ಬಂಗಾರದ ಕರಡಿಗೆ ಗಿರವಿಯಿಟ್ಟು ವಿದ್ಯಾರ್ಥಿಗಳನ್ನು ಪೋಷಿಸಿದ ರಾಜೇಂದ್ರ ಶ್ರೀಗಳು: ಶಂಕರ ದೇವನೂರು

ನಾಗರತ್ನ ಜಿ ಕೆ
ನಾಗರತ್ನ ಜಿ ಕೆ

ಮೈಸೂರು

ಚಾಮರಾಜೇಶ್ವರಿ ಅಕ್ಕನ ಬಳಗದ ವತಿಯಿಂದ ಮಂಗಳವಾರ ಲಿಂಗೈಕ್ಯ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 109ನೆಯ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ರಾಜೇಂದ್ರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು ತಮ್ಮ ನುಡಿ ನಮನದಲ್ಲಿ ಸುತ್ತೂರಿನ ಇತಿಹಾಸ ಮತ್ತು ರಾಜೇಂದ್ರ ಶ್ರೀಗಳ ವ್ಯಕ್ತಿತ್ವ ಪರಿಚಯ ಮಾಡಿಕೊಟ್ಟರು. ಒಂದು ಸಾವಿರ ವರ್ಷಗಳ ಹಿಂದೆ ಸಿದ್ದಗಿರಿಯಿಂದ ಬಂದಂತಹ ಆದಿ ಜಗದ್ಗುರುಗಳು ಶಿವರಾತ್ರಿಶ್ವರರು ಕಪಿಲಾ ನದಿಯ ದಡದಲ್ಲಿ ಧ್ಯಾನಸ್ಥರಾಗಿ ಕುಳಿತ ಪವಿತ್ರ ಸ್ಥಳವೇ ಸುತ್ತೂರು. ಚೋಳರು ಮತ್ತು ಗಂಗರ ನಡುವೆ ಸಾಮರಸ್ಯವನ್ನು ಕಲ್ಪಿಸಿದವರು ನಮ್ಮ ಸುತ್ತೂರು ಗುರು ಪರಂಪರೆಯವರು, ಎಂದು ಹೆಮ್ಮೆಯಿಂದ ಹೇಳಿದರು.

ರಾಜೇಂದ್ರ ಶ್ರೀಗಳ ಬದುಕು ಸುಖದ ಸೋಪಾನವಾಗಿರಲಿಲ್ಲ ಬದಲಾಗಿ ಕಷ್ಟಗಳ ಸುರಿಮಳೆಯಂತಾಗಿತ್ತು. ಕ್ವಿಟ್ ಇಂಡಿಯಾ ಚಳುವಳಿಯ ಕಾಲದಲ್ಲಿ ಭೀಕರ ಬರಗಾಲವೂ ಬಂದಾಗ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ, ದವಸ ಧಾನ್ಯಗಳ ಕೊರತೆಯಾಗಿ ವಿದ್ಯಾರ್ಥಿಗಳಿಗೆ ಅನ್ನದಾಸೋಹವನ್ನು ಮಾಡುವುದು ಕಷ್ಟವಾಯಿತು. ಹಳ್ಳಿಹಳ್ಳಿಗಳಿಗೆ ಹೋಗಿ ಭಿಕ್ಷಾಟನೆ ಮಾಡಿದರೂ ಸಾಕಾಗದೆ ಭಕ್ತರು ಕೊಟ್ಟಂತಹ ಬಂಗಾರದ ಕರಡಿಗೆಯನ್ನು ಹಾಗೂ ಉಂಗುರವನ್ನು ಗಿರವಿ ಇಟ್ಟು ಮಕ್ಕಳನ್ನು ಪೋಷಿಸಿದರು. ಇದಕ್ಕೇ “ತಾಯಿ ಹೃದಯದ ರಾಜೇಂದ್ರ ಶ್ರೀಗಳು” ಎಂದು ಪ್ರಸಿದ್ಧರಾದರು.

ಮಾಜಿ ಕೇಂದ್ರ ಸಚಿವ ಗುರುಪಾದ ಸ್ವಾಮಿಯವರು ರಾಜೇಂದ್ರ ಶ್ರೀಗಳಿಗೆ ಯಾಕಿಷ್ಟೆಲ್ಲ ಕಷ್ಟಪಡುತ್ತೀರಾ ಎಂದಾಗ ಗುರುಗಳು ಜನರ ನಗುವಿನ ಹಿಂದಿರುವ ನೋವೇ ಇದಕ್ಕೆ ಕಾರಣ, ಬೇರಿನ ನೋವೇ ಹೂವಿನ ನಗುವಿಗೆ ಕಾರಣ ಎಂದು ಪತ್ರ ಬರೆದಿದ್ದರು. ಒಮ್ಮೆ ಗುರುಗಳು ಹರಿದ ಬಟ್ಟೆಯನ್ನು ಹೊಲೆದುಕೊಂಡು ಹಾಕಿಕೊಳ್ಳುವಾಗ ಒಬ್ಬರು ಹರಿದ ಬಟ್ಟೆಗೇಕೆ ತೇಪೆ, ಹೊಸದನ್ನು ಹಾಕಿಕೊಳ್ಳಬಾರದೆ ಎಂದು ಪ್ರಶ್ನಿಸಿದಕ್ಕೆ ಇವತ್ತಿನ ಕೂಡಿಡುವಿಕೆ ನಾಳಿನ ಮಕ್ಕಳ ಬದುಕಿಗೆ ಅನುವು ಎಂದು ಹೇಳಿದ್ದರು.

