ಗದಗ
ಸ್ವಾಮಿ ವಿವೇಕಾನಂದರ ಸಂದೇಶಗಳು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದವು. ಅವರ ಚಿಂತನೆ, ಸಂದೇಶಗಳು ಪ್ರಸ್ತುತ ಸಮಾಜಕ್ಕೆ, ಯುವಕರಿಗೆ, ಜನಾಂಗಕ್ಕೆ ದಾರಿದೀಪ ಎಂದು ಪೂಜ್ಯ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೨೮ ನೇ ಶಿವಾನುಭವದ ಸಮ್ಮುಖ ವಹಿಸಿ ಮಾತನಾಡಿದ ಶ್ರೀಗಳು, ಯುವಜನತೆಗೆ ಸಂಸ್ಕಾರ ಸಂಸ್ಕೃತಿ, ಆಚಾರ ವಿಚಾರ ಬೇಕು. ಯುವಶಕ್ತಿಯ ಸದ್ಬಳಕೆಯಾಗಬೇಕು. ಯುವಶಕ್ತಿ ದೇಶದ ಮಹಾನ್ ಶಕ್ತಿ ಎಂದರಿತು ವಿವೇಕಾನಂದರು ಭಾರತೀಯ ಯುವ ಆತ್ಮಗಳಲ್ಲಿ ಸ್ಪೂರ್ತಿಯನ್ನು ತುಂಬಿದರು.
ಭಾರತೀಯ ಸಂಸ್ಕೃತಿಯನ್ನು ಸೂರ್ಯನಂತೆ ಜಗತ್ತಿಗೆ ಬೆಳಗಿದರು. ಸ್ವಾಮಿ ವಿವೇಕಾನಂದರು ಕೇವಲ ವ್ಯಕ್ತಿಯಲ್ಲ ಅವರು ಒಂದು ಶಾಶ್ವತ ಪ್ರಜ್ಞೆ. ಅವರ ಹೆಸರು ಆಧ್ಯಾತ್ಮಿಕತೆಯ ಮೂಲಕ ಅನನ್ಯ ಆದರ್ಶ ಮತ್ತು ಜೀವನ ವಿಧಾನವನ್ನು ಸಾಧಿಸುವ ಪವಿತ್ರ ಸಂಕೇತವಾಗಿ ಪ್ರತಿನಿಧಿಸುತ್ತದೆ. ಅವರು ಭಾರತದ ಯುವಕರನ್ನು ಪ್ರೇರೇಪಿಸಿದರು. ಅಂತೆಯೇ ಅವರ ಜನ್ಮದಿನವನ್ನು ಯುವ ದಿನವನ್ನಾಗಿ ಆಚರಿಸುತ್ತೇವೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಅವರು ಸ್ವಾಮಿ ವಿವೇಕಾನಂದರು ಭಾರತದ ಹೆಮ್ಮೆಯ ವೀರ ಸಂನ್ಯಾಸಿ. ಅವರ ಸಂದೇಶಗಳು ಯುವಜನರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದವು. ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲಬೇಡಿ ಎಂಬ ಅದ್ಬುತ ಸಂದೇಶ ಸಾರಿದರು ಎಂದರು. ಮಾನವೀಯತೆಯ ಔದಾರ್ಯ, ಶುದ್ದತೆಯಲ್ಲಿ ಶಾಂತತೆಯಲ್ಲಿ ಜಗತ್ತಿನಲ್ಲಿಯೇ ಅತ್ಯುನ್ನತ ಸ್ಥಾನ ಪಡೆದ ಭೂಮಿ ಭಾರತವೆಂದು ಜಗತ್ತಿಗೆ ಡಿಂಡಿಮ ಹೊಡೆದು ಸಾರಿದ ವೀರ ಸಂನ್ಯಾಸಿ ವಿವೇಕಾನಂದರು. ವಿವೇಕಾನಂದರು ಯುವಕರ ಮೇಲೆ ಅಪಾರ ನಂಬಿಕೆ ಹೊಂದಿದ್ದರು. ಅವರು ಸಿಂಹಗಳಂತೆ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಮಹಾತ್ಮಾಗಾಂಧೀಜಿ, ಲೋಕಮಾನ್ಯ ತಿಲಕರು, ಹಾಗೂ ಸುಭಾಷ್ ಚಂದ್ರ ಬೋಸ್ ಅಂತವರು ಹಾಗೂ ಇಡೀ ಜಗತ್ತು ಅವರ ಪ್ರಭಾವಕ್ಕೆ ಒಳಗಾಗಿತ್ತು. ಎಂದು ಅನೇಕ ದೃಷ್ಟಾಂತಗಳ ಮೂಲಕ ಎಳೆಎಳೆಯಾಗಿ ತಿಳಿಸಿದರು.
