ಸುತ್ತೂರು ಕ್ಷೇತ್ರದಲ್ಲಿ ಆರು ದಿನಗಳ ಮಹಾಜಾತ್ರೆ

ಬಸವ ಮೀಡಿಯಾ
ಬಸವ ಮೀಡಿಯಾ

ಸುತ್ತೂರು

ಇಂದಿನಿಂದ ಸುತ್ತೂರು ಕ್ಷೇತ್ರದಲ್ಲಿ ಆರು ದಿನಗಳ ಮಹಾಜಾತ್ರೆಗೆ ನಡೆಯಲಿದೆ. ಸುತ್ತಮುತ್ತಲ ಜನ ಮಾತ್ರವಲ್ಲದೆ ಜಿಲ್ಲೆ, ರಾಜ್ಯ, ಹೊರರಾಜ್ಯ, ವಿದೇಶಗಳಿಂದಲೂ ಭಕ್ತರು ಆಗಮಿಸಿ ಜಾತ್ರೆಯಲ್ಲಿ ಎಲ್ಲೆಂದರಲ್ಲಿ ಅಡ್ಡಾಡಿ, ವಿಶೇಷತೆಗಳನ್ನೆಲ್ಲ ಕಣ್ತುಂಬಿಕೊಂಡು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಖುಷಿಪಡಲು ಕಾತರರಾಗಿದ್ದಾರೆ.

ಜಾತ್ರೆ ಆರಂಭ ಮತ್ತು ಅಂತ್ಯದವರೆಗೆ ಪ್ರತಿದಿನವೂ ವಿಶೇಷತೆಯಿಂದ ಕೂಡಿರುತ್ತದೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಆರೋಗ್ಯ, ಕೃಷಿ, ಕ್ರೀಡೆ, ಶೈಕ್ಷಣಿಕ, ಸಾಹಿತ್ಯ, ಸಂಗೀತ, ನಾಟಕ, ಸಾಮೂಹಿಕ ವಿವಾಹ, ಸರ್ವ ಧರ್ಮ ಸಮ್ಮೇಳನ ಹೀಗೆ ಹತ್ತಾರು ವಿಶೇಷತೆಗಳ ಸಂಗಮವಾಗಿ ಆಕರ್ಷಿಸುತ್ತದೆ. ಇನ್ನು ಜಾತ್ರೆ ಸಂಬಂಧ ಆರು ದಿನಗಳ ಕಾಲವೂ ಧಾರ್ಮಿಕ ಕೈಂಕರ್ಯಗಳು ನಡೆಯುತ್ತವೆ.

‘ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಜ.26ರಿಂದ 31ರವರೆಗೆ ನಡೆಯಲಿರುವ ‘ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ’ದ ಅಂಗವಾಗಿ ಜನರ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ತಿಳಿಸಿದರು.

ಸುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಕ್ತರು, ಸೇವಾರ್ಥದಾರರು, ಸಾರ್ವಜನಿಕರು, ಸಂಘ–ಸಂಸ್ಥೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಸಹಾಯ–ಸಹಕಾರದಿಂದ ನಡೆಯಲಿದೆ. ಉತ್ಸವದ ಸಿದ್ಧತೆಯು ಭರದಿಂದ ಸಾಗಿದೆ’ ಎಂದು ಹೇಳಿದರು.

ಜನವರಿ 26

ಬೆಳಿಗ್ಗೆ 8ಕ್ಕೆ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ 76ನೇ ಗಣರಾಜ್ಯೋತ್ಸವ ನಡೆಯಲಿದ್ದು, ದೇವನೂರು ಗುರುಮಲ್ಲೇಶ್ವರ ಮಠದ ಮಹಾಂತ ಸ್ವಾಮೀಜಿ, ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಂಕರ ಬಿದರಿ ಅಧ್ಯಕ್ಷತೆ ವಹಿಸುವರು.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಧ್ವಜಾರೋಹಣ ನೆರವೇರಿಸುವರು. ಕೆಒಎಫ್ ಅಧ್ಯಕ್ಷ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್‌ ಸದಸ್ಯ ಕೆ. ವಿವೇಕಾನಂದ ಸೇರಿದಂತೆ ಹಲವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು‘ ಎಂದರು.

ಸಂಜೆ 4ಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಆಲಗೂರು ಬಬಲೇಶ್ವರ ಮಠದ ಪಂಚಮಸಾಲಿ ಮಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ಹಾಗೂ ಸಂಸದ ಬಸವರಾಜ ಎಸ್. ಬೊಮ್ಮಾಯಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಸ್ತುಪ್ರದರ್ಶನ ಉದ್ಘಾಟಿಸುವರು. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕೃಷಿ ಮೇಳಕ್ಕೆ ಚಾಲನೆ ನೀಡುವರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಸಾಂಸ್ಕೃತಿಕ ಮೇಳ ಉದ್ಘಾಟಿಸುವರು.

ಆರೋಗ್ಯ ತಪಾಸಣಾ ಶಿಬಿರ, ದೋಣಿ ವಿಹಾರವೂ ಉದ್ಘಾಟನೆಗೊಳ್ಳಲಿದೆ.

ಜನವರಿ 27

ಬೆಳಿಗ್ಗೆ 10ಕ್ಕೆ ಸಾಮೂಹಿಕ ವಿವಾಹ ನಡೆಯಲಿದ್ದು, 24 ಅಂತರ್ಜಾತಿ, ಒಂದು ಅಂತರ್‌ಧರ್ಮೀಯ ಸೇರಿದಂತೆ 155 ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿವೆ.