ನಾವುಗಳು ಆಸೆಯಿಂದ ಆಸ್ತಿಗಾಗಿ ಬದುಕ್ತಾ ಇದ್ದೀವಿ ಆದರೆ ರಾಜೇಂದ್ರ ಶ್ರೀಗಳು ಆಸೆಯನ್ನ ಪರಿತ್ಯಜಿಸಿ ಬದುಕಿದವರು, ಎಂದು ಹೇಳಿದರು. ಅಲ್ಲಮಪ್ರಭುಗಳ ‘ಕಂದಲು ಕರಗಿತ್ತು ಬೆಣ್ಣೆ ಉಳಿದಿತ್ತು’ ವಚನದಂತೆ ರಾಜೇಂದ್ರ ಶ್ರೀಗಳು ಬದುಕಿದರು. ಕಂದಲು ಎಂದರೆ ಬೆಣ್ಣೆ ಕಾಯಿಸುವ ಪಾತ್ರೆ. ಕಂದಲು ಎಂದರೆ ರಾಜೇಂದ್ರ ಶ್ರೀಗಳು, ಬೆಣ್ಣೆ ಎಂದರೆ ಅವರು ಮಾಡಿದ ಸಾಧನೆಗಳು, ಎಂದು ಹೇಳಿದರು.

ರಾಜೇಂದ್ರ ಶ್ರೀಗಳು ಹೆಚ್ಚಿನ ವ್ಯಾಸಂಗಕ್ಕಾಗಿ ಯಾರಿಗೂ ತಿಳಿಸದೆ ಕಾಶ್ಮೀರದಲ್ಲಿ ನೆಲೆಸಿದ್ದ ಪಂಚಗವಿ ಮಠದ ಗೌರಿಶಂಕರರ ಬಳಿಗೆ ತೆರಳಿದಾಗ ಅವರು ಹೆಚ್ಚಿನ ಜ್ಞಾನವನ್ನು ನೀನೊಬ್ಬನೇ ಪಡೆಯುತ್ತಾ ಇಲ್ಲಿರುವ ಬದಲು, ನಿನ್ನಲ್ಲಿರುವ ಜ್ಞಾನವನ್ನು ಅಲ್ಲಿರುವ ಹಳ್ಳಿಗಳ ಮಕ್ಕಳಿಗೆ ಉಣ ಬಡಿಸಿದರೆ ಇಡೀ ರಾಜ್ಯ ಸುಭೀಕ್ಷವಾಗುತ್ತದೆ ಎಂದು ತಿಳಿಸಿದರು.

ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ರಾಜೇಂದ್ರ ಶ್ರೀಗಳ ತಾಯಿ ಮಮತೆಯ ಹೃದಯವನ್ನು ಸ್ಮರಿಸಿಕೊಂಡರು. ಒಬ್ಬ ತಾಯಿ ಹೇಗೆ ತಾನು ಉಪವಾಸವಿದ್ದರೂ ತನ್ನ ಮಕ್ಕಳಿಗೆ ಉಣ ಬಡಿಸುವಳೋ ಹಾಗೆಯೇ ಎಷ್ಟೋ ದಿನ ಮಕ್ಕಳಿಗೆಲ್ಲ ಆಹಾರವನ್ನು ಉಣಬಡಿಸಿ ರಾಜೇಂದ್ರ ಶ್ರೀಗಳು ತಾವು ಉಪವಾಸ ಮಲಗಿದ್ದರು.

ರಾಜೇಂದ್ರ ಶ್ರೀಗಳು ಬಿಕ್ಷಾಟನೆಗೆಂದು ಹಳ್ಳಿಗಳಿಗೆ ತೆರಳಿದಾಗ ಆ ಹಳ್ಳಿಯ ಜನರು ತಾವು ಬೆಳೆದ ದವಸ ಧಾನ್ಯಗಳನ್ನು ಬಂಡಿಗಳಲ್ಲಿ ಇಟ್ಟುಕೊಂಡು ಡೋಲು ಡಂಗೂರಗಳನ್ನು ಬಾರಿಸಿಕೊಂಡು ಬಂದು ವಸತಿ ಶಾಲೆಯ ಮಕ್ಕಳ ಅನುಕೂಲಕ್ಕಾಗಿ, ರಾಜೇಂದ್ರ ಶ್ರೀಗಳ ಮೇಲಿನ ಪ್ರೀತಿಗಾಗಿ ನೀಡುತ್ತಿದ್ದರು ಎಂಬುದನ್ನು ತಿಳಿಸಿದರು.