ಅಥಣಿ ಮೋಟಗಿ ಮಠದಿಂದ ಸಮಾಜ ಸೇವಾ ಭೂಷಣ ಪ್ರಶಸ್ತಿಗೆ ಭಾಜನರಾದ ಎಸ್. ಎಸ್. ಪಟ್ಟಣಶೆಟ್ಟಿ ಅವರನ್ನು ಸಂಮಾನಿಸಲಾಯಿತು. ಸಂಮಾನೋತ್ತರವಾಗಿ ಮಾತನಾಡುತ್ತಾ ಎಸ್.ಎಸ್. ಪಟ್ಟಣಶೆಟ್ಟಿಯವರು ಹೈಸ್ಕೂಲ್ ವಿದ್ಯಾಬ್ಯಾಸ ಮಾಡುವುದರಿಂದ ಹಿಡಿದು ೧೯೭೪ ರಿಂದ ಇಲ್ಲಿಯವರೆಗೆ ಮಠದ ಸಂಪೂರ್ಣ ಚಿತ್ರಣವನ್ನು ತಮ್ಮ ಆ ದಿನಗಳ ಮಠದ ಸ್ಥಿತಿ ಮತ್ತು ಈಗಿನ ಸ್ಥಿತಿಯ ಬಗ್ಗೆ ಪೂಜ್ಯ ಸಿದ್ದಲಿಂಗ ಶ್ರೀಗಳ ಮಠದ ಅಭಿವೃದ್ಧಿ, ಪುಸ್ತಕ, ಪರಿಸರ, ಕನ್ನಡ ಪ್ರೇಮ ಇವುಗಳ ಬಗ್ಗೆ ತುಂಬಾ ಸುಂದರವಾಗಿ ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಜೀವಮಾನದ ಸಾಧನೆಗಾಗಿ ಪ್ರಶಸ್ತಿಯನ್ನು ಪಡೆದ ನಿಮಿತ್ಯ ಶ್ರೀ ಹನುಮಾನ್ ಸಿಂಗ್ ಜಮಾದಾರ ವರದಿಗಾರರು ನವೋದಯ ದಿನಪತ್ರಿಕೆ, ಗದಗ ಅವರನ್ನು ಸಂಮಾನ ಮಾಡಲಾಯಿತು.
ಜಮಾದಾರ ಮಾತನಾಡುತ್ತಾ, ಪೂಜ್ಯ ಸಿದ್ದಲಿಂಗ ಸ್ವಾಮೀಜಿಗಳ ಒಡನಾಟದ ಬಗ್ಗೆ, ಅವರು ಸ್ಪೂರ್ತಿ ತುಂಬುವುದುನ್ನು ನೆನಪಿಸಿಕೊಂಡರು.
ಹುಬ್ಬಳ್ಳಿಯ ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷರಾದ ಗಂಗಾಧರ ಗಾಣಿಗೇರ ಅವರನ್ನು ಸಂಮಾನ ಮಾಡಲಾಯಿತು.
ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಸೋಮಶೇಖರ ಶಂ. ಹಿರೇಮಠ ಹಾಗೂ ವಚನ ಚಿಂತನವನ್ನು ಆದರ್ಶ ಸಂ. ಹೂಗಾರ ಇವರುಗಳು ನೆಡೆಸಿಕೊಟ್ಟರು.
ದಾಸೋಹ ಸೇವೆಯನ್ನು ಗುರುಸಿದ್ದಪ್ಪ ಬುಳ್ಳಾನವರ ಅಡ್ವೋಕೇಟ್ ಕೇಶ್ವಾಪೂರ ಸರ್ಕಲ್ ಹುಬ್ಬಳ್ಳಿ ಇವರು ವಹಿಸಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷರಾದ ಡಾ. ಉಮೇಶ ಪುರದ, ವಿದ್ಯಾ ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಭಕ್ತರು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸಂಮಾನಿತರನ್ನು ಪರಿಚಯಿಸಿದರು. ಸ್ವಾಗತವನ್ನು ಸಮಿತಿ ಸಹ ಚೇರ್ಮನ್ ಶಿವಾನಂದ ಹೊಂಬಳ ಮಾಡಿದರು. ವಿದ್ಯಾ ಗಂಜಿಹಾಳ ನಿರೂಪಿಸಿದರು.