ಹುನಗುಂದ:
ತಾಲ್ಲೂಕಿನ ಕೂಡಲಸಂಗಮ ಕ್ರಾಸ್ ಹತ್ತಿರ ಹೂವನೂರು ಗ್ರಾಮದಲ್ಲಿ ಜನವರಿ 13 ಮತ್ತು 14 ರಂದು ನಾಲ್ಕನೇ ಸ್ವಾಭಿಮಾನಿ ಶರಣ ಮೇಳ ನಡೆಯಲಿದೆ ಎಂದು ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜನವರಿ 13 ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಚನ್ನಬಸವಾನಂದ ಸ್ವಾಮೀಜಿ, ಸಾನಿಧ್ಯ ವಹಿಸುವರು. ಬೀದರ ಬಸವ ಮಂಟಪದ ಮಾತೆ ಸತ್ಯಾದೇವಿ, ಚಿಕ್ಕಮಗಳೂರು ವಿಶ್ವಧರ್ಮ ಪೀಠದ ಜಯಬಸವಾನಂದ ಸ್ವಾಮೀಜಿ ಉಪಸ್ಥಿತರಿರುವರು.
ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ ಉದ್ಘಾಟಿಸುವರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ 2026 ರ ಗೋಡೆ ದಿನದರ್ಶಿಕೆ ಬಿಡುಗಡೆ ಮಾಡಲಿದ್ದಾರೆ. ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಷಟಸ್ಥಲ ಧ್ವಜಾರೋಹಣ ನೇರವೇರಿಸುವರು. ಮಹಾರಾಷ್ಟ್ರದ ಲಿಂಗಾಯತ ಸಮಾಜದ ಮುಖಂಡ ಮಿಲಿಂದ್ ಸಾಕರ್ಪೆ ಜೇಬಿನ ದಿನದರ್ಶಿಕೆ ಆವೃತ್ತಿ ಹಾಗೂ ಬೀದರ ವಿ.ವಿ. ಸಿಂಡಿಕೇಟ್ ಸದಸ್ಯ ನಾಗಭೂಷಣ ಕಮಠಾಣೆ “ಲಿಂಗಾಯತ ಧರ್ಮ ಸಾರ” ಕೃತಿ ಲೋಕಾರ್ಪಣೆ ಮಾಡುವರು. ರಾಷ್ಟ್ರೀಯ ಬಸವ ದಳ ಚಿಕ್ಕಮಗಳೂರಿನ ಅಧ್ಯಕ್ಷರ ಬಾಣೂರು ಚನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂದು ಸಂಜೆ 6 ಗಂಟೆಗೆ ಅನುಭಾವ ಗೋಷ್ಠಿಯನ್ನು ಬೀದರ ವಿಶ್ವವಿದ್ಯಾಲಯದ ಕುಲಪತಿ ಬಿ.ಎಸ್. ಬಿರಾದಾರ ಉದ್ಘಾಟಿಸಲಿದ್ದಾರೆ. ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸಲಿದ್ದಾರೆ. ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಧ್ವಜಾರೋಹಣ ನೆರವೇರಿಸುವರು. ರೈಲ್ವೆ ಇಲಾಖೆ ಇಂಜಿನಿಯರ್ ಸಚ್ಚಿದಾನಂದ ಚಟ್ನಳ್ಳಿ ಹಾಗೂ ನಿವೃತ್ತ ಕೆಎಎಸ್ ಅಧಿಕಾರಿ ಎಸ್. ದಿವಾಕರ ಅನುಭಾವ ನೀಡುವರು.
ಜನವರಿ 14 ರಂದು ಬೆಳಿಗ್ಗೆ 10 ಗಂಟೆಗೆ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ ಜರುಗಲಿದ್ದು, ನಿರಾಣಿ ಸಮೂಹ ಸಂಸ್ಥೆಯ ಕಮಲಮ್ಮ ನಿರಾಣಿ ಅವರು ಧ್ವಜಾರೋಹಣ ನರವೇರಿಸುವರು. ಸರ್ವ ಶ್ರೀಗಳಿಂದ ಉದ್ಘಾಟನೆ ನೆರವೇರಲಿದೆ. ನಂತರ ಸಮುದಾಯ ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗ ಪೂಜೆ, ವಚನ ಪಠಣ, ಶರಣ ವೃತಧಾರಿಗಳಿಗೆ ಆಶೀರ್ವಾದ ನಡೆಯಲಿದೆ.
ಕರ್ನಾಟಕ, ಮಹಾರಾಷ್ಟ್ರ, ಹುನಗುಂದ ಕ್ಷೇತ್ರದ ಹಲವು ಕಡೆಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಶರಣರು ಪಾಲ್ಗೊಳ್ಳಲಿದ್ದಾರೆ ಎಂದು ಸ್ವಾಭಿಮಾನಿ ಶರಣಮೇಳ ಉತ್ಸವ ಸಮಿತಿ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
