವಿಧ ಸಮಾಜಗಳ, ಸಂಘ-ಸಂಸ್ಥೆಗಳ ಮುಖಂಡರುಗಳಾದ ಜಯದೇವಮೂರ್ತಿ, ಬಸವರಾಜ ಕಟ್ಟಿ, ಕುಬೇರಪ್ಪ, ಗಂಗಾಧರ, ವಕೀಲರಾದ ಹನುಮಂತಪ್ಪ, ಮುರುಘೇಶ, ಜ್ಞಾನಮೂರ್ತಿ, ನಂದೀಶ, ಶಂಕರಪ್ಪ, ಅಶೋಕ, ಇಟಗಿ ವಿಜಯಕುಮಾರ ಸೇರಿದಂತೆ ಎಸ್.ಜೆ.ಎಂ. ವಿದ್ಯಾಪೀಠದ ಕೆಲನೌಕರರು, ಶ್ರೀಮಠದ ಸಿಬ್ಬಂದಿ ಭಾಗವಹಿಸಿ ಶಿವರಾತ್ರೀಶ್ವರರ ಪ್ರತಿಮೆಗೆ ವಚನಗಳ ಮೂಲಕ ಭಕ್ತಿ ಸಮರ್ಪಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *