ಜಮಖಂಡಿ
ಅಧಿಕಾರ, ಹಣ ಇದ್ದಾಗ ಎಲ್ಲರೂ ಬರುತ್ತಾರೆ. ಆದರೆ, ಕಷ್ಟದಲ್ಲಿದ್ದಾಗ ಯಾರಿಗೂ ಯಾರು ಇರುವುದಿಲ್ಲ. ನಮ್ಮ ಕಷ್ಟಗಳನ್ನು ಯಾರೂ ನಿವಾರಿಸುವುದಿಲ್ಲ. ನಮ್ಮ ಏಳಿಗೆಗೆ ನಾವೇ ಶಿಲ್ಪಿಯಾಗಬೇಕು ಎಂದು ಓಲೆಮಠದ ಪೂಜ್ಯ ಆನಂದ ದೇವರು ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ದಿನಕ್ಕೊಂದು ಓಣಿಯಲ್ಲಿ ವಚನ ಶ್ರಾವಣ ಅಂಗವಾಗಿ ಇಲ್ಲಿನ ವಿಠ್ಠಲ ಮಂದಿರ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಕ್ತರು ಮಠಮಾನ್ಯಗಳಿಗೆ ಕೊಡುವ ಕಾಣಿಕೆಯನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸಬೇಕು. ಸದ್ಭಕ್ತರು ಭಕ್ತಿಯಿಂದ ಕೊಡುವ ಕಾಣಿಕೆಯನ್ನು ಸ್ವಾರ್ಥಕ್ಕೆ ಬಳಸಿಕೊಂಡರೆ ಮಠಾಧೀಶರು ಹಗಲು ವೇಷಧಾರಿಗಳು ಎನಿಸುತ್ತಾರೆ. ಅಂತಹ ಮಠಾಧೀಶರಿಗೆ ನರಕ ತಪ್ಪಿದ್ದಲ್ಲ. ಇದನ್ನೆ ಬಸವ ಧರ್ಮ ಕಲಿಸುತ್ತದೆ ಎಂದರು.
ಸಾಹಿತಿ ಪ್ರೊ. ಬಸವರಾಜ ಕಡ್ಡಿ ಮಾತನಾಡಿ, ಗ್ರಹಬಲ ನಮ್ಮನ್ನು ಕಾಪಾಡುವುದಿಲ್ಲ. ನಮ್ಮ ಆತ್ಮಬಲ ನಮ್ಮನ್ನು ಕಾಪಾಡುತ್ತದೆ. ಸಂಬಂಧಗಳು ಬಹಳ ನಶ್ವರ. ಇಡೀ ಜಗತ್ತಿನ ಬಂಧು ಪರಮಾತ್ಮ. ಸದಾಚಾರಿಗಳನ್ನು ಪರಮಾತ್ಮ ರಕ್ಷಿಸಿ ಸಲುಹುತ್ತಾನೆ. ಅದಕ್ಕಾಗಿ ನೈತಿಕತೆ ಎಂಬ ವಜ್ರದ ಕಿರೀಟ ನಮ್ಮದಾಗಬೇಕು ಎಂದರು.
ನಗರಸಭೆಯ ನೂತನ ಅಧ್ಯಕ್ಷ ಈಶ್ವರ ವಾಳೆನ್ನವರ ಸನ್ಮಾನಿಸಿದರು. ಧರ್ಮರಾಜ ಮಾನೆ, ಸುಭಾಸ ಚವ್ಹಾಣ, ಪರಶುರಾಮ ಚವ್ಹಾಣ, ಶರದ ಜಾಧವ, ನಗರಸಭೆ ಸದಸ್ಯ ಕಿರಣ ಪಿಸಾಳ, ಸುನೀಲ ಶಿಂಧೆ, ಗಣೇಶ ಅಸಗುಡೆ ಇದ್ದರು.
ಅರ್ಬನ್ ಬ್ಯಾಂಕ್ ನಿರ್ದೇಶಕ ಎ.ಆರ್. ಶಿಂಧೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ಸೂರ್ಯವಂಶಿ ನಿರೂಪಿಸಿದರು. ಸರಸ್ವತಿ ಸಬರದ(ಹೆಗಡಿ), ಗೋಪಾಲ ತುಳಜಾಪೂರ ಸಂಗೀತ ಸೇವೆ ಸಲ್ಲಿಸಿದರು.