ಉಡುಪಿ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಗದಗದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ ಸಮ್ಮುಖ ವಹಿಸಲಿದ್ದು, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸುವರು. ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದು, ಸಚಿವರಾದ ರಾಮಲಿಂಗಾ ರೆಡ್ಡಿ, ಶಿವರಾಜ್ ಎಸ್. ತಂಗಡಗಿ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.

‘ಅಂದು ಸಂಜೆ 4ಕ್ಕೆ ರಾಜ್ಯಮಟ್ಟದ ಭಜನಾ ಮೇಳ, ದೇಸಿ ಆಟಗಳು, ಸೋಬಾನೆ ಪದ, ರಂಗೋಲಿ ಸ್ಪರ್ಧೆ ಹಾಗೂ ಜಾತ್ರಾ ಮಹೋತ್ಸವ ಉದ್ಘಾಟನೆಗೊಳ್ಳಲಿದೆ. ಅರ್ಕ ಫೌಂಡೇಷನ್ ಸಂಸ್ಥಾಪಕ ಯೋಗಿ ಶ್ರೀನಿವಾಸ ಅರ್ಕ ಮತ್ತು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಸಮ್ಮುಖ ವಹಿಸಲಿದ್ದು, ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆ ವಹಿಸುವರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಾಟಕೋತ್ಸವ ಉದ್ಘಾಟಿಸುವರು. ಸಚಿವ ಮಧು ಬಂಗಾರಪ್ಪ ಭಜನಾ ಮೇಳ ಉದ್ಘಾಟಿಸಲಿದ್ದು, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ದೇಸಿ ಆಟಗಳ ಸ್ಪರ್ಧೆಗೆ ಚಾಲನೆ ನೀಡುವರು.

ಭಜನಾ ಮೇಳದಲ್ಲಿ 7 ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು, 800ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ಪುರುಷ, ಮಹಿಳೆ ಹಾಗೂ ಮಕ್ಕಳ ವಿಭಾಗದಲ್ಲಿ ಸ್ಪರ್ಧೆ ಇರಲಿದೆ. ಪ್ರತಿ ವಿಭಾಗದಲ್ಲೂ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುವುದು.

ಜನವರಿ 28
ರಥೋತ್ಸವ, ಶ್ರೀ ವೀರಭದ್ರೇಶ್ವರ ಕೊಂಡೋತ್ಸವ ನೆರವೇರಿಕೆ, ಧಾರ್ಮಿಕ ಸಭಾ

ಜನವರಿ 29
ಶ್ರೀಮಹದೇಶ್ವರ ಕೊಂಡೋತ್ಸವ ಮತ್ತು ಲಕ್ಷ ದೀಪೋತ್ಸವ ಆಯೋಜನೆ, ಧಾರ್ಮಿಕ ಸಭಾ

ಜನವರಿ 30
30ರಂದು ಮಧ್ಯಾಹ್ನ 2ಕ್ಕೆ ಕುಸ್ತಿ ಪಂದ್ಯಗಳು ನಡೆಯಲಿದ್ದು, ಮಲ್ಲನಮೂಲೆ ಮಠದ ಚನ್ನಬಸವ ಸ್ವಾಮೀಜಿ, ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖ ವಹಿಸುವರು. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು.

ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಅಂದು ಸಂಜೆ 5ಕ್ಕೆ ಕೃಷಿ ಮೇಳ ಮತ್ತು ದನಗಳ ಜಾತ್ರೆ ಸಮಾರೋಪಗೊಳ್ಳಲಿದೆ. ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಮತ್ತು ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು. ಸಂಸದ ಜಗದೀಶ್ ಎಸ್. ಶೆಟ್ಟರ್ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಸಮಾರೋಪ ಭಾಷಣ ಮಾಡುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪಾಲ್ಗೊಳ್ಳುವರು.

ಜನವರಿ 31
ಜ.31ರಂದು ಬೆಳಿಗ್ಗೆ 10.30ಕ್ಕೆ ಸಾಂಸ್ಕೃತಿಕ ಮೇಳೆ ಮತ್ತು ವಸ್ತುಪ್ರದರ್ಶನದ ಸಮಾರೋಪ ನಡೆಯಲಿದ್ದು, ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಸಮ್ಮುಖ ವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರೋಪ ಭಾಷಣ ಮಾಡುವರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆ ವಹಿಸುವರು. ಸಚಿವರಾದ ಎಂ.ಬಿ. ಪಾಟೀಲ, ಎಚ್.ಕೆ. ಪಾಟೀಲ ಮತ್ತು ಬಿ.ಎಸ್. ಸುರೇಶ್ ಪಾಲ್ಗೊಳ್ಳುವರು’ ಎಂದರು.

ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಶಿವಕುಮಾರ್, ಆಡಳಿತಾಧಿಕಾರಿ ಎಸ್.ಪಿ. ಉದಯಶಂಕರ್, ದಾಸೋಹ ಸಮಿತಿಯ ಸಂಚಾಲಕ ಸುಬ್ಬಪ್ಪ ಪಾಲ್ಗೊಂಡಿದ್ದರು.

Share This Article
Leave a comment

Leave a Reply

Your email address will not be published. Required fields are marked *