ದಾವಣಗೆರೆ
ನಗರದ ಎಂಸಿಸಿ ಎ ಬ್ಲಾಕ್ ನಲ್ಲಿರುವ ಬಸವ ಮಂಟಪದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಇವರ ಸಹಯೋಗದಲ್ಲಿ ವಿರಕ್ತಮಠದ ಪೂಜ್ಯ ಶ್ರೀ ಬಸವಪ್ರಭು ಸ್ವಾಮೀಜಿಯವರ ಸಾನಿಧ್ಯದಲ್ಲಿ ಜಗದ್ಗುರು ರಾಜೇಂದ್ರ ಮಹಾಸ್ವಾಮಿಗಳ 110ನೆಯ ಜಯಂತೋತ್ಸವ, ಸಂಸ್ಥಾಪಕರ ದಿನಾಚರಣೆ ನಡೆಯಿತು.
ಲಿಂ. ಕೆ. ಜಯಮ್ಮ ಸಿದ್ದನಗೌಡ ಉಜ್ಜಯಿನಿ ಅವರ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ಜೆ. ಸಿದ್ದನಗೌಡ, ನಿವೃತ್ತ ಪ್ರಾಂಶುಪಾಲರು ಇವರು ದತ್ತಿ ದಾನಿಗಳಾಗಿದ್ದು ಕುಟುಂಬ ಪರಿವಾರದೊಂದಿಗೆ ಆಗಮಿಸಿದ್ದರು ಹಾಗೂ ದಾಸೋಹದ ಪ್ರಾಯೋಜಕರಾಗಿದ್ದರು.
ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾದ ಶರಣ ಹೆಚ್. ಕೆ. ಲಿಂಗರಾಜ್ ಅವರ ಸುತ್ತೂರು ಶ್ರೀ ರಾಜೇಂದ್ರ ಮಹಾಸ್ವಾಮಿಗಳ ಬಗ್ಗೆ ಬರೆದಿರುವ ‘ಭುವನದ ಭಾಗ್ಯ’ ಕಿರುಹೊತ್ತಿಗೆ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಾಮದೇವಪ್ಪನವರು, “ಪುಸ್ತಕಗಳನ್ನು ಜನರು ಓದಬೇಕು. ಲಿಂಗರಾಜ ಅವರು ಅತ್ಯಲ್ಪ ಕಾಲದಲ್ಲಿಯೇ ಸ್ವಾಮೀಜಿಯವರ ಬಗ್ಗೆ ಪುಸ್ತಕ ಬರೆದಿರುವುದು ಶ್ಲಾಘನೀಯ ಹಾಗೂ ಉಚಿತವಾಗಿ ಪುಸ್ತಕವನ್ನು ಕೊಡುತ್ತಿದ್ದಾರೆ, ಇದು ಅವರ ದೊಡ್ಡ ಗುಣ ಹಾಗೂ ಸುತ್ತೂರಿನ ಶ್ರೀ ರಾಜೇಂದ್ರ ಸ್ವಾಮೀಜಿಯವರ ಜೀವನ ಚರಿತ್ರೆ ಎಲ್ಲರಿಗೂ ಆದರ್ಶ” ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಕೆ. ಬಿ. ಪರಮೇಶ್ವರಪ್ಪ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಗಳು ಶರಣ ಸಂಸ್ಕೃತಿ ಪ್ರಚಾರ ವಚನ ಸಾಹಿತ್ಯ ಪ್ರಚಾರಕಾರ್ಯದಲ್ಲಿ ಹೇಗೆ ತೊಡಗಿಕೊಂಡಿವೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕದಳಿ ವೇದಿಕೆಯ ಅಧ್ಯಕ್ಷರಾದ ಶರಣೆ ಮಮತಾ ನಾಗರಾಜ್ ಅವರು, “ನಾವು ಬೆಳೆಯ ಜೊತೆಯಲ್ಲಿ ಬೆಳೆಯುವ ಬೇಡದ ಕಳೆಯನ್ನು ಕೀಳುವಂತೆ ನಮ್ಮ ಮನಸ್ಸಿಂದ ಕೆಟ್ಟ ಯೋಚನೆಗಳನ್ನು ಕಿತ್ತೊಗೆಯಬೇಕು ಹಾಗೂ ಸಮಾಜದಲ್ಲೂ ಕೆಟ್ಟವರನ್ನು ವಿರೋಧಿಸುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ಅದಕ್ಕಾಗಿ ವಚನಗಳನ್ನು ಕಲಿಯಬೇಕು ಹಾಗೂ ಇನ್ನೊಬ್ಬರಿಗೂ ಕಲಿಸಬೇಕು” ಎಂದರು.

ಸಾನಿಧ್ಯ ವಹಿಸಿದ್ದ ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿಗಳು, “ಮರ ಹೇಗೆ ನೆರಳು ಹಣ್ಣು ಕೊಟ್ಟು ಉಪಕಾರ ಮಾಡುತ್ತದೆಯೋ ಹಾಗೆ ಮಠಾಧೀಶರು ಜನರಿಗೆ ಉಪಯೋಗ ಮಾಡುತ್ತಿದ್ದಾರೆ. ಮಠಗಳು ಅನ್ನದಾಸೋಹ ಅಕ್ಷರದಾಸೋಹ ವಸತಿ ಸೌಕರ್ಯ ಎಲ್ಲವನ್ನು ಮಾಡುತ್ತಾ ಬಂದಿದ್ದು ಉತ್ತಮ ಸಮಾಜ ಸೇವೆ ಮಾಡುತ್ತಿದ್ದಾರೆ” ಎಂದು ತಮ್ಮ ಆಶೀರ್ವಚನದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರುದ್ರೇಗೌಡರು, ಪರಮೇಶ್ವರಪ್ಪ ಸಿರಿಗೆರೆ, ಕದಳಿ ಮಹಿಳಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷರಾದ ನಿರ್ಮಲ ಶಿವಕುಮಾರ, ಚನ್ನಗಿರಿ ತಾಲೂಕು ಘಟಕದ ಅಧ್ಯಕ್ಷರಾದ ಪ್ರೇಮ ಸೋಮಶೇಖರ ಉಪಸ್ಥಿತರಿದ್ದರು.
ಲಿಂಗರಾಜ ಕಂಬತ್ತಳ್ಳಿ ಉಪಾಧ್ಯಕ್ಷರು ಜಿಲ್ಲಾ ಯುವ ಘಟಕ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕದಳಿ ಮಹಿಳಾ ವೇದಿಕೆ ಸದಸ್ಯರು ವಚನ ಗಾಯನ ನಡೆಸಿ ವಚನ ಪ್ರಾರ್ಥನೆ ಸಲ್ಲಿಸಿದರು. ಶರಣ ಶಿವಪ್ರಸಾದ್ ಕರ್ಜಗಿ ಸ್ವಾಗತಿಸಿದರು. ಶರಣ ನಾರಾಯಣರಾವ್ ಸಿಂಪಿಗೆ ಕಾರ್ಯಕ್ರಮದಲ್ಲಿ ಭಾಗಿಯಾದವರನ್ನೆಲ್ಲರನ್ನು ವಂದಿಸಿದರು.