ಗದಗ
“ಭಾರತದ ಇತಿಹಾಸದಲ್ಲಿ ಮರೆಯಲಾರದ ಅನೇಕ ನೇತಾರರು ಆಗಿಹೋಗಿದ್ದಾರೆ. ಭಾರತದ ಸ್ವಾತಂತ್ರ್ಯಕ್ಕಾಗಿ 1857ಕ್ಕಿಂತ ಮೊದಲೇ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರೊಡನೆ ಹೋರಾಡಿದಳು. ಅವರ ಶೌರ್ಯ ಪರಾಕ್ರಮವನ್ನು, ಜಗ ಮೆಚ್ಚಿದೆ. ಪಶು ಪಕ್ಷಿ ಕೀಟ ಎಲ್ಲವೂ ಸ್ವಾತಂತ್ರ್ಯ ಬಯಸುತ್ತವೆ. ಆದ್ದರಿಂದ ಸ್ವಾತಂತ್ರ್ಯ ಅಮೂಲ್ಯವಾದದ್ದು” ಎಂದು ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2759ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಡಾ. ತೋಂಟದಾರ್ಯ ಸಿದ್ದರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
“ಭಾರತದಲ್ಲಿ ಅನೇಕರು ಹುತಾತ್ಮರಾಗಿದ್ದಾರೆ, ಅವರ ಬಲಿದಾನವೇ ನಮ್ಮ ಸ್ವಾತಂತ್ರ್ಯ. ಸ್ವತಂತ್ರ ರಾಷ್ಟ್ರದಲ್ಲಿ ನಾವು ಇದ್ದು, ಪ್ರಗತಿಯನ್ನು ಸಾಧಿಸಿದ್ದೇವೆ. ಕೃಷಿ, ಸಾಹಿತ್ಯ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದೇವೆ. ಆದರೆ ಸ್ವಾತಂತ್ರ್ಯ ಬಂದ ಮೇಲೆ ನಮ್ಮ ಜವಾಬ್ದಾರಿ ಅರಿಯಬೇಕಾಗಿದೆ. ಸ್ವಾತಂತ್ರ್ಯ ಅನುಭವಿಸಿದರೂ ಅದು ಮತ್ತೊಬ್ಬರಿಗೆ ಕೇಡು ಮಾಡುವಂತಿರಬಾರದು ಎಂದು ಬಸವಣ್ಣನವರು ಅಂದೇ ಹೇಳಿದ್ದಾರೆ. ಸ್ವಾತಂತ್ರ ಸ್ವೇಚ್ಛಾಚಾರವಾಗಬಾರದು. ಸ್ವಚ್ಚ ಮನಸ್ಸಿನಿಂದ ದೇಶ ಪ್ರೇಮ ಹೊಂದಬೇಕು” ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಸೊರಟೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ವಿಜ್ಞಾನ ಶಿಕ್ಷಕಿಯರಾದ ಪ್ರಮೀಳಾ ನಾಯರ್ ಅವರು, “ವೀರರ ನೆನಪು, ಪ್ರಗತಿಯ ಹೆಜ್ಜೆ, ನಮ್ಮ ಸ್ವಾತಂತ್ರ್ಯ ಈ ವಿಷಯ ಕುರಿತು ಮಾತನಾಡುತ್ತಾ, ಸ್ವಾತಂತ್ರಕ್ಕಾಗಿ ಹೋರಾಡಿದ ವೀರರ ನೆನಪು ಮಾಡಿಕೊಳ್ಳೋಣ. ಸಾವಿರಾರು ಜನ ವೀರರು ಮರಣವನ್ನಪ್ಪಿದ ಪ್ರತಿಫಲ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಪರಕೀಯರ ಗುಲಾಮತನ ಹೋಗಿ, ನಮ್ಮ ಭಾರತ, ಸ್ವತಂತ್ರ ಭಾರತ ಎಂದು ಹೆಮ್ಮೆಯಿಂದ ಹೇಳುವ ಸಮಯವಿದು. ಬಡತನ ನಿವಾರಣೆ, ಹಸಿರುಕ್ರಾಂತಿ, ಶ್ವೇತ ಕ್ರಾಂತಿ, ವಿಜ್ಞಾನ ತಂತ್ರಜ್ಞಾದಲ್ಲಿ ಸಾಧನೆ, ಆರ್ಯಭಟ ಉಪಗ್ರಹ ಉಡಾವಣೆ, 14 ಬ್ಯಾಂಕುಗಳು ರಾಷ್ಟ್ರೀಕರಣ ವಾದವು” ಎಂದರು.