ಸಾಹಿತ್ಯಿಕವಾಗಿಯೂ ಜನರು ಮುಂದೆ ಬರಬೇಕು, ವಿಚಾರ ಸಂಕೀರ್ಣಗಳು ನಡೆಯಬೇಕು, ವಿಚಾರ ವಿನಿಮಯಗಳು ನಡೆಯಬೇಕು ಎಲ್ಲರೂ ಸಾಹಿತ್ಯ ಗಳನ್ನು ಅರಿತುಕೊಳ್ಳಬೇಕು ಎನ್ನುವ ಮಹಾದಾಶಯದಿಂದಾಗಿ ಶರಣ ಸಾಹಿತ್ಯ ಪರಿಷತ್ತನ್ನು ರಾಜೇಂದ್ರ ಶ್ರೀಗಳು ಹುಟ್ಟುಹಾಕಿದರು.

ಚಾಮರಾಜೇಶ್ವರಿ ಅಕ್ಕನ ಬಳಗದ ಅಧ್ಯಕ್ಷೆ ಮಾದಲಾಂಬಿಕೆ ನಂಜುಂಡಸ್ವಾಮಿ ತಮ್ಮ ಸ್ವಾಗತ ಭಾಷಣದಲ್ಲಿ ರಾಜೇಂದ್ರ ಶ್ರೀಗಳು ರಾಜೇಂದ್ರ ಶ್ರೀಗಳು ಅಂದು ನೆಟ್ಟ ಬೀಜ ಇಂದು ಹೆಮ್ಮರವಾಗಿ ಬೆಳೆದು ಎಲ್ಲರನ್ನೂ ಪೋಷಿಸುತ್ತಾ ಇದೆ. 350 ಕ್ಕಿಂತ ಹೆಚ್ಚು ಶೈಕ್ಷಣಿಕ ವಸತಿಯುತ ಸಂಸ್ಥೆಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕೋಟ್ಯಾಂತರ ಮಕ್ಕಳ ಬದುಕನ್ನ ಉಜ್ವಲವಾಗಿ ರೂಪಿಸಿವೆ ಎಂದರು.

ಗುಂಡ್ಲುಪೇಟೆ ಶಾಸಕ ಎಚ್ ಎಂ ಗಣೇಶ್ ಪ್ರಸಾದ್ ರವರು ಉದ್ಘಾಟನಾ ನುಡಿಯನ್ನು ನುಡಿಯುತ್ತಾ ಅಂದಿನ ರಾಜೇಂದ್ರ ಶ್ರೀಗಳಂತೆ ಇಂದಿನ ಸುತ್ತೂರು ಶ್ರೀಗಳು ಸಹ ಯಾವುದೇ ಜಾತಿ ಮತ ಪಂಥ ಎಂಬ ಭೇದವಿಲ್ಲದೆ ಅನೇಕರಿಗೆ ಅನ್ನ ವಸತಿ ಕೊಟ್ಟು ಒಂದು ಒಳ್ಳೆಯ ಸಮ ಸಮಾಜಕ್ಕೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಹನೂರು ಕ್ಷೇತ್ರದ ಮಾಜಿ ಶಾಸಕಿ ಶ್ರೀಮತಿ ಪರಿಮಳ ನಾಗಪ್ಪ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಮಹಿಳೆಯರಿಗಾಗಿ ವಿದ್ಯಾ ಕೇಂದ್ರಗಳನ್ನು, ವಸತಿ ಕೇಂದ್ರಗಳನ್ನು ತೆರೆದು ಮಹಿಳೆಯರು ವಿದ್ಯಾವಂತರಾಗಿ ಸಬಲರಾಗುವಂತೆ ಶ್ರೀಗಳು ಮಾಡಿದರು ಎಂದರು.

ಶ್ರೀ ಚನ್ನಬಸವ ಸ್ವಾಮಿಗಳು ಶ್ರೀ ಸಿದ್ದ ಮಲ್ಲೇಶ್ವರ ವಿರಕ್ತಮಠ ಚಾಮರಾಜನಗರ ದಿವ್ಯ ಸಮ್ಮುಖ ವಹಿಸಿ ಗುರುಗಳು ಹಾಕಿಕೊಟ್ಟ ವಾಣಿಯಂತೆ ನಾವೆಲ್ಲರೂ ನಡೆಯೋಣ ನಮ್ಮ ಬದುಕನ್ನ ಕಟ್ಟಿಕೊಳ್ಳೋಣ ಎಂದು ತಿಳಿಸಿದರು.

ಪ್ರಾರ್ಥನೆಯನ್ನು ಸವಿತಾ ನಾಗೇಶ್ ಮತ್ತು ಪುಷ್ಪ ದೊರೆಸ್ವಾಮಿ ನಡೆಸಿಕೊಟ್ಟರೆ, ನಿರೂಪಣೆಯನ್ನು ಅಕ್ಕ ಶೈಲಜಾ ಮಹದೇವಸ್ವಾಮಿ ಯವರು ನಡೆಸಿಕೊಟ್ಟರು.
.

Share This Article
2 Comments

Leave a Reply

Your email address will not be published. Required fields are marked *