“ಸುನೀತಾ ವಿಲಿಯಮ್ಸ್ 180 ದಿನ ಬಾಹ್ಯಾಕಾಶದಲ್ಲಿದ್ದು ಸಾಧನೆ ಮಾಡಿದ್ದು ಸಾಹಸದ ಕತೆ ಹಾಗೂ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಲಗ್ಗೆ ಇಟ್ಟಾಯಿತು. ಹೆದ್ದಾರಿ ನೀತಿ ಜಾರಿ ಮಾಡಿ ಹೆದ್ದಾರಿಗಳ ನಿರ್ಮಾಣದಲ್ಲಿ ಸಾಧನೆ ಮಾಡಿದೆ”.
“ಸ್ವಾತಂತ್ರ್ಯದ ನಂತರ ದೇಶ ಬೆಳೆಯಬೇಕು, 1991ರಲ್ಲೇ ಹೊಸ ಆರ್ಥಿಕ ನೀತಿಯನ್ನು ಜಾರಿ ಮಾಡಿದೆ. ಆರ್ಥಿಕವಾಗಿ ಬಲಿಷ್ಟರಾಗುವಂತ ಪ್ರಬಲ ರಾಷ್ಟ್ರಗಳ ಸಾಲಿಗೆ ಸೇರುತ್ತಿದೆ. ಸುಭಾಸಚಂದ್ರ ಭೋಸರಂತ ಮಹಾ ನಾಯಕಯರ ಜೀವ ಉಳಿಸಿದ ಮೀರಾಳ ಹೆತ್ತ ಭೂಮಿ ನಮ್ಮ ಭಾರತವೆಂದು ಹೆಮ್ಮೆಯಿಂದ ಹೇಳಬಹುದು” ಎಂದು ಹಲವು ದೃಷ್ಟಾಂತಗಳ ಮೂಲಕ ತುಂಬಾ ಅರ್ಥಪೂರ್ಣವಾಗಿ ತಿಳಿಸಿದರು.
ಶ್ರಾವಣ ಮಾಸದ ಅಂಗವಾಗಿ ಶಿಕ್ಷಕಿ ಶಾಂತಲಾ ಹಂಚಿನಾಳ ವಚನ ಚಿಂತನ ಹಾಗೂ ಪ್ರವಚನವನ್ನು ತುಂಬಾ ಸುಂದರವಾಗಿ ನಡೆಸಿಕೊ಼ಟ್ಟರು. ವಚನ ಸಂಗೀತವನ್ನು ಗುರುನಾಥ ಸುತಾರ ಹಾಗೂ ರೇವಣಸಿದ್ದಯ್ಯ ಮರಿದೇವರಮಠ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಕುಮಾರಿ ತನುಷಾ ಚನ್ನಪ್ಪ ಮುನವಳ್ಳಿ, ವಚನ ಚಿಂತನವನ್ನು ಶ್ರೇಯಾ ನಾಗರಾಜ ಮುನವಳ್ಳಿ ಪ್ರಸ್ತುತ ಪಡಿಸಿದರು.

ದಾಸೋಹ ಸೇವೆಯನ್ನು ಶರಣ ಚನ್ನಬಸಯ್ಯ ಕನಕೇರಿಮಠ ಮತ್ತು ಕುಟುಂಬ ವರ್ಗದವರು ಲಿಂ. ಎಸ್. ಎಸ್. ಮುನವಳ್ಳಿ ಇವರ ಸ್ಮರಣಾರ್ಥ ಚಂದ್ರಕಲಾ ಮುನವಳ್ಳಿ ಹಾಗೂ ಮಕ್ಕಳು ಮತ್ತು ಶರಣ ರೇವಣಸಿದ್ದಯ್ಯ ಮರಿದೇವರಮಠ ಮುಂಡರಗಿ ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜೀಹಾಳ ಕಾರ್ಯಕ್ರಮ ನಿರೂಪಿಸಿದರು.